ತೀರ್ಥಹಳ್ಳಿ: ಮಂದಾರ್ತಿ ಮೇಳದ ಹರಕೆ ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ ಪಡಿಸಿದ್ದಲ್ಲದೆ ಕಲಾವಿದರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಕಿಡಿಗೇಡಿಗಳಿಗೆ ಜನರೇ ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಗುರುವಾರ ರಾತ್ರಿ ಪಟ್ಟಣಕ್ಕೆ ಸಮೀಪದ ಮೇಲಿನಕುರುವಳ್ಳಿಯಲ್ಲಿ ನಡೆದಿದೆ.
ಮೇಲಿನಕುರುವಳ್ಳಿಯ ಧರ್ಮ ಎಂಬುವರ ಕುಟುಂಬದ ಮಂದಾರ್ತಿ ಮೇಳದ ಹರಕೆ ಬಯಲಾಟ ನಡೆಯುತ್ತಿದ್ದ ವೇಳೆ ಈ ಕೃತ್ಯ ನಡೆದಿದೆ. ದೇವಿ ಮಹಾತ್ಮೆ ಪ್ರಸಂಗದ ಪ್ರಮುಖ ದ್ರಶ್ಯ ಆರಂಭವಾಗುವ ವೇಳೆ ಕಿಡಿಗೇಡಿ ಯುವಕನೊಬ್ಬ ಕುಡಿದ ಮತ್ತಿನಲ್ಲಿ ಡೈನಾಮೋ ಜನರೇಟರ್ ಆಫ್ ಮಾಡಿದ್ದಾನೆ. ಇದನ್ನು ಪ್ರಶ್ನಿಸಿದ ಮೇಳದ ಸಿಬ್ಬಂದಿ ಮೇಲೆಯೇ ಕೈ ಮಾಡಿದ್ದಾನೆ. ಮೇಳದ ಸಿಬ್ಬಂದಿಯ ನೆರವಿಗೆ ಬಂದವರ ಮೇಲೆ ಕಿಡಿಗೇಡಿಯ ಪರವಾಗಿ ಒಂದಿಬ್ಬರು ಹಲ್ಲೆ ನಡೆಸಲು ಮುಂದಾಗಿದ್ದಾರೆ. ಇದರಿಂದ ಕೆಲ ಹೊತ್ತು ಯಕ್ಷಗಾನ ಪ್ರದರ್ಶನಕ್ಕೂ ಅಡ್ಡಿಯಾಗಿತ್ತು. ಸ್ಥಳದಲ್ಲಿದ್ದವರು ಯಕ್ಷಗಾನಕ್ಕೆ ಅಡ್ಡಿಪಡಿಸಿದವರಿಗೆ ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಯಕ್ಷಗಾನ ಮುಂದುವರಿದಿದೆ.