ಯಾರೇ ಅಡ್ಡ ಬಂದರೂ ಜೋಶಿ ಸೋಲಿಸಲಾಗದು

ಹುಬ್ಬಳ್ಳಿ:ದೇವರೇ ಅಡ್ಡ ಬಂದರೂ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಈ ಬಾರಿ ಸೋಲುವುದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ಗೋಕುಲ ಗಾರ್ಡನ್​ನಲ್ಲಿ ಬಿಜೆಪಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಜೋಶಿ ಅವರ ಅಧಿಕಾರಾವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರದ ಕಪ್ಪು ಚುಕ್ಕೆ ಇಲ್ಲ. ಜೋಶಿ ಅವರು ಹುಬ್ಬಳ್ಳಿ-ಧಾರವಾಡದ ಮೋದಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಅವರ ಮೇಲೆ ಎಫ್​ಐಆರ್ ದಾಖಲಾಗಿದೆ. ಇಂಥವರಿಗೆ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ರಕ್ಷಣೆ ನೀಡುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.

ಈ ಹಿಂದೆ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ ಜನರಿಗೆ ಸಂವಿಧಾನ ಬದ್ಧವಾದ ಕೊಡುಗೆ ನೀಡಿಲ್ಲ. ಮಹಿಳೆಯರಿಗೆ ಶೌಚಗೃಹ ಕಟ್ಟಿಸಿಕೊಡದ ಕಾಂಗ್ರೆಸ್, ಈಗ ಮಹಿಳೆಯರ ಹೆಸರಲ್ಲಿ ಮತ ಕೇಳುವುದಕ್ಕೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.

ಬಿಜೆಪಿ ಹಿಂದುಳಿದವರಿಗೆ ಸಂವಿಧಾನ ಬದ್ಧವಾದ ಕೊಡುಗೆ ನೀಡುವುದಕ್ಕೆ ಒಬಿಸಿ ಕಮಿಷನ್ ಮಸೂದೆ ಲೋಕಸಭೆಯಲ್ಲಿ ಪಾಸು ಮಾಡಿದರೆ, ಕಾಂಗ್ರೆಸ್ ರಾಜ್ಯಸಭೆಯಲ್ಲಿ ಅಡ್ಡಗಾಲು ಹಾಕಿತು. ಹೀಗಾಗಿ ಕಾಯ್ದೆ ಜಾರಿಯಲ್ಲಿ ವಿಳಂಬವಾಯಿತು. ಬಿಜೆಪಿ ಹಿಂದುಳಿದವರ ವಿರೋಧಿ ಎನ್ನುವ ಕಾಂಗ್ರೆಸ್ ಒಂದಾದರೂ ಉದಾಹರಣೆ ಕೊಡಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಆಡಳಿತದಲ್ಲಿ ಪ್ರಪಂಚದ ಮುಸ್ಲಿಂ ರಾಷ್ಟ್ರಗಳು ಭಾರತದ ವಿರೋಧಿಯಾಗಿದ್ದವು. ಮೋದಿ ಸರ್ಕಾರ ಬಂದ ಮೇಲೆ ಮೆಚ್ಚುಗೆ ಮಾತನಾಡುತ್ತಿದ್ದಾರೆ. 2025ರ ಹೊತ್ತಿಗೆ ದೇಶದ ಎಲ್ಲರಿಗೂ ಸೂರು ಕಲ್ಪಿಸಬೇಕೆಂಬ ಯೋಜನೆಯನ್ನು ಮೋದಿ ಅವರು ಹೊಂದಿದ್ದಾರೆ. ಎಲ್ಲ ಧರ್ಮಗಳನ್ನು ಗೌರವಿಸುವ ಮೋದಿ ಆಡಳಿತಕ್ಕೆ ಯುವ ಸಮೂಹ ಹೋದಲ್ಲಿ ಬಂದಲ್ಲಿ ಜೈಕಾರ ಹಾಕುತ್ತಿದೆ ಎಂದರು.

ಸುಳ್ಳಿಗೆ ಇನ್ನೊಂದು ಹೆಸರೇ ದೇವೇಗೌಡರು. ಈ ಬಾರಿ ಜೆಡಿಎಸ್ ಸೋಲುವುದು ಖಚಿತವಾಗಿದೆ. ಹೀಗಾಗಿ ಅವರ ಕುಟುಂಬ ಬರೀ ಕಣ್ಣೀರು ಹಾಕುತ್ತಿದೆ. ರಾಜ್ಯದಲ್ಲಿ ಜೆಡಿಎಸ್ 2 ಸೀಟು ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.

ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತನಾಡಿ, ಸಚಿವ ಎಂ.ಬಿ. ಪಾಟೀಲ ಅವರು ಕಾಂಗ್ರೆಸ್ ಹೈಕಮಾಂಡ್ ಸೋನಿಯಾಗಾಂಧಿ ಅವರಿಗೆ ಬರೆದಿರುವ ಪತ್ರ ಸುಳ್ಳು ಎಂದಾದರೆ ಕೂಡಲೆ ಈ ಕುರಿತು ತನಿಖೆ ನಡೆಸಬೇಕು. ಅವರೇ ಗೃಹ ಸಚಿವರಿದ್ದಾರೆ. ಅಧಿಕಾರ ಕೈಯಲ್ಲಿದ್ದರೂ ತನಿಖೆ ಏಕೆ ನಡೆಸಿಲ್ಲ ಎಂದು ಪ್ರಶ್ನಿಸಿದರು. ಎಂ.ಬಿ. ಪಾಟಿಲ ಅವರು ಜನರಿಗೆ ಸತ್ಯ ಹೇಳಬೇಕು. ಈ ಕುರಿತು ತನಿಖೆ ನಡೆಯುವುದು ಸೂಕ್ತ ಎಂದರು.

ಹಿಂದುಳಿದ ವರ್ಗಗಳ ಬಗ್ಗೆ ಕಾಂಗ್ರೆಸ್ ಮೊಸಳೆ ಕಣ್ಣೀರು ಹಾಕುತ್ತಿದೆ. ಕಾಂಗ್ರೆಸ್ ಹಿಂದುಳಿದ ಸಮಾಜದ ವ್ಯಕ್ತಿಗೆ ಉನ್ನತ ಸ್ಥಾನ ನೀಡಿಲ್ಲ. ಬಿಜೆಪಿ ಹಿಂದುಳಿದ ಸಮಾಜದ ನಾಯಕನಿಗೆ ಪ್ರಧಾನಿ ಪಟ್ಟ ನೀಡಿದೆ. ಮುಸ್ಲಿಂ ಸಮಾಜದ ವ್ಯಕ್ತಿಗೆ ರಾಷ್ಟ್ರಪತಿ ಸ್ಥಾನ ನೀಡಿದೆ ಎಂದರು.

ಎಚ್.ಡಿ. ದೇವೇಗೌಡ, ನೀಖಿಲ ಕುಮಾರಸ್ವಾಮಿ, ಪ್ರಜ್ವಲ ರೇವಣ್ಣ ಮೂವರೂ ಲೋಕಸಭಾ ಚುನಾವಣೆಯಲ್ಲಿ ಸೋಲುವುದು ಖಚಿತ. ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಪದೇಪದೆ ಅಳುತ್ತಿದ್ದಾರೆ ಎಂದು ಟೀಕಿಸಿದರು.

ಅಭ್ಯರ್ಥಿ ಪ್ರಲ್ಹಾದ ಜೋಶಿ ಮಾತನಾಡಿ, ಒಬಿಸಿ ಕಮಿಷನ್ ನೇಮಿಸಲು ಸೂಚನೆ ನೀಡಿದ್ದ ಅಂಬೇಡ್ಕರ್ ಮಾತಿಗೂ ಕಾಂಗ್ರೆಸ್ ಬೆಲೆ ಕೊಟ್ಟಿಲ್ಲ. ಹಿಂದುಳಿದ ವರ್ಗದ ಸಂವಿಧಾನ ಬದ್ಧ ಹಕ್ಕನ್ನು ಒದಗಿಸುವ ಮಸೂದೆಯನ್ನು ರಾಜ್ಯಸಭೆಯಲ್ಲಿ ತಿರಸ್ಕರಿಸುವ ಮೂಲಕ ಕಾಂಗ್ರೆಸ್ ತಾನು ದಲಿತರ ವಿರೋಧಿ ಎಂದು ತೋರಿಸಿಕೊಂಡಿದೆ ಎಂದರು.

ವಿ.ಪ. ಸದಸ್ಯ ಪ್ರದೀಪ ಶೆಟ್ಟರ್, ಮಾಜಿ ಶಾಸಕರಾದ ವೀರಭದ್ರಪ್ಪ ಹಾಲಹರವಿ, ಅಶೋಕ ಕಾಟವೆ, ಮುಖಂಡರಾದ ಮಾ.ನಾಗರಾಜ, ಶಿವು ಮೆಣಸಿನಕಾಯಿ, ಡಿ.ಕೆ. ಚೌವ್ಹಾಣ, ಮೇನಕಾ ಹುರಳಿ, ಮಲ್ಲಿಕಾರ್ಜುನ ಸಾಹುಕಾರ, ನಾಗೇಶ ಕಲಬುರ್ಗಿ, ಶಿವಾನಂದ ಮುತ್ತಣ್ಣವರ, ರಂಗಾ ಬದ್ದಿ ಹಾಗೂ ರವಿ ದಂಡಿನ, ಶಾಂತಣ್ಣ ಕಡಿವಾಳ, ಸಂದೀಪ ಬೂದಿಹಾಳ ಮತ್ತಿತರರು ವೇದಿಕೆಯಲ್ಲಿದ್ದರು.

Leave a Reply

Your email address will not be published. Required fields are marked *