ಯಶ್ ಆಡಿಟರ್​ಗೂ ಐಟಿ ಬಿಸಿ

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಟ ಯಶ್ ಆಡಿಟರ್ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಗುರುವಾರ (ಜ.10) ಮಧ್ನಾಹ್ನ 2 ಗಂಟೆಗೆ ಅಧಿಕಾರಿಗಳು ಶೇಷಾದ್ರಿಪುರದಲ್ಲಿರುವ ಯಶ್ ಆಡಿಟರ್ ಬಸವರಾಜ್ ಕಚೇರಿ ಮೇಲೆ ದಾಳಿ ನಡೆಸಿ ಕೆಲ ಮಹತ್ವದ ದಾಖಲೆಗಳನ್ನು ಪತ್ತೆ ಹಚ್ಚಿ ಕೊಂಡೊಯ್ದಿದ್ದಾರೆ.

ಬಸವರಾಜ್ ಚಿತ್ರರಂಗದ ಹಲವು ನಟ ಮತ್ತು ನಿರ್ಮಾಪಕರಿಗೆ ಆಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಶ್ ಮನೆಯಲ್ಲಿ ಜಪ್ತಿ ಮಾಡಿದ್ದ ಕೆಲ ದಾಖಲೆಗಳ ಪರಿಶೀಲನೆ ನಡೆಸುತ್ತಿರುವ ಐಟಿ ಅಧಿಕಾರಿಗಳು, ಇದಕ್ಕೆ ಸಂಬಂಧಿಸಿದ ಇನ್ನಷ್ಟು ದಾಖಲೆಗಳನ್ನು ಕಲೆ ಹಾಕಲು ಬಸವರಾಜ್ ಕಚೇರಿಗೆ ದಾಳಿ ನಡೆಸಿದ್ದಾರೆ. ಬಸವರಾಜ್ ಅವರಿಂದಲೂ ಕೆಲ ಮಾಹಿತಿಗಳನ್ನು ಕಲೆ ಹಾಕಿದ್ದಾರೆ ಎನ್ನಲಾಗಿದೆ.

ದಾಳಿಗೊಳಗಾದ ನಟ, ನಿರ್ಮಾಪಕರು 109 ಕೋಟಿ ರೂ. ಅಘೋಷಿತ ಆಸ್ತಿ ಹೊಂದಿರುವುದನ್ನು ಐಟಿ ಅಧಿಕಾರಿಗಳು ಈಗಾಗಲೇ ಪತ್ತೆ ಹಚ್ಚಿದ್ದಾರೆ. ಇನ್ನಷ್ಟು ಅಘೋಷಿತ ಆಸ್ತಿ ಹೊಂದಿರುವ ಸಾಧ್ಯತೆಗಳಿವೆ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲ ದಾಖಲೆಗಳಿಗಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ.

ದಾಳಿಗೊಳಗಾದ ನಟ, ನಿರ್ಮಾಪಕರಿಂದ ಹೇಳಿಕೆ ಪಡೆಯಲು ಐಟಿ ಕಚೇರಿಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅದರಂತೆ ನಟರಾದ ಶಿವರಾಜ್​ಕುಮಾರ್, ಪುನೀತ್ ರಾಜ್​ಕುಮಾರ್, ನಿರ್ಮಾಪಕರಾದ ಮನೋಹರ್, ರಾಕ್​ಲೈನ್ ವೆಂಕಟೇಶ್ ಈಗಾಗಲೇ ಐಟಿ ಕಚೇರಿಗೆ ಹಾಜರಾಗಿದ್ದಾರೆ. ಯಶ್, ಸುದೀಪ್ ಹಾಜರಾಗಬೇಕಿದೆ.

One Reply to “ಯಶ್ ಆಡಿಟರ್​ಗೂ ಐಟಿ ಬಿಸಿ”

Comments are closed.