ಮೌನವೇ ನಿಜವಾದ ಆನಂದ

‘ಮಾತು ಬೆಳ್ಳಿ ಮೌನ ಬಂಗಾರ’ ಎಂಬುದು ಕನ್ನಡದ ಒಂದು ಹಳೆಯ ಗಾದೆ. ಬೆಳ್ಳಿಗಿಂತ ಬಂಗಾರವು ಬೆಲೆಯಲ್ಲಿ ಹಾಗೂ ಅಂದದಲ್ಲಿ ಶ್ರೇಷ್ಠ ವೆಂಬುದು ನಮ್ಮೆಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಪ್ರಪಂಚದಲ್ಲಿನ ಉತ್ತಮ ವಸ್ತುಗಳು ಮೌನವಾಗಿಯೇ ತಮ್ಮ ಕಾರ್ಯವನ್ನು ಮಾಡುತ್ತಿವೆ. ಪೂಜ್ಯ ಡಿ.ವಿ.ಜಿ. ‘ವನಸುಮ’ ಪದ್ಯದಲ್ಲಿ ಹೀಗೆನ್ನುತ್ತಾರೆ: ‘ಕಾನನದಿ ಮಲ್ಲಿಗೆಯು ಮೌನದಿಂ ಬಿರಿದು ನಿಜ ಸೌರಭವ ಸೂಸಿ ನಲವಿಂ’

ಕಾಡಿನಲ್ಲಿರುವ ಮಲ್ಲಿಗೆ ಮೌನವಾಗಿಯೇ ಅರಳಿ ಸುಗಂಧವನ್ನು ಹರಡುತ್ತದೆ. ಪ್ರಕೃತಿಯಲ್ಲಿನ ಪ್ರತಿ ವಸ್ತುವು ಹೀಗೆಯೇ ಜೀವಿಸುತ್ತಿವೆ. ಹೂವು ಹಣ್ಣಾಗಲು ದುಂಬಿ ಬೇಕು. ಮರಗಿಡಗಳು ಹಸುರಾಗಲು ಸೂರ್ಯನ ಬೆಳಕು ಬೇಕು. ಬಿಸಿಲಿನ ಕಾವಿಗೆ ಸಮುದ್ರದ ನೀರು ಮೋಡವಾಗಿ, ಮಳೆಗಾಲದಲ್ಲಿ ಮಳೆ ಸುರಿಸುತ್ತದೆ. ಇವೆಲ್ಲ ಜಗತ್ತಿನಲ್ಲಿ ಮೌನವಾಗಿ ನಡೆಯುತ್ತಿದೆ. ಮನುಷ್ಯನು ಪ್ರಕೃತಿಯ ಅಂಗವಾಗಿದ್ದರೂ ಆತ ಪ್ರಕೃತಿಗೆ ವಿರುದ್ಧವಾಗಿ ಸ್ವಾರ್ಥವನ್ನು ಹೊಂದಿದವನಾಗಿದ್ದಾನೆ. ಡಿ.ವಿ.ಜಿ. ಮಂಕುತಿಮ್ಮನ ಕಗ್ಗದಲ್ಲಿ ಹೀಗೆನ್ನುತ್ತಾರೆ:

ಇಳೆಯಿಂದ ಮೊಳಕೆಯೊಗವಂದು ತಮಟೆಗಳಿಲ್ಲ

ಫಲಮಾಗುವಂದು ತುತ್ತೂರಿ ದನಿಯಿಲ್ಲ |

ಬೆಳಕೀವ ಸೂರ್ಯ-ಚಂದ್ರರದೊಂದು ಸದ್ದಿಲ್ಲ

ಹೊಲಿ ನಿನ್ನ ತುಟಿಗಳನು – ಮಂಕುತಿಮ್ಮ || 661 ||

ನಾನು, ನನ್ನಿಂದ, ನಾನೇ ಎಂಬ ಶಬ್ದಗಳು ನಮ್ಮ ಶತ್ರುಗಳು. ನಾನು ಕಲಿಸಿದೆ, ನನ್ನ ಶಿಷ್ಯರು, ಇವು ಕೇವಲ ಅಹಂಕಾರದ ಮಾತುಗಳು. ಕಲಿಸುವ ಗುರುವಿಗಿಂತ ಕಲಿಯುವ ಶಿಷ್ಯನೇ ಮುಖ್ಯ. ಗುರುವು ತಾನು ‘ಗುರು’ ಎಂದರೆ ಅದು ಅಹಂಕಾರ. ಗುರುವಿನ ಅಸ್ತಿತ್ವ ಶಿಷ್ಯನಿಗೆ ಮಾತ್ರ. ಹೇಗೆ ನಾನು ನನ್ನ ಮಗನಿಗೆ ಮಾತ್ರ ಅಪ್ಪನೋ, ನಾನು ನನ್ನ ಹೆಂಡತಿಗಷ್ಟೇ ಗಂಡನೋ ಹಾಗೆಯೇ ಶಿಷ್ಯನಿಗೆ ಅಷ್ಟೇ ಗುರುವಾಗಿದ್ದೇನೆ.

ಮೌನವನ್ನು ಆಶ್ರಯಿಸಿದರೆ ಬದುಕು ಆನಂದಮಯವಾಗುತ್ತದೆ. ಹೂವು ಅರಳಿ ಸುಗಂಧವನ್ನು ಮೌನದಿಂದ ಹರಡುತ್ತದೆ. ಗಾಳಿ, ಬೆಳಕು, ನೀರು ಇವು ಎಂದಿಗೂ ತಮ್ಮ ಅಸ್ತಿತ್ವವನ್ನು ಜಗತ್ತಿಗೆ ನೀಡುತ್ತಿದ್ದೇವೆಂದು ಮೆರೆದಿಲ್ಲ. ಮನುಷ್ಯನು ಅಹಂಕಾರಿಯಾಗಿ ತನಗೂ ಜಗತ್ತಿಗೂ ಕೇಡನ್ನು ಉಂಟುಮಾಡುತ್ತಿದ್ದಾನೆ. ನೀಡುವವ ಮೌನವಾಗಿರುತ್ತಾನೆ. ಬೇಡುವವ ಮಾತ್ರ ಪ್ರಾರ್ಥಿಸುತ್ತಾನೆ. ನಮ್ಮ ಪ್ರಾರ್ಥನೆ, ಸ್ತುತಿ, ಎಲ್ಲವೂ ಮಾತೇ ಆಗಿದ್ದು ಅಲ್ಪತನದ ಪ್ರತೀಕ. ನಿಜದಲ್ಲಿ ಮೌನವೇ ಆನಂದ.