ಮೌಢ್ಯತೆಯಿಂದ ಹೊರಬರಲು ಜಾಗೃತಿ ಮೂಡಿಸಿ

ಅರಸೀಕೆರೆ: ಮನುಷ್ಯ ಮೌಢ್ಯತೆಯಿಂದ ಹೊರಬರದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು ತಾಲೂಕು ಹಿಂದುಳಿದ ವರ್ಗಗಳ ಇಲಾಖೆಯ ಕಲ್ಯಾಣಾಧಿಕಾರಿ ನಾರಾಯಣಪ್ಪ ಹೇಳಿದರು.

ತಾಲೂಕಿನ ಮುರುಂಡಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬುಡಕಟ್ಟು, ಅಲೆಮಾರಿ, ಅರೆ-ಅಲೆಮಾರಿ, ಯಾದವ ಸೇರಿ ಎಲ್ಲ ಸಮುದಾಯಗಳ ಬಳಿ ತೆರಳಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಸಂಪ್ರದಾಯ, ವಂಶ ಪಾರಂಪರ್ಯದ ಹೆಸರಿನಲ್ಲಿ ಸುಶಿಕ್ಷಿತರು ಮೌಢ್ಯಗಳಿಗೆ ಜೋತು ಬಿದ್ದಿರುವುದು ಆತಂಕಕಾರಿ ಸಂಗತಿ ಎಂದರು.

ಗ್ರಾಪಂ ಅಧ್ಯಕ್ಷ ಜಗದೀಶ್ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ದಿವ್ಯಾ ಅವರು ‘ಸ್ತ್ರೀಯರ ಆರೋಗ್ಯ ರಕ್ಷಣೆ’ ಕುರಿತು ಮಾಹಿತಿ ನೀಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಪ್ಪ, ಪ್ರಯೋಗಶಾಲೆ ತಜ್ಞ ಬಿ.ಪರಮೇಶ್, ಮುಖಂಡ ಜವನಪ್ಪ ಸೇರಿ ಗ್ರಾಪಂ ಸದಸ್ಯರು ಹಾಗೂ ನಾಗರಿಕರು ಪಾಲ್ಗೊಂಡಿದ್ದರು.