ಮೋದಿ ಅಭಿವೃದ್ಧಿ ಪ್ರಶ್ನಿಸುವವರಿಗೆ ಇಂದು ತಕ್ಕ ಉತ್ತರ

ಮೈಸೂರು: ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಅಭಿವೃದ್ಧಿ ಕಾರ್ಯಗಳನ್ನು ಪ್ರಶ್ನಿಸುವವರಿಗಾಗಿಯೇ ನಗರದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.

ಏ.9ರಂದು ನರೇಂದ್ರಮೋದಿ ಚುನಾವಣಾ ಪ್ರಚಾರ ಭಾಷಣ ಮಾಡಲಿರುವ ಮಹಾರಾಜ ಕಾಲೇಜು ಮೈದಾನದಲ್ಲಿ ಸೋಮವಾರ ಸಿದ್ಧತೆ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮೋದಿ ಅವರ ಅಭಿವೃದ್ಧಿಯನ್ನು ಪ್ರಶ್ನಿಸುವವರಿಗೆ ಸಮಾವೇಶದಲ್ಲಿ ತಕ್ಕ ಉತ್ತರ ನೀಡಲಾಗುವುದು. ಅದಕ್ಕಾಗಿಯೇ ಕೇಂದ್ರ ಸರ್ಕಾರದ ಮಹತ್ವದ ‘ಸ್ವಚ್ಛ ಭಾರತ್’ ಕಾರ್ಯಕ್ರಮದ ರೂವಾರಿಗಳಾದ ಪೌರಕಾರ್ಮಿಕರು, ಉಜ್ವಲ ಯೋಜನೆಯ ಫಲಾನುಭವಿಗಳು, ಪ್ರಧಾನಮಂತ್ರಿ ಆವಾಸ್ ಯೋಜನೆ, ಪ್ರಧಾನಮಂತ್ರಿ ಜನೌಷಧ ಕೇಂದ್ರ, ಅಸಂಘಟಿತ ವಲಯದ ಕಾರ್ಮಿಕರ ಪಿಂಚಣಿ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆ ಫಲಾನುಭವಿಗಳಿಗೆ ಸಮಾವೇಶದಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಿ ಕೂರಿಸಲಾಗುವುದು ಎಂದು ತಿಳಿಸಿದರು.

ಮೋದಿ ಅವರ ಜತೆ ಯುವಜನರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲೆಂದು ಪ್ರವೇಶ ದ್ವಾರದಲ್ಲಿ ಸೆಲ್ಫಿ ಬೂತ್ ತೆರೆಯಲಾಗಿದ್ದು, ಪ್ರತಿಕೃತಿಗಳನ್ನು ಇಡಲಾಗಿದೆ. ಮಹಿಳೆಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆ, ಕುಡಿಯುವ ನೀರು, ಶೌಚ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್‌ಸಿಂಹ ಮಾತನಾಡಿ, ಮಧ್ಯಾಹ್ನ 3 ಗಂಟೆಗೆ ಸಮಾವೇಶ ಆರಂಭವಾಗಲಿದ್ದು, ಸಂಜೆ 4ರಿಂದ 5 ಗಂಟೆಯೊಳಗೆ ಮೋದಿ ಭಾಗವಹಿಸಲಿದ್ದಾರೆ. 5 ವರ್ಷಗಳಲ್ಲಿ ದೇಶದಲ್ಲಿ ಆಗಿರುವ ಕೆಲಸ, ಮುಂದೆ ಯಾವ ರೀತಿ ದೇಶವನ್ನು ಅಭಿವೃದ್ಧಿ ಮಾಡಲಿದ್ದೇವೆ ಎಂಬುದನ್ನು ತಿಳಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿ ರಾಜ್ಯದ ಅನೇಕ ನಾಯಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಯ ಮತದಾನ ದಿನವಾದ ಏ.18ರಂದು ನರೇಂದ್ರ ಮೋದಿ ಅವರು ಉತ್ತರ ಕರ್ನಾಟಕದಲ್ಲಿ ಎರಡನೇ ಹಂತದ ಚುನಾವಣೆಯ ಪ್ರಚಾರ ಭಾಷಣ ಮಾಡಲು ಅವಕಾಶ ನೀಡಬಾರದೆಂದು ಪ್ರತಿಪಕ್ಷಗಳು ಹೇಳುತ್ತಿವೆ. ಮೋದಿ ಅವರ ಮೇಲಿನ ಭಯ ಇದಕ್ಕೆ ಕಾರಣ. ಇದು ಅವರ ಪುಕ್ಕಲುತನವನ್ನು ತೋರಿಸುತ್ತದೆ ಎಂದರು.

ಬಿಜೆಪಿ ವಕ್ತಾರ ಡಾ.ವಾಮನ ಚಾರ್ಯ ಮಾತನಾಡಿ, ನರೇಂದ್ರ ಮೋದಿ ಅವರಿಗೆ 2ನೇ ಬಾರಿಗೆ ಅಧಿಕಾರ ನೀಡಿದರೆ ನಿಶ್ಚಿತವಾಗಿ ರಾಮಮಂದಿರ ನಿರ್ಮಾಣ ಮಾಡುತ್ತಾರೆ. ಈ ವಿಚಾರವನ್ನು ಬಿಜೆಪಿ ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ ಎಂದು ಹೇಳಿದರು.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿರುವ ಕಲಂ 370ರ ರದ್ದತಿ, ಕಾಶ್ಮೀರದಲ್ಲಿ ಆಸ್ತಿ ಖರೀದಿಸಲು ಅವಕಾಶ, ಎಲ್ಲ ನೀರಾವರಿ ಯೋಜನೆಗಳ ಪೂರ್ಣಗೊಳಿಸುವಿಕೆ, ಪ್ರತಿ ಮನೆಗೂ ವಿದ್ಯುತ್, ಎಲ್‌ಪಿಜಿ ಗ್ಯಾಸ್ ವಿತರಣೆ, ಬ್ಯಾಂಕ್ ಖಾತೆ ತೆರೆಯುವುದು, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಲಾಗಿದೆ ಎಂದು ತಿಳಿಸಿದರು.

ಬಿಜೆಪಿ ಮುಖಂಡರಾದ ಎಚ್.ವಿ.ರಾಜೀವ್, ಜಯಪ್ರಕಾಶ್, ಪ್ರಭಾಕರ್ ಸಿಂಧ್ಯಾ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *