ಯಥಾರ್ಥವಾದಿ ಉಪ್ಪಲೂರಿ ಗೋಪಾಲ ಕೃಷ್ಣಮೂರ್ತಿ

ವಾದ-ಸಂವಾದಗಳಲ್ಲಿಯೇ ನಿರತರಾಗಿದ್ದ ಅಪೂರ್ವ ಜಿಜ್ಞಾಸು, ಯಥಾರ್ಥವಾದಿ ‘ಯುಜಿ’. ನಾವು ನಂಬಿರುವ ಎಲ್ಲ ವಿಚಾರಗಳನ್ನು ಪಕ್ಕಕ್ಕಿಟ್ಟು ಯಥಾರ್ಥಸ್ಥಿತಿಯನ್ನು ಒಪ್ಪಿಕೊಳ್ಳಬೇಕೆಂದೂ, ಎಲ್ಲ ಸಾಂಸ್ಥಿಕ ಅಸ್ತಿತ್ವವನ್ನು ನಿರಾಕರಿಸಬೇಕೆಂದೂ ಪ್ರತಿಪಾದಿಸುತ್ತಿದ್ದ ಈ ಚಿಂತಕ ‘ದೇಹ ಅಜರಾಮರ, ಆತ್ಮವಲ್ಲ’ ಎನ್ನುವ ಮೂಲಕ ಅಭಿಮಾನಿಗಳಲ್ಲಿ, ಜಿಜ್ಞಾಸುಗಳಲ್ಲಿ ಅಚ್ಚರಿ ಮೂಡಿಸುತ್ತಿದ್ದು ಹೌದು.

ಆಧುನಿಕ ಭಾರತೀಯ ಚಿಂತಕರಲ್ಲಿ ಅನೇಕ ಕಾರಣಗಳಿಂದ ಈ ಮೂವರು ಮುಖ್ಯರೆನಿಸಿದ್ದಾರೆ. ಮೊದಲನೆಯವರು ಆಚಾರ್ಯ ರಜನೀಶ್ ಎಂದು ಪ್ರಖ್ಯಾತರಾದ ಓಶೋ. ಎರಡನೆಯವರು ಜೆ.ಕೆ. ಮೂರನೆಯವರು ಯುಜಿ. ಅನೇಕ ದೃಷ್ಟಿಗಳಿಂದ ಯುಜಿ ನಮ್ಮ ನಂಬುಗೆಗಳ ಬುಡವನ್ನು ಪ್ರಶ್ನೆಗಳ ಮೂಲಕವೇ ಅಲುಗಾಡಿಸಿದವರು. ನಾವು ನಂಬಿರುವ ಎಲ್ಲ ಬಗೆಯ ವಿಚಾರಗಳನ್ನು ಪಕ್ಕಕ್ಕಿಟ್ಟು ಯಥಾರ್ಥಸ್ಥಿತಿಯನ್ನು ಒಪ್ಪಿಕೊಳ್ಳಬೇಕೆಂದೂ, ಎಲ್ಲ ಸಾಂಸ್ಥಿಕ ಅಸ್ತಿತ್ವವನ್ನು ನಿರಾಕರಿಸಬೇಕೆಂದೂ ಹಠಹಿಡಿದ ವ್ಯಕ್ತಿವಾದಿ. ಬುದ್ಧನಿಂದ ರಮಣರವರೆಗೆ ಪ್ರತಿಯೊಬ್ಬರನ್ನೂ ಪ್ರಶ್ನಿಸುವ ಮೂಲಕವೇ ಸಂವಾದ ನಡೆಸುತ್ತಿದ್ದ ಯುಜಿ, ಒಂದು ಸ್ಥಳದಲ್ಲಿ ಉಳಿಯಲಿಲ್ಲ; ಯಾವುದೇ ಹಿಂಬಾಲಕರನ್ನೊ ಶಿಷ್ಯಗಣಗಳನ್ನೊ ಹೊಂದಲಿಲ್ಲ. ನಿರ್ದಿಷ್ಟವಾಗಿ ಉಪನ್ಯಾಸ ಮಾಡದೆ, ಎಲ್ಲೊ ಆಪ್ತರ ಮನೆಯಲ್ಲಿ ಉಳಿದು ಸಹಜ ಸಂವಾದದಲ್ಲಿ ಬದುಕಿದ ಯಥಾರ್ಥವಾದಿ ಉಪ್ಪಲೂರಿ ಗೋಪಾಲ ಕೃಷ್ಣಮೂರ್ತಿ, ‘ಯುಜಿ’ ಎಂಬ ಸಂಕ್ಷಿಪ್ತನಾಮದಿಂದ ಅನೇಕರನ್ನು ತನ್ನೆಡೆಗೆ ಸೆಳೆದುಕೊಂಡ ವಿಶ್ವಚಿಂತಕ.

ಹುಟ್ಟು-ಬದುಕು: ಯುಜಿ ಆಂಧ್ರಪ್ರದೇಶದ ಮಚಲೀಪಟ್ಟಣದ ಸಮೀಪದ ‘ಗುಡಿವಾಡ’ ಎಂಬಲ್ಲಿ ಜನಿಸಿದರು. ಅಂದು ಕಾಳಾಯುಕ್ತಿ ಸಂವತ್ಸರದ ಆಷಾಢ ಶುದ್ಧ ಪಾಡ್ಯ ಮಂಗಳವಾರ 1918ರ ಜುಲೈ 9. ತಂದೆ ಸೀತಾರಾಮಯ್ಯ, ತಾಯಿ ಭಾರತಿ. ಹುಟ್ಟಿದ ಏಳುದಿನಕ್ಕೆ ಯುಜಿ ತಾಯಿಯನ್ನು ಕಳೆದುಕೊಂಡರು. ತಾಯಿ ಮರಣಶಯ್ಯೆಯಲ್ಲಿದ್ದಾಗ ‘ನನ್ನ ಮಗನಿಗೆ ಉಜ್ವಲ ಭವಿಷ್ಯವಿದೆ’ ಎಂದು ಸರೀಕರಲ್ಲಿ ಹೇಳಿ ಮರಣಹೊಂದಿದಳಂತೆ. ಇದು ಯುಜಿ ಪಾಲಿಗೆ ಭವಿಷ್ಯವಾಣಿಯಾಯಿತು. ತಾಯಿ ತೀರಿಕೊಂಡ ಮೇಲೆ ತಂದೆ ಬೇರೊಬ್ಬರನ್ನು ವಿವಾಹವಾದರು. ಯುಜಿಯನ್ನು ತವರುಮನೆಗೆ ಕಳುಹಿಸಿಬಿಟ್ಟರು. ಯುಜಿಯ ತಾತ ತುಮ್ಮಲಪಲ್ಲಿ ಗೋಪಾಲಕೃಷ್ಣಮೂರ್ತಿ ಆಗರ್ಭ ಶ್ರೀಮಂತರು. ಯುಜಿಯ ಆರೈಕೆಯನ್ನು ಕೊನೆಯವರೆಗೂ ನೋಡಿಕೊಂಡರು. ಪ್ರಸಿದ್ಧ ವಕೀಲರಾಗಿದ್ದ ಅವರ ಮನೆಗೆ ಗುರುಗಳೂ ಸಾಧುಗಳೂ ಬಂದುಹೋಗುತ್ತಿದ್ದರು. ಮೊಮ್ಮಗನ ಭವಿಷ್ಯಕ್ಕಾಗಿ ವೃತ್ತಿಬದುಕನ್ನು ತೊರೆದು, ಧರ್ಮ-ಅಧ್ಯಾತ್ಮ-ಸನಾತನ ತತ್ತ್ವಗಳನ್ನು ಬೋಧಿಸಲು ಶ್ರೇಷ್ಠಗುರುಗಳನ್ನು ನೇಮಿಸಿಕೊಂಡರು. ಚಿಕ್ಕಂದೇ ಯುಜಿಗೆ ಧ್ಯಾನಮಾಡಲು ಹೇಳುತ್ತಿದ್ದರು. ಆಗಿನ್ನೂ 5 ವರ್ಷದವರಾಗಿದ್ದ ಯುಜಿಗೆ ಉಪನಿಷತ್ತಿನ ಅನೇಕ ಮಂತ್ರಗಳೂ, ವೇದಾಂತವನ್ನು ತಿಳಿಸುವ ಪ್ರಕರಣ ಗ್ರಂಥಗಳಾದ ಪಂಚದಶೀ, ನೈಷ್ಕರ್ವ್ಯು ಸಿದ್ಧಿಯ ಎಷ್ಟೋ ಶ್ಲೋಕಗಳು ಬಾಯಿಪಾಠವಾಗಿದ್ದವು. ಬಾಲ್ಯದಿಂದಲೇ ಅವರು ವಿಷಯ ಗ್ರಹಿಸುವುದರಲ್ಲಿ ಕುಶಾಗ್ರಮತಿಯಾಗಿದ್ದರು.

ಸಂಪ್ರದಾಯದಂತೆ 11ನೇ ವರ್ಷಕ್ಕೆ ಯುಜಿಗೆ ಉಪನಯನ ವಾಯಿತು. ಸಂಧ್ಯಾವಂದನೆಯ ಸಂಕಲ್ಪವಿಧಿಯಲ್ಲಿ ಬರುವ ‘ಗೋದಾವರ್ಯಾಃ ದಕ್ಷಿಣತೀರೇ ಸ್ವಗೃಹೇ’ ಎಂಬ ಭಾಗವನ್ನು ಹೇಳಬೇಕಾಗಿತ್ತಷ್ಟೆ. ‘ಸ್ವಗೃಹೇ’ ಎಂಬ ಮಾತಿಗೆ ಯುಜಿ ತಕರಾರು ತೆಗೆದು ಇದು ನನ್ನ ಮನೆಯಲ್ಲ, ತಾತನದು. ಇದು ಶ್ರೀಮಂತರ ಮನೆಯಾಗಿರುವುದರಿಂದ ‘ಲಕ್ಷ್ಮೀನಿವಾಸ ಗೃಹೇ’ ಎಂದು ಹೇಳಬೇಕೆಂದು ಹಠಹಿಡಿದರು. ತಾತ ಒಪ್ಪಿಕೊಂಡರು. ಯುಜಿಯ ತರ್ಕದ ಬೇರು ಬಾಲ್ಯದಲ್ಲಿಯೇ ಇದ್ದುದನ್ನು ಈ ಪ್ರಸಂಗವು ತೋರಿಸುತ್ತದೆ! ಯುಜಿಯ ವಿಶಿಷ್ಟ ಬುದ್ಧಿಮತ್ತೆ ಕಂಡಿದ್ದ ಮನೆಯವರೆಲ್ಲಾ ಹಿಂದಿನ ಜನ್ಮದಲ್ಲಿ ಯೋಗಭ್ರಷ್ಟನಾಗಿರಬೇಕೆಂದೂ, ಇಂದಿನ ಜನ್ಮದಲ್ಲಿ ಅದರ ನಿವಾರಣೆಯಾಗಿ ಯೋಗಿಯಾಗುವನೆಂದೂ ಭಾವಿಸಿದ್ದರಂತೆ. ಚಿಕ್ಕಂದಿನಲ್ಲೇ ಬಡವರ ಬಗೆಗೆ ಕಾರುಣ್ಯವಿದ್ದ ಯುಜಿ, ಎಷ್ಟೋ ಬಡಗೆಳೆಯರ ಪರೀಕ್ಷಾಫೀಜನ್ನು ಕಟ್ಟುತ್ತಿದ್ದ ಮಾನವೀಯ ವ್ಯಕ್ತಿ. ಮನೆಯಲ್ಲಿ ಆಳುಕಾಳುಗಳಿದ್ದರೂ ಅವರನ್ನೆಲ್ಲಾ ಸಮಾನವಾಗಿ ನಡೆಸಿಕೊಳ್ಳುತ್ತ, ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದರು.

ತಾತನ ಮನೆಯಲ್ಲಿದ್ದಾಗ ನಡೆದ ಹಲವು ಪ್ರಸಂಗಗಳಿಂದಾಗಿ ಸಂಪ್ರದಾಯದ ಬಗೆಗೆ ಯುಜಿಗೆ ಜುಗುಪ್ಸೆ ಉಂಟಾಯಿತು. ತಾತ ಪೂಜೆ-ಧ್ಯಾನಗಳಲ್ಲಿದ್ದರೂ ಕೋಪ, ರೋಷಾವೇಶಗಳಿರುತ್ತಿದ್ದುದನ್ನು ಕಂಡು ಇವರು ಕ್ರೂರಿಗಳೆಂದೂ ಆಂತರಿಕವಾಗಿ ರಾಕ್ಷಸರೆಂದೂ ತೀರ್ವನಿಸಿದರು. ತಮ್ಮ ಜೀವನಕ್ಕೂ ದೈನಂದಿನ ಬದುಕಿಗೂ ಇರುವ ಅಗಾಧ ಅಂತರವನ್ನು ಯುಜಿ ಅವರಲ್ಲಿ ಕಂಡರು. ಪ್ರತಿಯೊಂದು ಆಚರಣೆಗಳನ್ನು ಪ್ರಶ್ನಿಸತೊಡಗಿದರು. ಸಂಪ್ರದಾಯ-ನಂಬಿಕೆಗಳನ್ನು ದೂರೀಕರಿಸತೊಡಗಿದರು. ಈ ನಡುವೆ ಅಜ್ಜ-ಅಜ್ಜಿ ತೀರಿಕೊಂಡಾಗ, ಅವರ ನೂರಾರು ಎಕರೆ ಜಮೀನನ್ನು ರೈತರಿಗೆ ಅಷ್ಟಿಷ್ಟು ಹಣಪಡೆದು ಬಿಟ್ಟುಕೊಟ್ಟರು. ಯುಜಿ ಅದಾಗಲೇ ಪ್ರಾಯಕ್ಕೆ ಬಂದಿದ್ದರು. ಅಜ್ಜಿ ದುರ್ಗಮ್ಮ, ಕುಸುಮಕುಮಾರಿ ಎಂಬ ಸುಂದರಕನ್ಯೆಯನ್ನು ತಂದು ಮದುವೆ ಮಾಡಿದರು. ಪ್ರಾಯದಲ್ಲಿರುವಾಗ ಯುಜಿ ಚಪಲ-ರಸಿಕತೆ ಹೊಂದಿದ್ದವರೇ. ‘ಮಂಗನ ಕೈಗೆ ಮಾಣಿಕ್ಯ’ ಸಿಗುವಂತೆ ಸುಂದರಕನ್ಯೆ ಯುಜಿಗೆ ಸಿಕ್ಕಿದ್ದರು. ಈ ನಡುವೆ ನಾಲ್ಕುಸಾರಿ ಗರ್ಭಪಾತ ಆಯಿತು. ಒಬ್ಬ ಪೋಲಿಯೊಪೀಡಿತ ಮಗ ಮಾತ್ರ ಉಳಿದ. ಇಬ್ಬರು ಹೆಣುಮಕ್ಕಳ ಪಾಲನೆ-ಪೋಷಣೆಯ ಜವಾಬ್ದಾರಿಯನ್ನು ಕುಸುಮಕುಮಾರಿಯೇ ಹೊತ್ತರು. ಯುಜಿ ಅವರಿಗೆ ಗೃಹಲಾಲಸೆ ಇರಲಿಲ್ಲ. ಸಂಸಾರದ ಬಗೆಗೆ ವಿರಕ್ತರಾಗಿದ್ದರು. ತಾತನ ಜಮೀನಿನಿಂದ ಬಂದ ಹಣದಲ್ಲಿ ಮಗ ವಸಂತನ ಪೋಲಿಯೊ ಚಿಕಿತ್ಸೆಗಾಗಿ ಸ್ವಲ್ಪ ಖರ್ಚುಮಾಡಿ, ಉಳಿದಿದ್ದನ್ನು ಹೆಂಡತಿಯ ಹೆಸರಲ್ಲಿ ಡಿಪಾಜಿಟ್ ಇಟ್ಟು ಅಮೆರಿಕೆಗೆ ತೆರಳಿದರು. ಇದು ಅವರ ಬಾಳಿನಲ್ಲಾದ ದಾಂಪತ್ಯ ವಿಚ್ಛೇದನದ ಸಂದರ್ಭ. ಮುಂದೆ ಕುಸುಮಕುಮಾರಿ ಮಕ್ಕಳೊಂದಿಗೆ 1959ರಲ್ಲಿ ಯುಜಿ ಜತೆ ಅಮೆರಿಕದಲ್ಲಿ ಕೆಲಕಾಲ ಉಳಿದಿದ್ದರು. ಆಗ ಒಬ್ಬ ಮಗ ಹುಟ್ಟಿದ. 1961ರಲ್ಲಿ ಅಂತಿಮವಾಗಿ ಪಾರಸ್ಪರಿಕ ವಿಚ್ಛೇದನವಾಯಿತು.

ಯೋಗಸಾಧನೆ: 18ರ ವಯಸ್ಸಿನಲ್ಲಿ ಯುಜಿ ಅನ್ವೇಷಣೆಯನ್ನು ಪ್ರಾರಂಭಿಸಿದರು. ಇದಕ್ಕೆ ಅವರು ಆರಿಸಿಕೊಂಡಿದ್ದು ಹರಿದ್ವಾರವನ್ನು. 1936ರಿಂದ 1944ರವರೆಗೆ ಸ್ವಾಮಿ ಶಿವಾನಂದರ ಆಶ್ರಮಕ್ಕೆ ಆಗಾಗ್ಗೆ ಬಂದು ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದರು. ಯೋಗಸಾಧನೆಯಿಂದ ಹೊರಬರದೆ ಹುಲ್ಲು-ಗರಿಕೆಗಳನ್ನೇ ತಿನ್ನುತ್ತಿದ್ದರು. ಈ ಸಾಧನೆಯ ಅವಧಿಯಲ್ಲಿ ಯೋಗಶಾಸ್ತ್ರಗಳಲ್ಲಿ ಉಲ್ಲೇಖಿಸಿದಂಥ ಸಿದ್ಧಿ ಮತ್ತು ಸಾಧನೆಯ ಹಲವು ಅನುಭವಗಳು ಅವರಿಗಾದವು. ಆದರೆ, ಅವು ಸಹಜಸಿದ್ಧಿಗಳೆಂದೂ, ಮನುಷ್ಯನ ಮನಃಶಕ್ತಿ ಯಾರ ಅಳವಿಗು ನಿಲುಕುವುದಿಲ್ಲವೆಂದೂ, ಬ್ರಹ್ಮಾನಂದ, ನಿರ್ವಿಕಲ್ಪ-ಸವಿಕಲ್ಪ ಸಮಾಧಿ, ಶೂನ್ಯಾವಸ್ಥೆ ಮುಂತಾದವನ್ನು ಸಾಕಾರಗೊಳಿಸಿಕೊಳ್ಳುವ ಶಕ್ತಿ ಮನುಷ್ಯನ ಚಿತ್ತಕ್ಕಿರುವುದೆಂದೂ ತಿಳಿದುಕೊಂಡರು. ಆದರೆ, ಇಂಥ ಸಿದ್ಧಿಗಳನ್ನು ಪಡೆದ ಮೇಲೆ ಮುಂದಕ್ಕೇನು? ಇಂಥ ಪ್ರಶ್ನೆಗಳು ಅವರನ್ನು ಹೆಚ್ಚಾಗಿ ಕಾಡಿದುವು.

ಯುಜಿ ಯೋಗಸಾಧನೆಗೆ ತೊಡಗುವ ಮೊದಲು 1932ರಲ್ಲಿ ಆಂಧ್ರಪ್ರದೇಶದ ಶಿವಗಂಗಾಮಠದ ಪೀಠಾಧ್ಯಕ್ಷರು ಅವರ ಮನೆಗೆ ಭೇಟಿಕೊಟ್ಟಿದ್ದರು. ಆಗ 14 ವರ್ಷದವರಾಗಿದ್ದ ಯುಜಿ, ಶಿಷ್ಯದೀಕ್ಷೆ ನೀಡಬೇಕೆಂದು ಕೇಳಿಕೊಂಡರು. ಅವರು ದೀಕ್ಷೆ ನೀಡದಿದ್ದರೂ, ಶಿವಪಂಚಾಕ್ಷರಿ ಮಂತ್ರೋಪದೇಶವನ್ನು ಅವರಿಂದ ಪಡೆದರು. ನಂತರ ಯುಜಿ ಏಳುವರ್ಷ ಶಿವಪಂಚಾಕ್ಷರಿ ಮಂತ್ರದ ಸಾಧನೆಯಲ್ಲಿ ತೊಡಗಿದರು. ಈ ನಡುವೆ ಥಿಯಾಸಾಫಿಕಲ್ ಸೊಸೈಟಿಯ ಅಧ್ಯಕ್ಷರಾಗಿದ್ದ ಆನಿಬೆಸೆಂಟ್ರ ಭೇಟಿಯಾದಾಗ, ‘ಸೊಸೈಟಿಯ ಕೆಲಸಗಳನ್ನು ನೀನು ಮುಂದುವರಿಸಬೇಕು’ ಎಂದು ಅವರು ಹೇಳಿದರಂತೆ. ನಂತರ ಥಿಯಾಸಾಫಿಕಲ್ ದೀಕ್ಷೆಯನ್ನು ಪಡೆಯದಿದ್ದರೂ ‘ಆಕೆ ಒಬ್ಬ ಅಪರೂಪದ ಮಹಿಳೆ’ ಎಂಬುದನ್ನು ಖಚಿತಪಡಿಸಿಕೊಂಡರು. 1944ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ತತ್ತ್ವಶಾಸ್ತ್ರ, ಮನಃಶಾಸ್ತ್ರ ಮತ್ತು ಅನುಭಾವಶಾಸ್ತ್ರ ಓದುತ್ತಿದ್ದರು. ಓದಿನಲ್ಲಿ ಮುಂದಿಲ್ಲದಿದ್ದರೂ ಅಧ್ಯಾಪಕರ ತಲೆತಿನ್ನುತ್ತಿದ್ದುದು ಸತ್ಯ. ಮದರಾಸಿನಲ್ಲಿರುವಾಗಲೇ ಭಗವಾನ್ ರಮಣರನ್ನು ಕಂಡರು. ಆದರೆ, ಅವರಿಗೆ ರಮಣರಿಂದ ವಿಶೇಷ ಅನುಭವಗಳೇನೂ ಆಗಲಿಲ್ಲ. ‘ನನಗೆ ಆತ್ಮಾನುಭವ ನೀಡಬಲ್ಲಿರಾ?’ ಎಂದು ಯುಜಿ ಕೇಳಿದ್ದಕ್ಕೆ ರಮಣರು ‘ನಾನೇನೊ ಕೊಡುವೆ, ನೀನದನ್ನು ಪಡೆಯಬಲ್ಲೆಯಾ?’ ಎಂದಿದ್ದು ಯುಜಿಯ ಅಹಮಿಕೆಯನ್ನು ಶೂನ್ಯಗೊಳಿಸಿತಂತೆ. ಯುಜಿ ಮದರಾಸಿನಲ್ಲಿರುವಾಗ 1946ರಲ್ಲಿ ಥಿಯಾಸಾಫಿಕಲ್ ಸೊಸೈಟಿಯ ಭಾರತೀಯ ವಿಭಾಗದ ಜಂಟಿಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆಗಾಗ್ಗೆ ರಾಷ್ಟ್ರಮಟ್ಟದ ಉಪನ್ಯಾಸಕರಾಗಿಯೂ ಕಾರ್ಯನಿರ್ವಹಿಸಬೇಕಾಗಿತ್ತು. ಇದಕ್ಕಾಗಿ ಇಂಗ್ಲೆಂಡ್, ಯುರೋಪ್, ಉತ್ತರ ಅಮೆರಿಕಗಳಿಗೆ ತೆರಳಿ ಉಪನ್ಯಾಸಗಳನ್ನು ನೀಡುತ್ತಿದ್ದರು. 1953ರಲ್ಲಿ ಸೊಸೈಟಿ ಯೊಂದಿಗೆ ವೈಚಾರಿಕ ಬಿರುಕುಕಾಣಿಸಿಕೊಂಡು ಜೆ.ಕೆ. ಮತ್ತು ಸೊಸೈಟಿ ಬಗೆಗೆ ಕಟುವಾಗಿ ಟೀಕಿಸಿ ಅದರ ಸಂಪರ್ಕವನ್ನು ಕಡಿದುಕೊಂಡರು. ನಂತರ ಆರ್ಥಿಕ ಮುಗ್ಗಟ್ಟಿನಿಂದಾಗಿ ಉಪನ್ಯಾಸಗಳನ್ನು ಮಾತ್ರ ಮಾಡುತ್ತಿದ್ದರು. 1972ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ನೀಡಿದ ಉಪನ್ಯಾಸವೇ ಅವರ ಕಟ್ಟಕಡೆಯ ಸಾರ್ವಜನಿಕ ಉಪನ್ಯಾಸ!

ವಿಕ್ಷಿಪ್ತ ಸ್ಪೋಟ: ಯುಜಿ ಜೀವನದುದ್ದಕ್ಕೂ ಹಲವು ಪ್ರಶ್ನೆಗಳನ್ನು ಹಾಕಿಕೊಂಡು ಉತ್ತರಗಳನ್ನು ಹುಡುಕುತ್ತಿದ್ದರು. 1967ರ ಜುಲೈ, ಆಗ ಯುಜಿಗೆ 49ರ ಪ್ರಾಯ. ಸ್ವಿಜರ್ಲೆಂಡಿನ ಸಾನೆನ್ ಕಣಿವೆಯ ಮನೆಯಲ್ಲಿದ್ದ ಅವರಿಗೆ ಆತ್ಮಾನುಭವದ ಸಂವೇದನೆ ಉಂಟಾಯಿತು. ಸಾಧನಾಮಾರ್ಗದಲ್ಲಿ ಬಹಳಷ್ಟು ಕ್ರಮಿಸದೆ ಹಾಗೆ ಉಳಿದುಬಿಟ್ಟೆನಲ್ಲಾ ಎಂಬ ಪ್ರಶ್ನೆ ಕಾಡುತ್ತಿತ್ತು. ಆ ಚಿಂತೆಯಲ್ಲಿ ಮುಳುಗಿರುವಾಗ ಏಳುದಿನಗಳ ಕಾಲ ಹಲವು ಅನುಭವಗಳು ಆದುವು. ಅಲ್ಲಿಯವರೆಗೆ ಅವರಿಗಿದ್ದ ‘ಜೀವನ್ಮರಣ’ದ ಪ್ರಶ್ನೆ ಶೂನ್ಯವಾಯಿತು. ಈ ಅನುಭವಗಳು ಉಂಟಾಗುವಾಗ ವ್ಯಾಲೆಂಟೈನ್, ಡಾಗ್ಲಾಸ್ ಮುಂತಾದ ಜಿಜ್ಞಾಸುಗಳ ಗಮನಕ್ಕೆ ಬಂದರೂ ಅದನ್ನು ಅರ್ಥಮಾಡಿಕೊಳ್ಳಲು ಅವರಿಗೆ ಆಗಲಿಲ್ಲ. ಯುಜಿ ಇದನ್ನು ‘ಸ್ಪೋಟ’ ಎಂದಿದ್ದಾರೆ. ಮೊದಲದಿನ ಅವರ ಚರ್ಮ ರೇಷ್ಮೆಯಷ್ಟು ಮೃದುವಾಯಿತು, ಮುಖ ಹಿಂದೆಂದಿಗಿಂತಲೂ ಅತುಲಕಾಂತಿ ಪಡೆಯಿತು. ಕಣ್ರೆಪ್ಪೆ ಚಲನೆಯನ್ನು ಕಳೆದುಕೊಂಡಿತು. ಎರಡನೆಯ ದಿನ ಮನಸ್ಸಿನಲ್ಲಿದ್ದ ಪೂರ್ವಸಂಸ್ಕಾರಗಳು ತೊರೆದುಹೋದುವು. ಹಿಂದಿನ ನೆನಪು, ಮುಂದಿನ ಕನಸುಗಳು ಕೊನೆಗೊಂಡು, ತತ್ಕಾಲಕ್ಷಣದಲ್ಲಿ ಜೀವಿಸಲು ಆರಂಭಿಸಿದರು. 3ನೆಯ ದಿನ ನಾಲಗೆ ಮತ್ತು ಘ್ರಾಣೇಂದ್ರಿಯಗಳು ಚುರುಕಾದುವು. ಗಂಧ ಮತ್ತು ಸಗಣಿ ಇವೆರಡೂ ವಾಸನೆಗಳು ಬೇರೆಬೇರೆ ಎನಿಸದೆಹೋದುವು. 4ನೆಯ ದಿವಸ ಕಣ್ಣಿನ ದೃಷ್ಟಿ ವಿಸ್ತಾರಗೊಂಡಿತು. ಅವರ ಬಳಿಬಂದ ವ್ಯಕ್ತಿಗಳು ಮತ್ತು ವಾಹನಗಳು ಅವರೊಳಗೆ ಬಂದಂಥ, ಅವರಿಂದಲೇ ಹೊರಹೋದಂಥ ಅನುಭವಗಳೂ ಆಗತೊಡಗಿದುವು. 5ನೆಯ ದಿವಸ ಶ್ರವಣೇಂದ್ರಿಯದಲ್ಲಿ ಕೆಲವು ಸ್ಪೋಟಗಳಾದುವು. ಹೊರಗಡೆ ಶಬ್ದ ಬರದೆ ತಮ್ಮೊಳಗೆ ಶಬ್ದ ಹೊಮ್ಮುವಂತಾಯಿತು. ಹೀಗೆ ಐದು ದಿನಗಳಲ್ಲಿ ಅವರ ಪಂಚೇಂದ್ರಿಯಗಳಲ್ಲಿ ವಿಶಿಷ್ಟ ಪರಿವರ್ತನೆಗಳಾದುವು.

ಆರನೆಯ ದಿವಸದ ಅನುಭವ ಇನ್ನೂ ವಿಶಿಷ್ಟವಾದುದು. ಅವರು ಸೋಫಾದ ಮೇಲೆ ಮಲಗಿದ್ದರು. ಅಲ್ಲಿ ದೇಹವೇ ಕಣ್ಮರೆಯಾಯಿತು. ಕೈಗಳಿದ್ದುವು, ದೇಹದ ಸ್ಪರ್ಶಾನುಭವ ಮಾತ್ರ ಆಗುತ್ತಿತ್ತು. ಆದರೆ ದೇಹವೇ ಪತ್ತೆಯಾಗಲಿಲ್ಲ. ಅವರೊಡನಿದ್ದ ವ್ಯಾಲೆಂಟೈನ್ಗೆ ‘ನನ್ನ ಶರೀರ ಕಾಣಿಸುತ್ತಿದೆಯೆ, ನನಗೊಂದು ಶರೀರವುಂಟು ಎಂಬ ಭಾವವೇ ಕಳೆದುಹೋಗುತ್ತಿದೆಯಲ್ಲಾ’ ಎಂದರು. ಏಳನೆಯ ದಿವಸ ಅವರ ಜೀವಚೈತನ್ಯವು ಪ್ರತಿಯೊಂದು ಅಂಗದಿಂದಲೂ ಒಂದು ಕೇಂದ್ರದತ್ತ ಸೇರತೊಡಗಿತು. ಸಾವಿನ ಪ್ರಕ್ರಿಯೆ ಪ್ರಾರಂಭವಾಯಿತೆಂದು ಅವರಿಗೆ ಅನ್ನಿಸಿತು. ಈ ಅನುಭವ 49 ನಿಮಿಷ ನಡೆಯಿತು. ಇದು ಶಾರೀರಿಕ ಮೃತ್ಯು, ಕಲ್ಪನೆಯಲ್ಲ ಎಂದು ಅನೇಕ ಬಾರಿ ಅವರು ಹೇಳಿದ್ದುಂಟು. ಹೀಗಾದ ವಿಕ್ಷಿಪ್ತ ಸ್ಪೋಟದಿಂದ ಅವರ ವ್ಯಕ್ತಿತ್ವದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಆದರೆ, ಅವರಿಗಿದ್ದ ಎಲ್ಲ ದುಗುಡ-ಸಂಶಯಗಳೂ ಇಲ್ಲವಾದುವು. ಇವೆಲ್ಲ ಉಂಟಾಗುವಾಗ ಹೊಟ್ಟೆ, ಕುತ್ತಿಗೆ ಮತ್ತು ತಲೆಯ ಭಾಗಗಳಲ್ಲಿ ಊತ ಕಾಣಿಸಿಕೊಂಡಿತು. ಯೋಗಶಾಸ್ತ್ರದಲ್ಲಿ ಹೇಳುವ ಷಟ್ಚಕ್ರಗಳ ಅನುಭವವೂ ಆಯಿತು. ಮುಂದೊಮ್ಮೆ ಯುಜಿ ವೈದ್ಯರೊಂದಿಗೆ ಸಮಾಲೋಚಿಸಿ ಷಟ್ಚಕ್ರಗಳ ಸ್ಥಾನದಲ್ಲಿ ನಿರ್ನಾಳಗ್ರಂಥಿಗಳಿರುತ್ತವೆಂದೂ, ಅವು ಎಚ್ಚರಗೊಳ್ಳುವುದೆಂದೂ ತಿಳಿದುಕೊಂಡರಂತೆ! ಥೈಮರ್ಗ್ರಂಥಿ ಬಾಲ್ಯದಲ್ಲಿದ್ದು ತಾರುಣ್ಯ ಬರುವ ವೇಳೆಗೆ ನಿಷ್ಕ್ರಿಯಗೊಳ್ಳುತ್ತದೆಂದೂ, ಅದು ಪುನಃ ಸಕ್ರಿಯಗೊಂಡಾಗ ವಿವಿಧ ಅನುಭವಗಳಾಗುವುದೆಂದೂ ಹೇಳಿದ್ದಾರೆ. ಯುಜಿ ಈ ಅನುಭವ ಪಡೆದ ಮೇಲೆ ಎದುರಿಗಿದ್ದವರ ಸಮಸ್ತ ವಿಚಾರಗಳೂ ಕಾಣಿಸುತ್ತಿದ್ದವು. ಏನನ್ನು ನುಡಿದರೂ ನಿಜವಾಗುತ್ತಿತ್ತು. ಪೂರ್ವಿಕರು ಇದನ್ನು ‘ವಾಕ್ಸಿದ್ಧಿ’ ಎಂದು ಕರೆದಿದ್ದಾರೆ. ಯುಜಿ ಅದನ್ನು ನಂತರ ಬಳಸಲು ಹೋಗಲಿಲ್ಲ.

ಸಂವಾದ-ವಾಗ್ವಾದ: ಯುಜಿ, ಸಾರ್ವಜನಿಕ ಉಪನ್ಯಾಸವನ್ನು ನಿಲ್ಲಿಸಿದ ಮೇಲೆ ಖಾಸಗಿ ಸಂವಾದಗಳಿಗೆ ಅವಕಾಶ ನೀಡಿದರು. ಜಗತ್ತಿನಾದ್ಯಂತ ಅನೇಕ ಅಭಿಮಾನಿಗಳನ್ನೂ ಜಿಜ್ಞಾಸುಗಳನ್ನೂ ಹೊಂದಿದ್ದ ಅವರು ಜೆ. ಕೃಷ್ಣಮೂರ್ತಿಯವರ ಜತೆಗೆ ಹಲವು ವರ್ಷ ಒಡನಾಡಿಯಾಗಿ ಇದ್ದವರೇ. ಅಮೆರಿಕ, ಇಂಗ್ಲೆಂಡ್, ಸ್ವಿಜರ್ಲೆಂಡ್ನಂಥ ಅನೇಕ ರಾಷ್ಟ್ರಗಳಲ್ಲಿ ಸಹಸ್ರಾರು ಜಿಜ್ಞಾಸುಗಳನ್ನು ಹೊಂದಿದ್ದರೂ ತಮ್ಮ ಹೆಸರಲ್ಲಿ ಯಾವುದೇ ಸಂಸ್ಥೆಗಳನ್ನು ಮಾಡದಿರಲು ನಿರ್ಧರಿಸಿದರು. ಅವರು ಯಾವುದೇ ಬರವಣಿಗೆ ಮಾಡದೆಹೋದರೂ ಅವರ ವಿಚಾರಗಳನ್ನು ಲಿಪ್ಯಂತೀಕರಿಸಿ ಸಂಕಲಿಸಿದ ‘ದಿ ಮಿಸ್ಟಿಕ್ ಆಫ್ ಎನ್ಲೈಟ್ವೆುಂಟ್’ 1982ರಲ್ಲಿ ಪ್ರಕಟವಾಯಿತು. ಇದನ್ನು ಸಂಕಲಿಸಿಕೊಟ್ಟವರು ಓಶೋ ರಜನೀಶರ ಶಿಷ್ಯರೇ. ಈ ಪುಸ್ತಕ ಯುಜಿಯ ವೈಚಾರಿಕ ಎಳೆಗಳನ್ನು ಬಿಚ್ಚಿಡುತ್ತದೆ. ಅವರು ಭಾರತಕ್ಕೆ ಬಂದಾಗ ಸರ್ವಪಲ್ಲಿ ರಾಧಾಕೃಷ್ಣನ್, ಜವಾಹರಲಾಲ್ ನೆಹರು, ಖುಷ್ವಂತ್ಸಿಂಗ್ ಭೇಟಿಮಾಡಿದ್ದರು. ಪರ್ವಿನ್ಬಾಬಿ ಮತ್ತು ಚಲನಚಿತ್ರ ನಿರ್ದೇಶಕ ಮಹೇಶ್ಭಟ್ ಅವರು ಯುಜಿಯ ಅಭಿಮಾನಿಗಳು. ಸ್ವಿಜರ್ಲೆಂಡ್ನ ವ್ಯಾಲೆಂಟೈನ್ ಡಿ. ಕರ್ವೆನ್ ಎಂಬಾಕೆಯ ಜತೆ ಯುಜಿ ಇದ್ದರು. ಆಕೆ ಅವರನ್ನು ಕೊನೆಯವರೆಗೂ ನೋಡಿಕೊಂಡರು. ತಮ್ಮ ಸಮಸ್ತ ಆಸ್ತಿಯನ್ನು ಅವರ ಪ್ರಯಾಣಕ್ಕೆ ಮೀಸಲಾಗಿಟ್ಟಿದ್ದರು. ಆಕೆಯ ದಿನಚರಿಯಲ್ಲಿ ಯುಜಿ ಬಗೆಗಿನ ಅಭಿಮಾನಪೂರ್ವಕ ಮಾತುಗಳು ಹೀಗಿವೆ- ‘ಇಂತಹ ವ್ಯಕ್ತಿ ನನಗೆಲ್ಲಿ ಸಿಗುತ್ತಿದ್ದ? ಕೊನೆಗೂ ಇವನು ನನಗೆ ಸಿಕ್ಕಿದ. ಬದುಕಿನಲ್ಲಿ ಇಂಥವರು ಸಿಗುವುದು ಕಷ್ಟ’.

ಯುಜಿ ಕರ್ನಾಟಕದ ಜತೆ ನಿಕಟ ಸಂಬಂಧವನ್ನು ಇಟ್ಟುಕೊಂಡಿದ್ದರು. ಉಡುಪಿಯ ಮಠಕ್ಕೆ ವ್ಯಾಲೆಂಟೈನ್ ಜತೆ ಭೇಟಿನೀಡಿದ್ದರು. ಶೃಂಗೇರಿಯ ಶ್ರೀಮದಭಿನವ ವಿದ್ಯಾತೀರ್ಥಸ್ವಾಮಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಯುಜಿ ಬಗೆಗೆ ಕುತೂಹಲಗೊಂಡ ಸ್ವಾಮಿಗಳು, ಅವರ ಅಸಾಮಾನ್ಯ ಪ್ರತಿಭೆಗೂ ವಿಚಾರಕ್ಕೂ ಮಾರುಹೋದರು. ಪ್ರೊ. ಕೆ.ಬಿ. ರಾಮಕೃಷ್ಣರಾವ್, ವೈಯೆನ್ಕೆ, ಬ್ರಹ್ಮಚಾರಿ ಶಿವರಾಮಶರ್ವ ಮುಂತಾದವರು ಯುಜಿ ಜತೆ ಸಂಪರ್ಕದಲ್ಲಿದ್ದವರೇ. ಅವರು ಖಾಸಗಿಯಾಗಿ ಸಹಸ್ರಾರು ಜಿಜ್ಞಾಸುಗಳ ಜತೆ ಸಂವಾದ ಮಾಡಿದ್ದಾರೆ! ಅವರ ವಿಚಾರಗಳನ್ನು ಕುರಿತು ಇಂಗ್ಲಿಷಿನಲ್ಲಿ ಕೆಲವೇ ಪುಸ್ತಕಗಳು ಪ್ರಕಟಗೊಂಡಿವೆ. ಚೆರ್ರಿ ನ್ಯೂಲ್ಯಾಂಡ್ ಸಂಪಾದಿಸಿ 1988ರಲ್ಲಿ ಪ್ರಕಟವಾದ ‘ಮೈಂಡ್ ಇಸ್ ಎ ಮಿಥ್’, ಮುಕುಂದರಾವ್ 2000ದಲ್ಲಿ ಪ್ರಕಟಿಸಿದ ‘ಯುಜಿ ಕೃಷ್ಣಮೂರ್ತಿ ರೀಡರ್’ ಪ್ರಮುಖವಾದುವು. ಪೆಂಗ್ವಿನ್ಸ್ ಬುಕ್ಸ್ ಇಂಡಿಯಾ ಪ್ರಕಟಿಸಿದ, ಮಹೇಶ್ ಭಟ್ರ ‘ಯುಜಿ ಕೃಷ್ಣಮೂರ್ತಿ ಎ ಲೈಫ್’ ಕೆಲವು ಅಪೂರ್ವ ಪ್ರಸಂಗಗಳನ್ನು ತೆರೆದಿಡುತ್ತದೆ. ವೈಯೆನ್ಕೆ ಬರೆದ ‘ಯುಜಿ ಅಲ್ಲ ಗುರೂಜಿ’ 1995ರಲ್ಲಿ ಪ್ರಕಟವಾಗಿರುವ ಮೊತ್ತಮೊದಲ ಕನ್ನಡಕೃತಿ. ಎಸ್.ಎ. ಶ್ಯಾಮರಾವ್ರ ‘ಯುಜಿ-ಬಯಲ ಬೆಳಗು’ ಪುಸ್ತಕ 1997ರಲ್ಲಿ ಪ್ರಕಟಿತ. ಈಚೆಗೆ ಟಿ.ಎನ್. ವಾಸುದೇವಮೂರ್ತಿ ‘ಇದನ್ನು ಬಯಸಿರಲಿಲ್ಲ’ ಎಂಬ ಪುಸ್ತಕವೊಂದನ್ನು ಹೊರತಂದಿದ್ದಾರೆ.

ಯುಜಿ ವಿಚಾರಗಳು ದಿಕ್ಕೆಡಿಸುವಂಥವು. ‘ದೇಹ ಅಜರಾಮರ, ಆತ್ಮವಲ್ಲ’, ‘ರಷ್ಯಾದಲ್ಲಿ ಕಮ್ಯೂನಿಸಂ, ಅಮೆರಿಕದಲ್ಲಿ ಸ್ವಾತಂತ್ರ್ಯ ಮತ್ತು ಭಾರತದಲ್ಲಿ ಅಧ್ಯಾತ್ಮವನ್ನು ಹುಡುಕಲು ಹೋಗಬೇಡಿ’, ‘ಮಾನವಕುಲದ ಸೇವೆ ವಾಸ್ತವದಲ್ಲಿ ಒಂದು ಸ್ವಾರ್ಥದ ಕೆಲಸ’, ‘ಮನುಷ್ಯನ ಆಂತರ್ಯದಲ್ಲಿ ಭಯವಲ್ಲದೆ ಮತ್ತಾವ ನಿಗೂಢವೂ ಇಲ್ಲ’, ‘ದೇವರು, ಪ್ರೇಮ, ಸಂತಸ, ಅಪ್ರಜ್ಞೆ, ಸಾವು, ಮರುಹುಟ್ಟು, ಆತ್ಮ ಇತ್ಯಾದಿಗಳು ಮನುಷ್ಯನ ಕಲ್ಪನಾವಿಲಾಸದಲ್ಲಿ ಹುಟ್ಟು ಪಡೆದ ಸುಂದರ ಭ್ರಮೆಗಳು’ ಇಂತಹ ಮಾತುಗಳನ್ನು ತರ್ಕಬದ್ಧವಾಗಿ ಮಂಡಿಸಿದ ಯುಜಿ ಬಗೆಗೆ ಅಚ್ಚರಿ ಮಾತ್ರ ನಮ್ಮಲ್ಲಿ ಮೂಡುತ್ತದೆ.

ಇಟಲಿಯ ಗೆಳೆಯರ ಮನೆಯಲ್ಲಿ, 22ರ ಮಾಚ್ 2003ರ ಮಧ್ಯಾಹ್ನ 2.30ಕ್ಕೆ ಯುಜಿ ಹೃದಯಸ್ತಂಭನದಿಂದ ದೇಹತ್ಯಾಗ ಮಾಡಿದರು. ಅವರ ಇಚ್ಛೆಯಂತೆ ಯಾವುದೇ ವಿಧಿವಿಧಾನಗಳಿಲ್ಲದೆ ದೇಹವನ್ನು ಸುಡಲಾಯಿತು. ಯುಜಿ ಸಾಯುವಾಗ ಕೆಲ ವಿದೇಶಿ ಗೆಳೆಯರು, ಬಾಲಿವುಡ್ ನಿರ್ದೇಶಕ ಮಹೇಶ್ಭಟ್ ಜತೆಗಿದ್ದರು. ಸಾವನ್ನು ಕುರಿತ ಯುಜಿಯ ವೈಜ್ಞಾನಿಕ ಮಾತುಗಳಿವು: ‘ಹುಟ್ಟು-ಸಾವನ್ನು ಬೇರೆಬೇರೆ ಮಾಡಿನೋಡಲು ಬರುವುದಿಲ್ಲ. ದೇಹ ಅವಸಾನವಾಗುವಾಗ ಶರೀರದ ಮೂಲಧಾತುಗಳು ವಿಭಜನೆಗೊಂಡು ಹೊಸಸೃಷ್ಟಿಗೆ ಜನ್ಮ ನೀಡುತ್ತವೆ. ಈ ಅರ್ಥದಲ್ಲಿ ದೇಹಕ್ಕೆ ಸಾವಿಲ್ಲ’. ಅವರು 85 ವರ್ಷ ಬದುಕಿದ್ದು ಕೊನೆಯವರೆಗೂ ವಾದ-ಸಂವಾದಗಳಲ್ಲಿಯೇ ನಿರತರಾಗಿದ್ದ ಅಪೂರ್ವ ಜಿಜ್ಞಾಸು.

Leave a Reply

Your email address will not be published. Required fields are marked *