ಮಹಾಲಿಂಗಪುರ: ಮಹಿಳೆಯರಿಗೆ ದುಡಿಯುವ ಕೌಶಲ ಕಲಿಸಿ ಸ್ವಾಭಿಮಾನದಿಂದ ಬದುಕುವ ಅವಕಾಶ ಕಲ್ಪಿಸುವುದೇ ನಿಜವಾದ ಸಮಾಜ ಸೇವೆ ಎಂದು ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಹೇಳಿದರು.
ಸ್ಥಳೀಯ ಬಸವನಗರದ ಸಮುದಾಯ ಭವನದಲ್ಲಿ ಸಿ.ಎಂ. ಹುರಕಡ್ಲಿ ೌಂಡೇಷನ್ ಹಾಗೂ ಐರಣಿ ಮಹಾಸಂಸ್ಥಾನ ಹೊಳೆಮಠ ಆಶ್ರಯದಲ್ಲಿ ಆಯೋಜಿಸಿದ್ದ ಸ್ವಯಂ ಉದ್ಯೋಗ ಉಚಿತ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ಸ್ವಯಂ ಉದ್ಯೋಗದಿಂದ ಮಹಿಳೆಯರಲ್ಲಿ ಸ್ವಾಭಿಮಾನ, ಸ್ವಾವಲಂಬನೆ, ಆತ್ಮವಿಶ್ವಾಸ ಮೂಡಿ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗುತ್ತದೆ. ದುಡಿಮೆಯ ಬೆನ್ನು ಹತ್ತಿದರೆ ನಿಮಗೆ ಅರಿವಿಲ್ಲದೆ ನೀವು ದೊಡ್ಡ ವ್ಯಕ್ತಿಗಳಾಗುತ್ತೀರಿ. ಕೌಶಲ ಯಾರೂ ಕದಿಯಲಾಗದ ಆಸ್ತಿ ಎಂದರು.
ಸ್ಫೂರ್ತಿ ಸಂಸ್ಥೆ ಅಧ್ಯಕ್ಷ ಗೂಳಪ್ಪ ಗೊಳಸಂಗಿ, ಹುರಕಡ್ಲಿ ೌಂಡೇಷನ್‌ನ ಚನ್ನಬಸು ಹುರಕಡ್ಲಿ, ತರಬೇತುದಾರ ಗುಂಡಪ್ಪ ಮಾತನಾಡಿ, ಹೆಣ್ಣುಮಕ್ಕಳು ಸ್ವಾವಲಂಬಿಯಾಗಬೇಕು ಎಂದರು. ಗಣ್ಯರಾದ ಹನಮಂತ ಶಿರೋಳ, ಶಿವಾನಂದ ಕೊಣ್ಣೂರ ಮಾತನಾಡಿದರು.
ಪುರಸಭೆಯ ನೂತನ ನಾಮನಿರ್ದೇಶಿತ ಸದಸ್ಯರಾದ ಬಸವರಾಜ ಕರೆಹೊನ್ನ, ಅನಂತನಾಗ ಬಂಡಿ, ಅಪ್ಪಾಸಾಬ ನಾಲಬಂದ, ಲಕ್ಕಪ್ಪ ಭಜಂತ್ರಿ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಯ ನೂತನ ನಾಮನಿರ್ದೇಶಿತ ಸದಸ್ಯರಾದ ಮಹಾಲಿಂಗಪ್ಪ ಮಾಳಿ, ಸಂಜು ಅಂಗಡಿ, ಮಾರುತಿ ಚನ್ನದಾಸರ, ಶಿಲ್ಪಾ ಉಪ್ಪಾರ ಹಾಗೂ ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ರೂ. ಗೆದ್ದ ಸ್ಥಳೀಯ ಪ್ರತಿಭೆ ರಂಜಾನ್ ಪೀರಜಾದೆ ಅವರನ್ನು ಸನ್ಮಾನಿಸಲಾಯಿತು.
ಕಣ್ಮನ ಸೆಳೆದ ಕೌಶಲ: ನೂರಾರು ಮಹಿಳೆಯರು ತರಬೇತಿ ಪಡೆದು ಸ್ವತಃ ತಯಾರಿಸಿದ ವಿವಿಧ ಉಡುಪುಗಳು ಮತ್ತು ಶೃಂಗಾರ ಸಾಧನಗಳನ್ನು ಭವನದ ಗೋಡೆಗಳ ತುಂಬಾ ತೂಗು ಹಾಕಿದ್ದು ಕಣ್ಮನಸೆಳೆಯಿತು.
ಪುರಸಭೆ ಸದಸ್ಯೆ ಸವಿತಾ ಹುರಕಡ್ಲಿ, ಮಹಾಲಿಂಗಪ್ಪ ಕಂಠಿ, ವಿಜಯಕುಮಾರ ಸಬಕಾಳೆ, ಪ್ರಕಾಶ ಬಾಡನವರ, ಮಲಕಾಜಪ್ಪ ಹನಗಂಡಿ, ಬಸವರಾಜ ಗಿರಿಸಾಗರ, ಶಿವಾನಂದ ಕೊಣ್ಣೂರ, ಸುವರ್ಣಾ ಕರೆಹೊನ್ನ, ಸಿಂಧೂರ ಹಲಸಪ್ಪಗೋಳ ಮುಂತಾದವರು ಇದ್ದರು.