More

  ಮೋದಿ ಪ್ರಧಾನಿಯಾಗುವ ವಿಶ್ವಾಸ ವಿದೇಶಿಗರಲ್ಲಿದೆ

  ಚಿತ್ರದುರ್ಗ: ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವ ವಿಶ್ವಾಸ ಭಾರತವಷ್ಟೇ ಅಲ್ಲ, ವಿದೇಶಿಗರಲ್ಲೂ ಇದೆ. ಹೀಗಾಗಿ ಚುನಾವಣೆಗೂ ಮುನ್ನವೇ ಅವರನ್ನು ಆತ್ಮೀಯವಾಗಿ ಆಹ್ವಾನಿಸಲು ಮುಂದಾಗಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

  ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಅಧಿವೇಶನದಲ್ಲಿ ಪಕ್ಷದ 11ಸಾವಿರ ಕಾರ್ಯಕರ್ತರು ಭಾಗಿಯಾಗಿದ್ದರು. ಈ ಬಾರಿ ಎನ್‌ಡಿಎ ಮೈತ್ರಿಕೂಟ ಸೇರಿ ಲೋಕಸಭೆ ಚುನಾವಣೆಯಲ್ಲಿ 400 ಸ್ಥಾನ ಗಳಿಸುವ ಟಾರ್ಗೆಟ್ ಹೊಂದಿದ್ದೇವೆ. ರಾಜ್ಯದಲ್ಲಿ ಜೆಡಿಎಸ್ ಜತೆಗಿನ ಮೈತ್ರಿಯಿಂದಾಗಿ 28 ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  ಶ್ರೀರಾಮಮಂದಿರ ಇಡೀ ದೇಶವನ್ನು ಒಗ್ಗೂಡಿಸಿದೆ. ಇದು ಬಿಜೆಪಿಗೆ ಎಲ್ಲ ರೀತಿಯಿಂದಲೂ ಪಾಸಿಟಿವ್ ಆಗಲಿದೆ. ಶ್ರೀರಾಮ-ಮೋದಿ ಅಲೆಯಿಂದ ಅಭೂತಪೂರ್ವ ಗೆಲುವು ಸಾಧಿಸುವುದರಲ್ಲಿ ಯಾವ ಅನುಮಾನವಿಲ್ಲ ಎಂದರು.

  ಪಕ್ಷದ ಮುಖಂಡರಾದ ರಾಧಮೋಹನ್ ದಾಸ್ ಅಗರ್‌ವಾಲ್ ಕರ್ನಾಟಕದ ಉಸ್ತುವಾರಿ ವಹಿಸಿದ್ದು, ಫೆ. 20ರಂದು ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದಾರೆ. ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರ ದೇಶಕ್ಕೆ ನೀಡಿದ ಕೊಡುಗೆ, ಸಾಧನೆ ಮನೆ-ಮನೆಗೂ ತಲುಪಿಸಿ, ಪಕ್ಷಕ್ಕೆ ಬಲ ತುಂಬಬೇಕಿದೆ ಎಂದು ಹೇಳಿದರು.

  ಒಂದೆಡೆ ಸಿಎಂ ಹಣಕಾಸಿನ ತೊಂದರೆ ಇಲ್ಲ ಎಂದರೆ, ಮತ್ತೊಂದೆಡೆ ಗ್ಯಾರಂಟಿಗೆ ಹಣ ಹೊಂದಿಸಲು ಆಗುತ್ತಿಲ್ಲವೆಂದು ಡಿಸಿಎಂ ಹೇಳುತ್ತಾರೆ. ರಾಜ್ಯದಲ್ಲಿ ತಂತಿ-ತಾಳ ಇಲ್ಲದ ಸರ್ಕಾರವಿದ್ದು, ನಿರುದ್ಯೋಗಿ ಯುವಕ-ಯುವತಿಗೆ 1 ರೂ. ತಲುಪಿಲ್ಲ. ವಿದ್ಯುತ್ ಉಚಿತವಾಗಿ ನೀಡುವುದಾಗಿ ಘೋಷಿಸಿ, ಹಲವು ಬಾರಿ ದರ ಹೆಚ್ಚಿಸಿದ್ದಾರೆ. ನುಡಿದಂತೆ ನಡೆದಿದ್ದೇವೆ ಎನ್ನುವವರಿಗೆ ಗ್ಯಾರಂಟಿ ತಲುಪಿಸಲು ಆಗುತ್ತಿಲ್ಲ ಎಂದು ಕುಟುಕಿದರು.

  ಶ್ರೀರಾಮಮಂದಿರ ಸರ್ವರನ್ನು ಒಗ್ಗೂಡಿಸುವ, ರಾಮಭಕ್ತರಲ್ಲಿ ಭಕ್ತಿ ಹೆಚ್ಚಿಸುವ ಉದ್ದೇಶ ಹೊಂದಿದೆ. ಈಗಾಗಲೇ ಕಾಣಿಕೆ ರೂಪದಲ್ಲಿ ಹರಿದು ಬರುತ್ತಿರುವ ಹಣ ಮುಂದಿನ ದಿನಗಳಲ್ಲಿ ದಾಖಲೆ ಸೃಷ್ಟಿಸಲಿದೆ. ಅಲ್ಲಿ ಹಲವು ಉದ್ಯಮ ಆರಂಭಿಸಲು ಅನೇಕರು ಮುಂದೆ ಬರುತ್ತಿದ್ದಾರೆ. ಎಷ್ಟು ಮಂದಿಗೆ ಉದ್ಯೋಗ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಮಂದಿರದಿಂದ ಬಡವರ ಹೊಟ್ಟೆ ತುಂಬುವುದಿಲ್ಲ ಎಂಬ ಕಾಂಗ್ರೆಸ್ಸಿಗರ ಆರೋಪಕ್ಕೆ ಈ ರೀತಿ ಪ್ರತಿಕ್ರಿಯಿಸಿದರು.

  ಯುಪಿಎ ಮತ್ತು ಎನ್‌ಡಿಎ ಅವಧಿಯಲ್ಲಿ ರಾಜ್ಯಕ್ಕೆ ಎಷ್ಟು ಹಣ ನೀಡಲಾಗಿದೆ ಎಂಬ ಕುರಿತು ಕೇಂದ್ರ ಸರ್ಕಾರ ಶ್ವೇತ ಪತ್ರ ಹೊರಡಿಸಿದೆ. ಇದನ್ನೇ ರಾಜ್ಯದ ಸಿಎಂ ಕೂಡ ಮಾಡಲೆಂದು ಒತ್ತಾಯಿಸಿದ ಅವರು, ನಮ್ಮಲ್ಲಿಯೂ ಒಡಕಿಲ್ಲ ಎಂಬುದನ್ನು ಒಪ್ಪಲಾರೆ. ಸಣ್ಣಪುಟ್ಟ ವ್ಯತ್ಯಾಸ ಇದೆ. ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಆದರೆ, ಕೋಲಾರದಲ್ಲಿ ಕಾಂಗ್ರೆಸ್ಸಿಗರು ಕೊರಳಪಟ್ಟಿ ಹಿಡಿದು ಜಗಳವಾಡಿದ್ದಾರಲ್ಲ. ಅಂತಹ ಸಂಸ್ಕೃತಿ ನಮ್ಮಲ್ಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

  ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಸಿದ್ದಾಪುರ, ಸಂಪತ್‌ಕುಮಾರ್, ನಗರ ಮಂಡಲ ಮಹಿಳಾಧ್ಯಕ್ಷೆ ಶೀಲಾ, ರಜನಿ ಲೇಪಾಕ್ಷ, ವಕ್ತಾರ ದಗ್ಗೆ ಶಿವಪ್ರಕಾಶ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts