ಯಶಸ್ಸಿನೆಡೆಯ ದಾರಿ ಹೇಗಿರಬೇಕು?

ತನ್ನ ಪತಿ ರಾವಣನು ಯುದ್ಧದಲ್ಲಿ ರಾಮನಿಂದ ಹತನಾದ ಸುದ್ದಿ ಕೇಳಿ ದುಃಖತಪ್ತಳಾದ ಮಂಡೋದರಿ ಆಕ್ರೋಶದಿಂದ ಯುದ್ಧಭೂಮಿಯೆಡೆಗೆ ಧಾವಿಸಿದಳು. ಮಾಯಾಸುರನೆಂಬ ರಾಕ್ಷಸರಾಜ ಹಾಗೂ ಹೇಮಾ ಎಂಬ ಅಪ್ಸರೆಯ ಮಗಳಾದ ಅವಳಿಗೆ ಯಕಃಶ್ಚಿತ್​ವಾನವರೆಂದರೆ ಯಾವ ವಿಧದಲ್ಲಿಯೂ ತನಗೆ ಸರಿಸಮಾನರೇ ಅಲ್ಲ ಎಂಬ ಭಾವನೆ. ಅದರಲ್ಲೂ ಮಹಾಬಲಶಾಲಿಯಾದ ತನ್ನ ಪತಿಯ ಶೌರ್ಯದ ಬಗ್ಗೆ ಅವಳಿಗೆ ಅಪಾರ ನಂಬಿಕೆ. ಮುಖದ ಮೇಲೆ ಸಿಟ್ಟು, ಕೆದರಿದ ತಲೆಗೂದಲು, ಪ್ರಲಾಪಿಸುವ ಧ್ವನಿಯಲ್ಲಿ ‘ಲಂಕಾಧಿಪತಿಯನ್ನು ಸೋಲಿಸಿದ ಆ ರಾಮ ಯಾರು?’ ಎಂದು ಕೇಳುತ್ತ ವಾನರಸೇನೆಯತ್ತ ನಡೆದಳು. ಆಗ ಶ್ರೀರಾಮನು ಒಂದು ಬಂಡೆಗಲ್ಲಿನ ಮೇಲೆ ಕುಳಿತಿದ್ದನು. ಸೂರ್ಯನ ಕಿರಣಗಳು ಅವನ ಮೈ ಮೇಲೆ ಬಿದ್ದು ಅದರ ನೆರಳು ಭೂಮಿ ಮೇಲೆ ಬಿದ್ದಿತ್ತು. ಅವನು ನೆಲದ ಕಡೆಗೆ ಮುಖ ಮಾಡುತ್ತಿದ್ದಂತೆ ಬೇರೆ ಯಾವುದೋ ವ್ಯಕ್ತಿಯ ನೆರಳು ತನ್ನ ಕಡೆಗೆ ವೇಗವಾಗಿ ಬರುತ್ತಿದ್ದುದನ್ನು ನೋಡಿದನು. ಅದು ಯಾರದಿರಬಹುದೆಂದು ಅವನಿಗೆ ತಿಳಿಯದಿದ್ದರೂ ಅದೊಂದು ಸ್ತ್ರೀಯ ನೆರಳು ಎಂದು ಗೊತ್ತಾದ ತಕ್ಷಣ ಅವನು ಒಂದು ಹೆಜ್ಜೆ ಹಿಂದೆ ಸರಿದು ತನ್ನ ನೆರಳು ಅವಳ ನೆರಳಿಗೆ ತಾಗದಂತೆ ನಿಂತನು. ಅದನ್ನು ಗಮನಿಸಿ, ನ್ಯಾಯ-ಅನ್ಯಾಯಗಳನ್ನು ತಿಳಿದವಳಾದ ಮಂಡೋದರಿ ಮುಂದೆ ಹೋಗದೆ ಅಲ್ಲಿಯೇ ನಿಂತುಬಿಟ್ಟಳು. ಅವಳಿಗೆ ಕೂಡಲೇ ಅರ್ಥವಾಯಿತು. ಶ್ರೀರಾಮನಿಗೆ ಸಿಕ್ಕ ಈ ಯಶಸ್ಸು ಯುದ್ಧಭೂಮಿಗೆ ಮಾತ್ರ ಸೀಮಿತವಲ್ಲ. ಮಾನವನಾದರೂ ಮರ್ಯಾದಾ ಪುರುಷೋತ್ತಮನಾದ ಅವನಿಗೆ ಅದೊಂದು ನೈತಿಕ ವಿಜಯ. ಪರಸ್ತ್ರೀಯನ್ನು ಹೇಗೆ ಗೌರವಿಸಬೇಕೆಂದು ಬಲ್ಲ ಅವನ ನಿಷ್ಕಳಂಕ ಚಾರಿತ್ರ್ಯದಲ್ಲಿ ಅವನ ಯಶಸ್ಸು ಅಡಗಿದೆ. ಇಂಥ ಸದ್ಗುಣವು ಬಲಾಢ್ಯನಾದ ತನ್ನ ಗಂಡ ರಾವಣನಲ್ಲಿರಲಿಲ್ಲವಲ್ಲ ಎಂದು ಅಸಹಾಯಕಳಾಗಿ ಕೊರಗಿದಳು.

ನಮ್ಮ ಜೀವನವೂ ಸಹ ವಿವಿಧ ಯಶಸ್ಸುಗಳ ಕಡೆಗೆ ಮುಖ ಮಾಡಿಯೇ ಸಾಗುತ್ತಿರುತ್ತದೆ. ಕೆಲವೊಂದು ಯಶಸ್ಸನ್ನು ಪಡೆದಿರುತ್ತೇವೆ ಸಹ. ಆದರೆ ಯಶಸ್ಸಿನ ನಿಜವಾದ ಅರ್ಥ ನಮ್ಮ ಹತ್ತಿರ ಏನು ಇದೆ ಎಂಬುದಾಗಿರದೇ ನಾವು ಏನಾಗಿರುವೆಯೋ ಎಂಬುದಾಗಿರಬೇಕು. ಯಶಸ್ಸಿಗಾಗಿ ಸರ್ವ ಪ್ರಯತ್ನಗಳನ್ನು ಮಾಡಬೇಕು ನಿಜ. ಆದರೆ ನ್ಯಾಯಯುತ ಮಾರ್ಗವನ್ನು ಬಿಟ್ಟು ಯಾರಿಂದಲೋ ಒತ್ತಡ ತಂದು, ಧನ ಅಥವಾ ತೋಳ್ಬಲದಿಂದ ಪಡೆದ ಯಶಸ್ಸಿನ ಪ್ರಮಾಣಪತ್ರ, ಪದವಿ ಅಥವಾ ಹುದ್ದೆ ಗೌರವಯುತವಾದ ವಿಜಯವಾಗಲಾರದು. ‘ನಾವು ಗುರಿ ತಲುಪಿದ್ದೇವೆನ್ನುವುದಕ್ಕಿಂತ ಅದನ್ನು ತಲುಪಲು ಬಳಸಿದ ದಾರಿ ಹೇಗಿತ್ತು? ಎಂಬುವುದು ಮುಖ್ಯ’ ಎಂಬ ಹಿರಿಯರ ಮಾತು ನಿಜಕ್ಕೂ ಅರ್ಥಪೂರ್ಣ. ಯಶಸ್ಸನ್ನು ಗಳಿಸುವುದು ಎಷ್ಟು ಮುಖ್ಯವೋ ಅದನ್ನು ಹೇಗೆ ಗಳಿಸಿದ್ದೇವೆಂಬುದು ಕೂಡ ಅಷ್ಟೇ ಮುಖ್ಯ. ಅಂಥ ಸಾರ್ಥಕ ಯಶಸ್ಸನ್ನು ಸಂಭ್ರಮಿಸೋಣ.

|ಚಿದಂಬರ ಮುನವಳ್ಳಿ

(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ) 

Leave a Reply

Your email address will not be published. Required fields are marked *