ಯಡಿಯೂರಪ್ಪ ಸಿಎಂ ಆಸೆ ಬಿಡಲಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ರಾಜ್ಯದ ಮೈತ್ರಿ ಸರ್ಕಾರ ಪತನಗೊಳಿಸಲು ಮೂರು ಸಲ ಪ್ರಯತ್ನಿಸಿ ಬಿಜೆಪಿಯವರು ವಿಫಲವಾಗಿ ಮುಖಭಂಗ ಅನುಭವಿಸಿದ್ದಾರೆ. ಈಗಲಾದರೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗುವ ಆಸೆ ಬಿಟ್ಟು, ಉತ್ತಮ ಪ್ರತಿಪಕ್ಷ ನಾಯಕನಾಗಿ ಮಾದರಿ ಕೆಲಸ ಮಾಡಲಿ ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಎಫ್.ಎಚ್.ಜಕ್ಕಪ್ಪನವರ ಸಲಹೆ ನೀಡಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಪರಿಶಿಷ್ಟ ವಿಭಾಗದ ಪ್ರಮುಖರ ಜತೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರನ್ನು ಖರೀದಿಸಲು ಯತ್ನಿಸಿ ಮುಖಭಂಗ ಅನುಭವಿಸಿದರೂ ಬಿಜೆಪಿಯವರಿಗೆ ನಾಚಿಕೆ ಇಲ್ಲ ಎಂದು ಕಿಡಿಕಾರಿದರು.

ನಾವು ಮಾತು ಕೊಟ್ಟಂತೆ ಸಿಎಂ ರೈತರ ಸಾಲ ಮನ್ನಾ ಮಾಡಿದ್ದೇವೆ. ಇದನ್ನು ಸಹಿಸದ ಬಿಜೆಪಿಯವರು ಇಲ್ಲದ ಕುತಂತ್ರ ಮಾಡುತ್ತ ಸರ್ಕಾರ ಅಸ್ಥಿರಗೊಳಿಸಲು ಹುನ್ನಾರ ನಡೆಸುತ್ತಿರುವುದು ಶೋಭೆ ತರುವಂಥದ್ದಲ್ಲ ಎಂದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದಲಿತ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಜೆಟ್ನಲ್ಲಿ ಅನುದಾನ ಕಡಿತಗೊಳಿಸುವ ಮೂಲಕ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ಈ ಸರ್ಕಾರದ ಜನವಿರೋಧಿ ನೀತಿಗಳಿಂದ ಬೇಸತ್ತ ಉತ್ತರ ಭಾರತದ ಜನರು ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಿದ್ದಾರೆ ಎಂದು ಹೇಳಿದರು.

ರಫೇಲ್ ಹಗರಣ ತನಿಖೆಗೆ ಜೆಪಿಸಿ ರಚಿಸಬೇಕು. ಸಿಬಿಐ ಇತರ ಸಂಸ್ಥೆಗಳನ್ನು ದುರ್ಬಲಗೊಳಿಸಿದ ಕೀರ್ತಿ ಪ್ರಧಾನಿ ಮೋದಿಗೆ ಸಲ್ಲುತ್ತದೆ. ಹೀಗಾಗಿ ಜನರು ಸಿಡಿದೆದಿದ್ದಾರೆ. ಸಂವಿಧಾನ ವಿರೋಧಿ ಬಿಜೆಪಿ ಸೋಲಿಸಲು ಎಲ್ಲ ಪಕ್ಷದವರು ಒಂದಾಗಿದ್ದರಿಂದ ಈ ಸಲ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಸರ್ಕಾರ ರಚನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್, ಪರಿಶಿಷ್ಟ ಜಾತಿ ವಿಭಾಗ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಜಿಪಂ ಮಾಜಿ ಸದಸ್ಯ ಮಾಪಣ್ಣ ಗಂಜಗೇರಿ, ಮಲ್ಲಿಕಾರ್ಜುನ ನಿಲೂರೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಲತಾ ರವಿ ರಾಠೋಡ ಇತರರಿದ್ದರು.

ಡಾ.ಜಾಧವ್ ಬಂದ್ರೆ ಸ್ವಾಗತ ಬರದಿದ್ರೂ ಫರಕ್ ಬೀಳಲ್ಲ

ಶಾಸಕ ಡಾ.ಉಮೇಶ ಜಾಧವ್ ಮರಳಿ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ. ಬಿಟ್ಟು ಹೋದರೀ ಫರಕ್ ಬೀಳಲ್ಲ. ಅವರು ಕೂಡಲೇ ಸಿಎಲ್ಪಿ ನಾಯಕರನ್ನು ಸಂಪರ್ಕಿಸಿ ಕಾಂಗ್ರೆಸ್ ಜತೆಗಿರುತ್ತೇನೆ ಎಂದು ಹೇಳಲಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್ ಸಲಹೆ ನೀಡಿದರು. ಕೆಪಿಸಿಸಿಯವರು ಅವರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಸಂಪರ್ಕಕ್ಕೆ ಸಿಕ್ಕರೆ ತಾನೇ ಮನವೊಲಿಸಬೇಕು ಎಂದ ಅವರು, ಕಾಂಗ್ರೆಸ್ ಬಿಟ್ಟು ಹೋಗಲ್ಲ ಎಂಬ ವಿಶ್ವಾಸವಿದೆ. ಇನ್ನು ಚಿಂಚೋಳಿ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್ ಅಶಿಸ್ತು ಸಹಿಸಲ್ಲ. ಪಕ್ಷದ ನಾಯಕರ ವಿರುದ್ಧ ಮಾತನಾಡಿದರೆ ಪಕ್ಷ ವಿರೋಧಿ ಚಟುವಟಿಕೆಯೇ ಆಗುತ್ತದೆ. ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜಕ್ಕಪ್ಪನವರ ಹೇಳಿದರು.