ಯಾರೇ ಅಧ್ಯಕ್ಷರಾದರೂ ಬೆಂಬಲಿಸುವೆ

ಶಿವಮೊಗ್ಗ: ಪಕ್ಷದ ವರಿಷ್ಠರು ಯಾರಿಗೇ ಅಧ್ಯಕ್ಷ ಸ್ಥಾನ ನೀಡಿದರೂ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಬಿ.ಎಸ್.ಯಡಿಯೂರಪ್ಪ ವಿಧಾನಸಭೆ ಪ್ರತಿಪಕ್ಷದ ನಾಯಕರಾಗಿದ್ದು, ಮುಂದೆ ಸಿಎಂ ಆಗುವವರಿದ್ದಾರೆ. ಹಾಗಾಗಿ ಅವರಿಂದ ತೆರವಾಗುವ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಮರ್ಥರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಯಡಿಯೂರಪ್ಪ ಅವರ ಅವಧಿ ಜೂನ್​ಗೆ ಅಂತ್ಯಗೊಳ್ಳಲಿದ್ದು, ಪಕ್ಷ ಸಂಘಟನೆಗೆ ಒತ್ತು ನೀಡುವವರಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಗಲಿದೆ ಎಂದು ಹೇಳಿದರು.

ರಾಜ್ಯಾಧ್ಯಕ್ಷ ಹುದ್ದೆಯ ರೇಸ್​ನಲ್ಲಿ ನೀವಿದ್ದೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಸಂಘಟನೆ ವಹಿಸಿದ ಎಲ್ಲ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ. ಹಾಗಾಗಿ ಆ ಹುದ್ದೆಗೆ ಯಾರನ್ನೇ ಆಯ್ಕೆ ಮಾಡಿದರೂ ಬೆಂಬಲ ನೀಡುತ್ತೇನೆ ಎಂದರು.

ರಾಜಕೀಯ ಧ್ರುವೀಕರಣ:ಮೇ 23ರ ನಂತರ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಆಗಲಿದೆ. ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ 22 ಸ್ಥಾನ ಗೆಲ್ಲುತ್ತೇವೆ. ಅಲ್ಲದೆ ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭೆ ಉಪಚುನಾವಣೆಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಗೃಹ ಸಚಿವ ಎಂ.ಬಿ.ಪಾಟೀಲ್ ಮಾಧ್ಯಮಗಳ ಮೇಲೆ ದಬ್ಬಾಳಿಕೆ, ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದ್ದರೆ ತಕ್ಷಣ ಇವರಿಬ್ಬರೂ ಕ್ಷಮೆ ಕೇಳಬೇಕು. ಪ್ರತಿಕಾ ರಂಗಕ್ಕೆ ಎಚ್ಚರಿಕೆ ಕೊಡುತ್ತಿರುವ ಇಬ್ಬರ ಮೇಲೂ ರಾಜ್ಯಪಾಲರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕ್ಷಮೆ ಕೋರಿದ ಈಶ್ವರಪ್ಪ:ಕುಂದಗೋಳ ಉಪಚುನಾವಣೆ ಪ್ರಚಾರದ ವೇಳೆ ವಡ್ಡ ಪದ ಬಳಕೆ ಮಾಡಿರುವುದಕ್ಕೆ ಈಶ್ವರಪ್ಪ ಭೋಮಿ ಸಮಾಜದ ಕ್ಷಮೆ ಕೋರಿದ್ದಾರೆ. ಭೋವಿ ಸಮಾಜ ನೋಯಿಸುವ ಉದ್ದೇಶ ನನ್ನದಾಗಿರಲಿಲ್ಲ. ವಡ್ಡ ಎಂದರೆ ಗಡಸು, ಗಟ್ಟಿ ಎಂದರ್ಥದಲ್ಲಿ ಹೇಳಿದ್ದೇನೆ ಎಂದರು.