ಯಾದಗಿರಿ: ಇತ್ತೀಚೆಗೆ ಧಾರ್ಮಿಕತೆಯಲ್ಲಿ ಹೆಚ್ಚಾಗಿ ಒಲವು ಹೊಂದಿರುವ ಆರೋಗ್ಯ ಸಚಿವ ಬಿ.ಶ್ರೀರಾಮುಲು ಮಂಗಳವಾರ ರಾತ್ರಿ ಗುರುಮಠಕಲ್ ಸಮೀಪದ ಯಾನಾಗುಂದಿಗೆ ಆಗಮಿಸಿ ರಾತ್ರಿಯಿಡಿ ಪೂಜೆ ಸಲ್ಲಿಸಿರುವುದು ತಿಳಿದು ಬಂದಿದೆ.
ಯಾನಾಗುಂದಿಯ ಸೂರ್ಯನಂದಿ ಬೆಟ್ಟದ ವೀರಧರ್ಮಜ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರು ಕನಸಿನಲ್ಲಿ ಬಂದು ತಮ್ಮ ದರ್ಶನ ಪಡೆಯುವಂತೆ ಸೂಚಿಸಿದ್ದರಂತೆ. ಹೀಗಾಗಿ ಮಂಗಳವಾರ ರಾತ್ರಿ ಯಾನಾಗಿಂದಿಗೆ ಆಗಮಿಸಿದ ಅವರು ರಾತ್ರಿಯಿಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ರಾಮುಲು ಆಪ್ತರು ಮಾಧ್ಯಮದವರಿಗೆ ತಿಳಿಸಿದರು.
ಬುಧವಾರ ಬೆಳಗ್ಗೆ ಬಿಳಿ ರೇಷ್ಮೆ ಶರ್ಟ್ ಲುಂಗಿ ತೊಟ್ಟಿದ್ದ ರಾಮುಲು, ಮಾಣಿಕೇಶ್ವರಿ ಅಮ್ಮನವರ ದರ್ಶನಕ್ಕಾಗಿ ಕೆಲಕಾಲ ಕಾದು ಬೆಟ್ಟದಲ್ಲಿನ ಗುಹೆಯೊಳಗೆ ಕಾದು ನಿಂತಿದ್ದರು. ಅಲ್ಲದೆ ದೇವಸ್ಥಾನದಲ್ಲಿ ಧ್ಯಾನ ಮಾಡಿ, ಆಪ್ತರೊಂದಿಗೆ ಕಾಲ ಕಳೆದರು. ಕಳೆದ ವರ್ಷವಷ್ಟೇ ಯಾದಗಿರಿ ನಗರಸಭೆ ಮಾಜಿ ಅಧ್ಯಕ್ಷೆ ಲಲಿತಾ ಅನಪುರ ರಾಮುಲು ಅವರನ್ನು ಯಾನಾಗುಂದಿಗೆ ಕರೆಸಿ ಕ್ಷೇತ್ರದ ಮಹಿಮೆಯ ಬಗ್ಗೆ ಮಾಹಿತಿ ನೀಡಿದ್ದರು.
ತದ ನಂತರ ಆಗಾಗ ಸಚಿವ ರಾಮುಲು ಅವರು ಯಾನಾಗುಂದಿಗೆ ಭೇಟಿ ನೀಡಿ ಅಮ್ಮನವರ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೆ ಮಾರ್ಚ್ .05 ರಂದು ರಾಮುಲು ಪುತ್ರಿ ಬಿ.ರಕ್ಷಿತಾ ಅವರ ವಿವಾಹ ಹಮ್ಮಿಕೊಂಡ ಕಾರಣ ಅದಕ್ಕೂ ಮೊದಲು ಮಾತೆ ಮಾಣಿಕೇಶ್ವರಿ ಅಮ್ಮನವರ ದರ್ಶನಕ್ಕೆ ಬಂದಿರಬಹುದು ಎಂಬ ಮಾತುಗಳು ಬೆಟ್ಟದಲ್ಲಿ ಕೇಳಿ ಬಂದವು.