ಮ್ಯೂಸಿಕ್ ಥೆರಪಿ ಪರ್ಯಾಯ ವಿಧಾನ

ಹುಬ್ಬಳ್ಳಿ:ವೈದ್ಯಕೀಯ ಕ್ಷೇತ್ರದಲ್ಲಿ ಮ್ಯೂಸಿಕ್ ಥೆರಪಿ ಪರ್ಯಾಯ ಚಿಕಿತ್ಸಾ ವಿಧಾನವಾಗಿ ಬೆಳೆಯುತ್ತಿದೆ ಎಂದು ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಅಭಿಪ್ರಾಯಪಟ್ಟರು.

ಇಂಡಿಯನ್ ಮ್ಯೂಸಿಕ್ ಥೆರಪಿ ಅಸೋಸಿಯೇಷನ್ ಹಾಗೂ ಮನತರಂಗ ಕೌನ್ಸೆಲಿಂಗ್ ಸಹಯೋಗದಲ್ಲಿ ‘ಸಂಗೀತ ಚಿಕಿತ್ಸೆ’ ಕುರಿತು ವಿದ್ಯಾನಗರದ ಬಿವಿಬಿ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ಸೆಮಿನಾರ್ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಒತ್ತಡ ಹಾಗೂ ಮಾನಸಿಕ ಕಾಯಿಲೆಗಳಿಗೆ ಸಂಗೀತ ಚಿಕಿತ್ಸೆ ಪರಿಣಾಮ ಬೀರಬಲ್ಲದು. ಎಲ್ಲರನ್ನೂ ಒಂದುಗೂಡಿಸಿ ಮನಸ್ಸು ಹಗುರಗೊಳಿಸುತ್ತದೆ. ಮಕ್ಕಳು ವಿಡಿಯೊ ಗೇಮ್ ವಾಟ್ಸ್​ಆಪ್, ಬ್ಲೂವೇಲ್ ಗೇಮ್ ಕಂಪ್ಯೂಟರ್​ನಲ್ಲಿ ಮುಳುಗಿಹೋಗಿದ್ದಾರೆ. ಇದು ಡಿಜಿಟಲ್ ವ್ಯಸನ. ಮಕ್ಕಳನ್ನು ಇದರಿಂದ ಹೊರತರಲು ಮ್ಯೂಸಿಕ್ ಥೆರಪಿ ಬಳಸಬೇಕು ಎಂದು ಸಲಹೆ ನೀಡಿದರು.

ಐಎಂಟಿಎ ಅಧ್ಯಕ್ಷ ಡಾ.ಟಿ.ವಿ. ಸಾಯಿರಾಮ್ ಮಾತನಾಡಿ, ಸಂಗೀತ ಜಾಗತಿಕ ಭಾಷೆಯಾಗಿದ್ದು, ಅದರೊಳಗೆ ಭಾವನೆಗಳಿವೆ. ಯಾವುದೇ ವ್ಯಕ್ತಿ ಸಂಗೀತಕ್ಕೆ ಪ್ರತಿಕ್ರಿಯಿಸದೇ ಇರಲಾರ. ಸಕಾರಾತ್ಮಕ ಅಂಶ ಸಂಗೀತದಲ್ಲಿದೆ ಎಂದರು. ಎಎಂಟಿಎ ಜಂಟಿ ಕಾರ್ಯದರ್ಶಿ ಅಪರ್ಣಾ ದೀಕ್ಷಿತ ಅವರು ‘ಜೀವನದಲ್ಲಿ ವಿಭಿನ್ನ ಹಂತಗಳಲ್ಲಿ ಸಂಗೀತ ಚಿಕಿತ್ಸೆ ಪಾತ್ರ’, ಜನರಲ್ ಸೆಕ್ರೆಟರಿ ಡಾ. ಮೀನಾಕ್ಷಿ ರವಿ ಅವರು ‘ಭಾರತೀಯ ಸಂಗೀತದಲ್ಲಿ ಚಿಕಿತ್ಸಾ ಗುಣ’, ರಶ್ಮಿ ಯತಿರಾಜು ಅವರು ‘ಸಂಗೀತ ಚಿಕಿತ್ಸಕರ ಅರ್ಹತೆ’ ಕುರಿತು ಮಾತನಾಡಿದರು.