More

  ಮೋದಿ ವಿರುದ್ಧ ಆರೋಪಗಳ ಸುರಿಮಳೆಗೈದ ಪ್ರಿಯಾಂಕಾ

  ಚಿತ್ರದುರ್ಗ: ಜಗತ್ತಿನ ಬಲಿಷ್ಠ ನಾಯಕನೆಂದು ಹೇಳಿಕೊಳ್ಳುವ ನೀವು ನಿಮ್ಮ 10 ವರ್ಷದ ಆಡಳಿತದ ಅವಧಿಯಲ್ಲಿ ದೇಶದ ದಲಿತರು, ಬಡವರು, ರೈತರ ಸಮಸ್ಯೆಗೆ ಏಕೆ ಸ್ಪಂದಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದರು.
  ನಗರದ ಹಳೇ ಮಾಧ್ಯಮಿಕ ಶಾಲಾವರಣದಲ್ಲಿ ಮಂಗಳವಾರ ಆಯೋಜಿಸಿದ್ದ ನ್ಯಾಯ ಸಂಕಲ್ಪ ರ‌್ಯಾಲಿಯಲ್ಲಿ ಮಾತನಾಡಿ, ತಮ್ಮ ಭಾ ಷಣದ ಬಹುಪಾಲು ಸಮಯನ್ನು ಮೋದಿ ಟೀಕೆಗೆ ಮೀಸಲಿಟ್ಟರು. ಚಿಟಿಕೆ ಹೊಡೆದರೆ ಯುದ್ಧಗಳನ್ನೇ ನಿಲ್ಲಿಸುವ ಶಕ್ತಿ ಇದೆ ಎಂದು ಹೇಳಿಕೊಳ್ಳುವ ನಿಮಗೆ ಬಡವರ ರೈತರ ಸಮಸ್ಯೆ ಪರಿಹರಿಸಲು ಸಾಧ್ಯ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.
  ಹಿಂದಿನ ಎಲ್ಲ ಪ್ರಧಾನಿಗಳು ಸತ್ಯಮಾರ್ಗದಲ್ಲಿ ನಡೆದರೆ., ನೀವು ಜಾತಿ ಧರ್ಮದ ಹೆಸರಲ್ಲಿ ಮತ ಯಾಚಿಸುತ್ತಿದ್ದೀರಿ. ಇಬ್ಬರು ಸಿಎಂ ಗಳನ್ನು ಜೈಲಿಗೆ ಕಳುಹಿಸಿದ್ದೀರಿ. ದೇಶದ ಆಸ್ತಿಗಳನ್ನು ಮಾರುತ್ತಿದ್ದೀರಿ. ನಿಮ್ಮ ಆಡಳಿತದಲ್ಲಿ ಇಬ್ಬರು ಉದ್ದಿಮೆದಾರರ ಸಂಪತ್ತು ಮಾತ್ರ ಹೆಚ್ಚಾಗುತ್ತಿದೆ ಎಂದು ದೂರಿದರು.
  ಕರ್ನಾಟಕಕ್ಕೆ ತೆರಿಗೆ ವಿಚಾರದಲ್ಲಿ ಅನ್ಯಾಯ ಮಾಡಿದೆ. ಭದ್ರಾಯೋಜನೆಗೆ ಕೇಂದ್ರ ಸರ್ಕಾರ ಹಣ ಕೊಡಲಿಲ್ಲ ಎಂದು ಆಕ್ಷೇಪಿಸಿದರು.
  ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ದೇಶಾದ್ಯಂತ ಜಾತಿ ಗಣತಿಗೆ ಚಾಲನೆ, ಮೀಸಲು ಪ್ರಮಾಣ ಶೇ.50 ಕ್ಕಿಂತ ಹೆಚ್ಚಳ,ಎಸ್ಟಿಗೆ ಕಾಡುಗೊಲ್ಲ ಸಮುದಾಯ ಸೇರ್ಪಡೆ, ಪರಿಶಿಷ್ಟರ ಅಭಿವೃದ್ಧಿಗೆ ಪ್ರತ್ಯೇಕ ಬಜೆಟ್, ಜಿಎಸ್ಟಿ ಮುಕ್ತ ಕೃಷಿ ವಲಯ, ಭೂರಹಿತ ಕೃಷಿಕರಿಗೆ ಭೂಮಿ, ಉದ್ಯೋಗದಲ್ಲಿ ಮಹಿಳೆಯರಿಗೆ ಶೇ.50 ಮೀಸಲು, 30 ಲಕ್ಷ ಖಾಲಿ ಹುದ್ದೆ ಭರ್ತಿಯ ಭರವಸೆ ನೀಡಿದರು.
  ಎಂಎಲ್‌ಸಿಗಳಾದ ಬಿ.ಕೆ.ಹರಿಪ್ರಸಾದ್, ಸಲೀಂ ಅಹಮದ್ ಮತ್ತಿತರರು ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸ್ವಾಗತಿಸಿದರು. ಎಐಸಿಸಿ ಪ್ರಧಾನ ಕಾರ‌್ಯದರ್ಶಿ ರಣದೀಪ್‌ಸಿಂಗ್ ಸುರ್ಜೇವಾಲ, ಶಾಸಕರಾದ ಬಿ.ಜಿ.ಗೋವಿಂದಪ್ಪ, ಟಿ.ರಘುಮೂರ್ತಿ, ಕೆ. ಸಿ.ವೀರೇಂದ್ರ ಪಪ್ಪಿ, ಎನ್.ವೈ.ಗೋಪಾಲಕೃಷ್ಣ, ವೆಂಕಟೇಶ್, ಬಸವಂತಪ್ಪ, ಟಿ.ಬಿ.ಜಯಚಂದ್ರ ಇದ್ದರು.


  ಕರ್ನಾಟಕದಲ್ಲಿ ಗ್ಯಾರಂಟಿಗಳ ಅಲೆ
  ಕರ್ನಾಟಕದಲ್ಲಿ ಗ್ಯಾರಂಟಿಗಳ ಅಲೆ ಇದೆಯೇ ಹೊರತು ಮೋದಿ ಅಲೆ ದೇಶದಲ್ಲಿ ಎಲ್ಲೂ ಇಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
  ನ್ಯಾಯ ಸಂಕಲ್ಪ ರ‌್ಯಾಲಿಯಲ್ಲಿ ಮಾತನಾಡಿ, ಬಡವರು, ದಲಿತರು, ಮಹಿಳೆಯರು, ಹಿಂದುಳಿದವರು, ಅಲ್ಪಸಂಖ್ಯಾತರ ಏಳಿಗೆಗೆ ಕೇಂದ್ರ ಸರ್ಕಾರ ಯಾವ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಿಲ್ಲ ಎಂದು ಆರೋಪಿಸಿದರು.
  ಚುನಾವಣೆ ಬಂದಾಗ ಮೋದಿಗೆ ಕರ್ನಾಟಕ ನೆನಪಾಗುತ್ತದೆ. ನಾವು ನುಡಿದಂತೆ ನಡೆದುಕೊಂಡಿದ್ದೇವೆ. ಗ್ಯಾರಂಟಿಗಳನ್ನು ಜಾರಿಮಾಡಲಾಗದು ಎಂದಿದ್ದ ಬಿಜೆಪಿಗೆ ತಿರುಗೇಟು ಕೊಟ್ಟಿದ್ದೇವೆ. ಜನರ ಏಳಿಗೆಗಾಗಿ ಈಗ ರಾಹುಲ್‌ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 25 ಹೊಸ ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಹೇಳಿದ್ದಾರೆ ಎಂದರು.
  ಸೋಲಿನ ಭೀತಿಯಿಂದ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿವೆ. ಹಿಂದಿನ ಪ್ರಧಾನಿ ಮನಮೋಹನ್‌ಸಿಂಗ್ ಅವರು ಖಾಲಿ ಚೊಂಬು ಕೊಟ್ಟಿದ್ದಾರೆ. ಆದರೆ ಅದನ್ನು ಮೋದಿ ಅಕ್ಷಯ ಪಾತ್ರೆಯನ್ನಾಗಿ ಮಾಡಿದ್ದಾರೆಂಬ ಗೌಡರ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದರು.


  ಅದಲು ಬದಲು ಲ್ಯಾಂಡಿಂಗ್
  ಹೆಲಿಕಾಪ್ಟರ್ ಲ್ಯಾಂಡಿಂಗ್‌ಗೆ ಚಿತ್ರದುರ್ಗ ಎಸ್‌ಜೆಎಂ ಇಂಗ್ಲಿಷ್ ಶಾಲಾ ಆವರಣದ ಎರಡು ಹೆಲಿಪ್ಯಾಡ್‌ಗಳನ್ನು ಗುರುತಿಸಲಾಗಿತ್ತು. ಸಿಎಂ ಇದ್ದ ಹೆಲಿಕಾಪ್ಟರ್, ಪ್ರಿಯಾಂಕಾ ಗಾಂಧಿ ಅವರಿಗೆ ಮೀಸಲಾದ ಜಾಗದಲ್ಲಿ ಲ್ಯಾಂಡಿಂಗ್ ಆಗಿದ್ದು ಕೆಲಕಾಲ ಗೊಂದಲ ಸೃಷ್ಟಿಸಿತು. ಕೂಡಲೇ ಅದನ್ನು ಸ್ಥಳಾಂತರಿಸಲಾಯಿತು. ಈ ಎರಡೂ ಕಾಪ್ಟರ್‌ಗಳನ್ನು ಎಫ್‌ಎಸ್‌ಟಿ ತಪಾಸಣೆ ನಡೆಸಿತು.


  ವೆಚ್ಚದ ಭೀತಿ, ಕಾಣಿಸದ ಅಭ್ಯರ್ಥಿ
  ಚುನಾವಣೆ ವೆಚ್ಚದ ಭೀತಿಯಿಂದಾಗಿ ರ‌್ಯಾಲಿಗೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಗೈರಾಗಿದ್ದರು. ಹಾಜರಾಗಿದ್ದರೆ ಅದರ ಖರ್ಚು-ವೆಚ್ಚ ಸಂಪೂರ್ಣವಾಗಿ ಅಭ್ಯರ್ಥಿ ಲೆಕ್ಕಕ್ಕೆ ಸೇರುತ್ತಿತ್ತು. ಇದೇ ಕಾರಣಕ್ಕೆ ಮಾತನಾಡಿದ ಮುಖಂಡರು ಎಲ್ಲೂ ಅಭ್ಯರ್ಥಿಯ ಹೆಸರು ಪ್ರಸ್ತಾಪಿಸಲಿಲ್ಲ.


  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts