ಹೂವಿನಹಡಗಲಿ: ಇತ್ತೀಚಿನ ದಿನಗಳಲ್ಲಿ ರೈತರು ಜಾನುವಾರುಗಳನ್ನು ಬಳಸಿಕೊಂಡು ಕೃಷಿ ಮಾಡುವ ಪದ್ಧತಿ ಕೈಬಿಡುತ್ತಿದ್ದಾರೆ, ಇದರಿಂದಾಗಿ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಹೇಳಿದರು.
ಕೊಟ್ನೆಕಲ್ ಕ್ಯಾಂಪಿನಲ್ಲಿ ಶಂಕರಲಿಂಗೇಶ್ವರ ಸ್ವಾಮಿಯ 17ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಜಾನುವಾರುಗಳ ಜಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಪ್ರಾಚೀನ ಕಾಲದ ಕೃಷಿ ಪದ್ಧತಿಯಲ್ಲಿ ಜಾನುವಾರುಗಳಿಲ್ಲದೆ ಕೃಷಿ ಚಟುವಟಿಕೆ ಮಾಡುವುದು ಕಷ್ಟಕರವಾಗಿತ್ತು. ಇತ್ತೀಚಿನ ದಿನಗಳಲ್ಲಿನ ರೈತರು ಯಂತ್ರಗಳನ್ನು ಅತಿಹೆಚ್ಚಾಗಿ ಬಳಸುತ್ತಿರುವ ಕಾರಣ ಜಾನುವಾರುಗಳ ಸಾಕಣೆ ಕಡಿಮೆಯಾಗುತ್ತಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಾನುವಾರುಗಳು ಕಾಣಿಸುತ್ತಿದ್ದವು. ಇದೀಗ ಕಡಿಮೆಯಾಗುತ್ತಿರುವುದು ನಮ್ಮ ಸಂಸ್ಕೃತಿಯ ಬದಲಾವಣೆಯ ಸಂಕೇತ ಎಂದರೆ ತಪ್ಪಾಗಲಾರದು. ಕೃಷಿ ಕುಟುಂಬದಲ್ಲಿ ಎಂಟು ಎತ್ತಿನ ಕೃಷಿ ಮಾಡುವ ಕುಟುಂಬಗಳಿದ್ದವು, ಇಂದು ಆ ಸ್ಥಳಗಳನ್ನು ಯಂತ್ರಗಳು ಆವರಿಸಿಕೊಂಡಿವೆ ಎಂದು ಡಾ.ಹಿರಿಶಾಂತವೀರ ಸ್ವಾಮೀಜಿ ತಿಳಿಸಿದರು.
ಗದಗ, ಹಾವೇರಿ, ಮುಂಡರಗಿ, ಹರಪನಹಳ್ಳಿ, ಶಿರಾಳಕೊಪ್ಪ, ಕೊಪ್ಪಳ, ಲಕ್ಷೇೀಶ್ವರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಜಾನುವಾರುಗಳನ್ನು ತರಲಾಗಿತ್ತು. ಶಂಕರಲಿಂಗೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಓಲಿ ಈಶಪ್ಪ, ಪ್ರಮುಖರಾದ ಧನಂಜಯರೆಡ್ಡಿ, ಗುಡ್ಡಪ್ಪ, ಎಂ.ಬಿ.ಬಸವರಾಜ, ಚಂದ್ರಯ್ಯ ಇತರರಿದ್ದರು.