ಯಡ್ರಾಮಿಯಲ್ಲಿ ಭಕ್ತಿಗೆ ಬರವಿಲ್ಲ

ವಿಜಯವಾಣಿ ಸುದ್ದಿಜಾಲ ಯಡ್ರಾಮಿ
ಮಳೆ-ಬೆಳೆಯಿಲ್ಲದೆ ಎಲ್ಲೆಡೆ ಬರ ಆವರಿಸಿರಬಹುದು, ಆದರೆ ಮನಸ್ಸಿನ ತುಂಬ ಶುದ್ಧ ಭಕ್ತಿ ಹೊಂದಿದ ಭಕ್ತರಿರುವ ಯಡ್ರಾಮಿಯಲ್ಲಿ ಭಕ್ತಿಗೆ ಯಾವುದೇ ಬರವಿಲ್ಲ ಎಂದು ಶಹಾಪುರ ಏಕದಂಡಗಿ ಮಠದ ಶ್ರೀ ಕಾಳಹಸ್ತೇಂದ್ರ ಸ್ವಾಮಿಗಳು ನುಡಿದರು.

ಪಟ್ಟಣದ ಶ್ರೀ ಮುರುಘೇಂದ್ರ ಶಿವಯೋಗಿ ವಿರಕ್ತ ಮಠದ ಶ್ರೀ ಸಿದ್ಧರಾಮ ಸ್ವಾಮಿಗಳ ಅಮೃತ ಮಹೋತ್ಸವ ಹಾಗೂ ಶ್ರೀ ಸಿದ್ಧಲಿಂಗ ದೇವರ ಚರಪಟ್ಟಾಧಿಕಾರ ಮಹೋತ್ಸವದ ನಿಮಿತ್ತ ಸೊನ್ನದ ಡಾ. ಶಿವಾನಂದ ಸ್ವಾಮಿಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಶ್ರೀ ಮಡಿವಾಳೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ರಾಚಮ್ಮ ಮುಗುಳಿ ಅವರಿಂದ ವಿರಕ್ತ ಮಠದ ಪೀಠಾಧಿಪತಿ ಶ್ರೀ ಸಿದ್ಧರಾಮ ಸ್ವಾಮಿಗಳಿಗೆ ತುಲಾಭಾರ ನಡೆಯಿತು.

ಶಹಾಪುರ ಚರಬಸವೇಶ್ವರ ಮಠದ ಶ್ರೀ ಬಸಯ್ಯ ಸ್ವಾಮಿಗಳು, ಶ್ರೀ ಸಿದ್ದಲಿಂಗ ದೇವರು, ಸ್ವಾಗತ ಸಮಿತಿ ಉಪಾಧ್ಯಕ್ಷ, ಮಾಜಿ ಶಾಸಕ ದೊಡಪ್ಪಗೌಡ ಪಾಟೀಲ್ ನರಿಬೋಳ, ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ತಾಪಂ ಸದಸ್ಯರಾದ ಪ್ರಶಾಂತ ರಾಠೋಡ, ಸಿದ್ದಣ್ಣ ಕವಲ್ದಾರ್ ಇತರರಿದ್ದರು.

ಮಠ- ಮಂದಿರ ಹಾಗೂ ಗುರುವಿನ ಬಳಿಗೆ ಬರುವಾಗ ಬಂಗಾರ, ಶೃಂಗಾರ ಬೇಡ. ನಿಮ್ಮ ದೇಹ ಮನಸ್ಸಿನ ತುಂಬ ಭಕ್ತಿ ಇದ್ದರೆ ಸಾಕು, ಅದೇ ಬಂಗಾರಕ್ಕೆ ಶ್ರಮ.
| ಶ್ರೀ ಕಾಳಹಸ್ತೇಂದ್ರ ಸ್ವಾಮಿಗಳು, ಏಕದಂಡಗಿ ಮಠ ಶಹಾಪುರ