ಮೋಹ ಗೆದ್ದರೆ ಪರಮಾತ್ಮನ ದರ್ಶನ ಸಾಧ್ಯ

ಹಳಿಯಾಳ: ಜಗತ್ತು ಮೋಹದ ಜಾಲದಲ್ಲಿ ಮುಳುಗಿದೆ. ಪ್ರತಿಯೊಬ್ಬರೂ ತಮಗೆ ಗೊತ್ತಾಗದ ಹಾಗೇ ಈ ಮೋಹದ ಮಾಯೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಮೋಹವು ಯಾರನ್ನೂ ಬಿಟ್ಟಿಲ್ಲ. ಈ ಮೋಹವನ್ನು ಗೆದ್ದರೆ ಪರಮಸತ್ಯ ಪರಮಾತ್ಮನ ದರ್ಶನ ಸಾಧ್ಯ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಮಹಾಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ನಡೆದಿರುವ ಆಧ್ಯಾತ್ಮಿಕ ಪ್ರವಚನದಲ್ಲಿ ಗುರುವಾರ ಅವರು ‘ಮೋಹ ಜಾಲದ’ ಬಗ್ಗೆ ಆಶೀರ್ವಚನ ನೀಡಿದರು.

ಜಗತ್ತಿನ ಜನರ ಮನಸ್ಸು ಹರಿದು ಹಂಚಿ ಹೋಗಿದ್ದು, ಹತ್ತು ದಿಕ್ಕಿನಲ್ಲಿ ಚದುರಿ ಹೋಗಿವೆ. ಎಲ್ಲರ ಮನಸ್ಸುಗಳು ಭ್ರಮೆಗೆ ಒಳಗಾಗಿ ಒಡೆದು ಹೋಗಿವೆ. ಮನುಷ್ಯನ ಸುತ್ತ ಮೋಹದ ಜಾಲ ಸುತ್ತಿವೆ, ಮೋಹದ ಕಬಂದ ಬಾಹುಗಳಲ್ಲಿ ನಲುಗಿ ಹೋಗಿವೆ. ಎಲ್ಲೆಡೆ ಮೋಹದ ಜಾಲ ಹರವಿದ್ದು, ಅದು ಕಣ್ಣಿಗೆ ಕಾಣುವುದಿಲ್ಲ. ಕೋಟಿ ಜನ ಕೋಟಿ ಮೋಹ, ಕೆಲವರಿಗೆ ಹೆಸರಿನ ಮೋಹ, ಕೆಲವರಿಗೆ ರೂಪದ ಮೋಹ, ಕೆಲವರಿಗೆ ಹಣದ ಮೋಹ. ಈ ಮೋಹದ ಬಲೆಯಲ್ಲಿ ನಾವು ಸಿಕ್ಕು ಹಾಕಿಕೊಂಡಿವೆ ಎಂಬ ಪರಿವೆ ನಮಗಿಲ್ಲ. ಮೋಹದ ಜಾಲದಿಂದ ಹೊರಗೆ ಬರುವುದು ಕಷ್ಟ. ಮೋಹದ ಜಗತ್ತಿಗೆ ಜಗತ್ತು ಬೇಗನೆ ಮೋಸ ಹೋಗುತ್ತದೆ. ಮೋಹದ ಬಲೆಯಿಂದ ಹೊರ ಬರುವುದು ಕಷ್ಟಕರ ಎಂದು ಗೊತ್ತಿದ್ದರೂ, ನಮಗರಿವಿಲ್ಲದಂತೆ ಮೋಹದ ಜಾಲದೊಳಗೆ ಬೀಳುತ್ತೇವೆ. ಮೋಹದ ಜಾಲದೊಳಗೆ ಬೀಳುವಂತೆ ಪ್ರೇರೇಪಿಸುವವರು ಇಲ್ಲಿದ್ದಾರೆ. ಅವರೆ ನಮ್ಮ ದೃಷ್ಟಿಯಲ್ಲಿ ಆದರ್ಶ ನಾಯಕರು, ಅವರನ್ನು ನಾವು ಅನುಕರಿಸಲು ಹೋಗಿ ಮೋಹದ ಜಾಲದಲ್ಲಿ ಬೀಳುತ್ತೇವೆ. ಜಗತ್ತು ಕಂಡ ಮಹಾನ್ ದಾರ್ಶನಿಕ ವ್ಯಾಸ ಮಹರ್ಷಿಗಳು ಈ ಮೋಹದ ಜಗತ್ತಿನಲ್ಲಿಯೇ ಬದುಕಿದ್ದರೂ ಜಗತ್ತನ್ನು ನೋಡುವ ಅವರ ಚಿತ್ ಬೇರೆಯೇ ಆಗಿತ್ತು. ಅದಕ್ಕಾಗಿ ಅವರು ದಾರ್ಶನಿಕರಾದರು. ಜಗತ್ತನ್ನು ಕಣ್ಣಾಡಿಸಿದ ವ್ಯಾಸರು ಪ್ರತಿಯೊಂದರಿಂದಲೂ ಜ್ಞಾನ ಸಂಗ್ರಹಿಸಿದರು. ಮೋಹದ ಜಾಲದ ಮೇಲೆ ಕಣ್ಣಾಡಿಸಿದ ಅವರು ಅದರ ದಾಖಲೆಯನ್ನು ಬರೆದರು. ಪಡೆದ ಜ್ಞಾನವನ್ನು ಶಬ್ಧಗಳಲ್ಲಿ, ಗ್ರಂಥಗಳಲ್ಲಿ ಕಟ್ಟಿ ಹಾಕಿ ಜ್ಞಾನಸುಧೆ ಹರವಿದರು. ಅವರ ಗ್ರಂಥಗಳಲ್ಲಿ ಮೋಹದ ಮಾಯೆಯ ತಾಕಲಾಟದ ಸುಂದರ ಚಿತ್ರಣ ನೀಡಿದ್ದಾರೆ. ಈ ಮೋಹದ ಮಾಯೆಯಿಂದ ಹೊರಬರಲು ನಮ್ಮ ಮನಸ್ಸನ್ನು ಸಶಕ್ತ ಸಮರ್ಥಗೊಳಿಸಬೇಕಾಗಿದೆ ಎಂದರು.