ಮೈಸೂರು: ವಿದ್ಯಾರ್ಥಿಗಳು, ಸಂಶೋಧಕರು, ಸಾರ್ವಜನಿಕರು ಭಾನುವಾರ ನಗರದ ವಸ್ತು ಸಂಗ್ರಹಾಲಯಗಳನ್ನು ವೀಕ್ಷಣೆ ಮಾಡಿ ಬೆರಗಾದರು.

ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ ಪ್ರಯುಕ್ತ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಮ್ಯೂಸಿಯಂ ಆನ್ ವೀಲ್ಸ್’ ಕಾರ್ಯಕ್ರಮಕ್ಕೆ ಈ ಅವಕಾಶವನ್ನು ಕಲ್ಪಿಸಿಕೊಟ್ಟಿತು. ವೆಲ್ಲಿಂಗ್ಟನ್ ಸರ್ಕಾರಿ ವಸ್ತು ಸಂಗ್ರಹಾಲಯದ ಆವರಣದಲ್ಲಿ ಇದಕ್ಕೆ ಚಾಲನೆ ದೊರೆಯಿತು.
2 ಬಸ್‌ಗಳಲ್ಲಿ ಮಾರ್ಗದರ್ಶಕರೊಂದಿಗೆ ಪ್ರಯಾಣಿಸಿದ ನಾಗರಿಕರು ವಸ್ತು ಸಂಗ್ರಹಾಲಯಗಳಲ್ಲಿನ ಐತಿಹಾಸಿಕ ವಸ್ತುಗಳನ್ನು ನೋಡಿ ಅಚ್ಚರಿಗೊಂಡರು. ಚರಿತ್ರೆಯ ವಿಷಯವನ್ನೂ ತಿಳಿದುಕೊಂಡರು.
ಪಯಣ (ಕಾರ್ ಮ್ಯೂಸಿಯಂ), ಶ್ರೀರಂಗಪಟ್ಟಣ ನಂತರ ಮೈಸೂರಿನ ಪ್ರಾಕೃತಿಕ ಪ್ರಾದೇಶಿಕ ವಸ್ತು ಸಂಗ್ರಹಾಲಯ ಹಾಗೂ ರೈಲ್ವೆ ಮ್ಯೂಸಿಯಂ ಮೂಲಕ ಹಾದು ವೆಲ್ಲಿಂಗ್ಟನ್ ಸರ್ಕಾರಿ ವಸ್ತುಸಂಗ್ರಹಾಲಯ ಮತ್ತು ಕಲಾ ಗ್ಯಾಲರಿಯೊಂದಿಗೆ ಪಾರಂಪರಿಕ ಯಾತ್ರೆ ಕೊನೆಗೊಂಡಿತು.
1799ರಲ್ಲಿ ಆರ್ಥರ್ ವೆಲ್ಲೆಸ್ಲಿಗಾಗಿ ನಿರ್ಮಿಸಿದ ‘ವೆಲ್ಲಿಂಗ್ಟನ್’ ಬಂಗಲೆಯ ಸೌಂದರ್ಯವನ್ನು ಕಣ್ಣುಂಬಿಕೊಂಡರು. ‘ಕಲಾ ಗ್ಯಾಲರಿ’ಯಲ್ಲಿದ್ದ ಚಿಕಣಿ, ಗಂಜೀಫಾ, ಮೈಸೂರು, ತಂಜಾವೂರು ಚಿತ್ರಕಲೆ ಸೇರಿದಂತೆ ವಿವಿಧ ಶೈಲಿಗಳ ಕಲಾಕೃತಿಗಳನ್ನು ನೋಡಿ ಸಂಭ್ರಮಿಸಿದರು.
ಸಿದ್ಧಾರ್ಥನಗರದಲ್ಲಿರುವ ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತುಸಂಗ್ರಹಾಲಯದಲ್ಲಿ (ಆರ್‌ಎಂಎನ್‌ಎಚ್) ಜೀವ ವೈವಿಧ್ಯ, ವಿಜ್ಞಾನ, ಜೀವ ವಿಕಾಸದ ಮಾಹಿತಿಗಳನ್ನು ಅರಿತರು.
ರೈಲ್ವೆ ವಸ್ತು ಸಂಗ್ರಹಾಲಯದಲ್ಲಿ ದೇಶದ ರೈಲ್ವೆ ವಿಕಾಸವನ್ನು ಕೌತುಕದಿಂದ ವೀಕ್ಷಿಸಿದರು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿಯಲ್ಲಿ ಸ್ಥಾಪಿತವಾದ ‘ಪಯಣ’ ಕಾರು ವಸ್ತು ಸಂಗ್ರಹಾಲಯದಲ್ಲಿ ಹಳೆಯ ವಿಂಟೇಜ್ ಕಾರ್ ವೀಕ್ಷಿಸಿ ಖುಷಿ ಪಟ್ಟರು.
ಮೈಸೂರು, ಮಂಡ್ಯ ಮತ್ತು ಹಾಸನ ಜಿಲ್ಲೆಗಳಿಂದ ಮಕ್ಕಳು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ವಯಸ್ಕರು ಹಾಗೂ ಹಿರಿಯ ನಾಗರಿಕರು ಸೇರಿ 10 ರಿಂದ 70 ವಯೋಮಾನದವರು ಒಳಗೊಂಡಂತೆ 130 ಜನರು ಈ ಪಾರಂಪರಿಕ ಯಾತ್ರೆಗೆ ಸಾಕ್ಷಿಯಾದರು. ಇವರೆಲ್ಲರಿಗೂ ವಸ್ತು ಸಂಗ್ರಹಾಲಯಗಳು ವ್ಯಕ್ತಿಯ ಜೀವನದಲ್ಲಿ ಎಷ್ಟು ಪ್ರಾಮುಖ್ಯತೆ ಹೊಂದಿವೆ, ಅವುಗಳ ವಿಶೇಷತೆ ಕುರಿತು ಅರಿವು ಮೂಡಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಇಲಾಖೆಯ ಆಯುಕ್ತ ಎ.ದೇವರಾಜು ಮಾತನಾಡಿ, ‘ವಸ್ತು ಸಂಗ್ರಹಾಲಯಗಳು ನಮ್ಮ ಪರಂಪರೆ ಹಾಗೂ ಸಂಸ್ಕೃತಿ ತೋರುವ ಕುರುಹುಗಳು.
ಮುಂದಿನ ಪೀಳಿಗೆಗೆ ಸ್ಮಾರಕಗಳನ್ನು ಉಳಿಸುವ ಕೆಲಸ ಮಾಡಲಾಗುತ್ತಿದೆ. ‘ವೇಗವಾಗಿ ಬದಲಾಗುತ್ತಿರುವ ಸಮುದಾಯಗಳಲ್ಲಿ ವಸ್ತು ಸಂಗ್ರಹಾಲಯಗಳ ಭವಿಷ್ಯ’ ಈ ಸಲದ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ ಘೋಷಣೆಯಾಗಿದೆ. ವಿದ್ಯಾರ್ಥಿಗಳು, ಯುವಕರಲ್ಲಿ ಪರಂಪರೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಕಳೆದ 8 ವರ್ಷದಿಂದ ಪ್ರತಿ ವರ್ಷವೂ ಮ್ಯೂಸಿಯಂ ಆನ್ ವೀಲ್ಸ್ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಇಲಾಖೆಯ ಉಪ ನಿರ್ದೇಶಕಿ ಸಿ.ಎನ್.ಮಂಜುಳಾ, ಪುರಾತತ್ವ ಸಂರಕ್ಷಣಾ ಇಂಜಿನಿಯರ್ ಟಿ.ತಾರಕೇಶ, ಸಹಾಯಕ ನಿರ್ದೇಶಕ ಸುನೀಲ್ ಕುಮಾರ್, ರಾಜ್ಯ ಪತ್ರಾಂಕಿತ ಸಹಾಯಕ ಡಿ.ಮಂಜುನಾಥ ಪಾಲ್ಗೊಂಡಿದ್ದರು.