ಸಾಗರ: ಮನುಷ್ಯ ನೆಮ್ಮದಿಯ ಬದುಕು ನಡೆಸಬೇಕು ಎಂದರೆ ಭಗವಂತನನ್ನು ಶ್ರದ್ಧಾಭಕ್ತಿಯಿಂದ ಆರಾಧಿಸಬೇಕು. ತನ್ಮೂಲಕ ಬದುಕನ್ನು ಸನ್ಮಾರ್ಗದತ್ತ ಕೊಂಡೊಯ್ಯಬಹುದಾಗಿದೆ ಎಂದು ಹೊರನಾಡು ಅನ್ನಪೂರ್ಣೆಶ್ವರಿ ದೇವಾಲಯದ ರಾಜಲಕ್ಷ್ಮೀ ಭೀಮೇಶ್ವರ ಜೋಶಿ ಹೇಳಿದರು.
ನಗರದ ರಾಘವೇಶ್ವರ ಸಭಾಭವನದಲ್ಲಿ ಶುಕ್ರವಾರ ಹವ್ಯಕ ಮಂಡಲದಿಂದ ಆಯೋಜಿಸಲಾಗಿದ್ದ ಪೂರ್ಣಮಂಡಲ ಕುಂಕುಮಾರ್ಚನೆ ಹಾಗೂ ಗಾಯತ್ರಿ ಜಪ ಯಜ್ಞ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮನುಷ್ಯ ತನ್ನ ಒಳಿತಿಗಾಗಿ ಮತ್ತು ತನ್ನವರ ಒಳಿತಿಗಾಗಿ ಜೀವನಪೂರ್ತಿ ಬೇರೆಬೇರೆ ರೀತಿಯಲ್ಲಿ ಹೋರಾಟ ಮಾಡಿಕೊಂಡು ಬರುತ್ತಾನೆ. ಆದರೆ ಯಶಸ್ಸು ಮತ್ತು ನೆಮ್ಮದಿ ಪಡೆಯಬೇಕಾದರೆ ದೈವಾನುಗ್ರಹ ಅಗತ್ಯ ಎಂದರು.
ಯಾರು ತ್ಯಾಗದ ಮನೋಭಾವ ಹೊಂದಿರುತ್ತಾರೋ ಅವರು ನೆಮ್ಮದಿ ಪಡೆಯುತ್ತಾರೆ. ಕ್ಷಣಿಕ ಸುಖದ ಹಿಂದೆ ಬಿದ್ದಿರುವುದರಿಂದ ನಾವು ಮಕ್ಕಳಿಗೆ ಸಂಸ್ಕೃತಿ ಮತ್ತು ಸಂಸ್ಕಾರದ ಬಗ್ಗೆ ಅರಿವು ಮೂಡಿಸುವಲ್ಲಿ ವಿಫಲರಾಗುತ್ತಿದ್ದೇವೆ. ಇದರಿಂದಾಗಿ ನಮ್ಮ ಮುಂದಿನ ಪೀಳಿಗೆ ಸಂಸ್ಕೃತಿಯೂ, ಸಂಸ್ಕಾರಹೀನವೂ ಆಗಿ ನೆಮ್ಮದಿಗಾಗಿ ಹುಡುಕಾಟ ಮಾಡಬೇಕಾದ ದುಸ್ಥಿತಿ ನಿರ್ವಣವಾದರೂ ಅಚ್ಚರಿಪಡಬೇಕಾಗಿಲ್ಲ. ಇದನ್ನು ಯೋಚಿಸಿ ಮುಂದಿನ ಪೀಳಿಗೆಗೆ ಸಂಸ್ಕಾರವನ್ನು ಈಗಿನಿಂದಲೆ ಬಿತ್ತುವ ಪ್ರಯತ್ನ ನಡೆಸಬೇಕು. ಅಂತಹ ವಾತಾವರಣ ನಿರ್ವಣವಾಗಬೇಕಾದರೆ ಇಂತಹ ಧಾರ್ವಿುಕ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು. ಮಕ್ಕಳಿಗೆ ಸಂಸ್ಕಾರ ನೀಡುವ ಜವಾಬ್ದಾರಿ ಪಾಲಕರು ಮತ್ತು ಸಮಾಜದ್ದಾಗಿದೆ. ಸಾಂಘಿಕವಾಗಿ ಧಾರ್ವಿುಕ ಆಚರಣೆ ಮತ್ತು ಆರಾಧನೆಗಳನ್ನು ನಡೆಸುವ ಪರಿಪಾಠ ನಿರಂತರವಾಗಿ ನಡೆಯಬೇಕು ಎಂದರು.
ಹವ್ಯಕ ಮಂಡಲದ ವೈದಿಕ ಪ್ರಧಾನ ನೀಲಕಂಠ ಯಾಜಿ ಮಾತನಾಡಿ, ಧಾರ್ವಿುಕವಾಗಿ ತೊಡಗಿಕೊಳ್ಳುವ ಮನೋಭೂಮಿಕೆ ಹೆಚ್ಚಾಗಬೇಕು ಮತ್ತು ಸ್ವಯಂಪ್ರೇರಿತವಾಗಿ ತೊಡಗಿಕೊಳ್ಳುವ ಮನಸ್ಥಿತಿ ಎಲ್ಲರದ್ದಾಗಬೇಕು ಎಂದರು.
ಸಾಗರ ಹವ್ಯಕ ಮಂಡಲದ ಅಧ್ಯಕ್ಷ ಮುರಳಿ ಹೊಸ್ಮನೆ ಅಧ್ಯಕ್ಷತೆ ವಹಿಸಿದ್ದರು. ಮಹಾಮಂಡಲದ ಅಧ್ಯಕ್ಷ ಆರ್.ಎಸ್.ಹೆಗಡೆ, ಸಂಘಟನಾ ಕಾರ್ಯದರ್ಶಿ ಪ್ರಖ್ಯಾತರಾವ್, ವೆಂಕಟರಾವ್, ಸುಬ್ರಹ್ಮಣ್ಯ ಚಿಪ್ಳಿ, ಸುಬ್ರಾಯ ಸಂಗೊಳ್ಳಿಮನೆ, ಶ್ರೀಧರ ಹೆಗಡೆ, ಸಮರ್ಥ ಭಟ್, ರಮೇಶ್ ಹೆಗಡೆ ಗುಂಡೂಮನೆ ಇತರರಿದ್ದರು.