ದೇವದುರ್ಗ: ವಿಶ್ವಗುರು ಬಸವಣ್ಣ ಅವರ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ ಖಂಡಿಸಿ ಪಟ್ಟಣದ ಮಿನಿವಿಧಾನಸೌಧ ಮುಂದೆ ಭೀಮ್ ಆರ್ಮಿ ಸಂಘಟನೆಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಜಗತ್ತಿನಲ್ಲೇ ಮೊದಲ ಅನುಭವ ಮಂಟಪ ಸ್ಥಾಪಿಸಿ ವಿಶ್ವಕ್ಕೆ ಸಮಾನತೆ ಪಾಠವನ್ನು ಬಸವಣ್ಣ ಬೋಧಿಸಿದ್ದಾರೆ. ಲಿಂಗ, ಜಾತಿ, ಧರ್ಮ ತಾರತಮ್ಯ ಹೋಗಲಾಡಿಸಲು ಬಸವಣ್ಣ ಶ್ರಮಿಸಿದ್ದಾರೆ. ಆದರೆ ಅಂಥ ಮಹಾನಾಯಕನ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ನೀಡಿರುವ ಹೇಳಿಕೆ ಖಂಡನೀಯ. ಅಲ್ಲದೆ ಸಂವಿಧಾನದ ಕುರಿತು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಮುಸ್ಲಿಮರ ಕುರಿತು ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ನೀಡಿರುವ ಹೇಳಿಕೆ ಕೂಡ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಲಾಯಿತು. ಕೋಮು ಭಾವನೆ ಕೆರಳಿಸುವ ನಾಯಕರು ಹಾಗೂ ಸ್ವಾಮೀಜಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.