ಮೋದಿ ಮೋಡಿ ನಿಯಂತ್ರಣಕ್ಕೆ ‘ಕೈ’ ತಂತ್ರ

ಗದಗ: ಹಾವೇರಿ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್. ಪಾಟೀಲ ಹೆಸರು ಅಧಿಕೃತವಾಗಿ ಘೊಷಣೆಯಾದ ಕೂಡಲೇ ಕಾಂಗ್ರೆಸ್ ವಲಯದಲ್ಲಿ ಬಿರುಸಿನ ಚಟುವಟಿಕೆ ಶುರುವಾಗಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯೇ ತಮ್ಮ ಪ್ರಬಲ ಎದುರಾಳಿ ಎಂದುಕೊಂಡು ಅವರ ಅಬ್ಬರಕ್ಕೆ ಲಗಾಮು ಹಾಕಲು ಕಾಂಗ್ರೆಸ್ಸಿಗರು ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ವಿರೋಧಿ ಬರಹಗಳನ್ನು ಹರಿಬಿಡಲಾರಂಭಿಸಿದ್ದು, ಆ ಮೂಲಕ ಕ್ಷೇತ್ರ ವ್ಯಾಪ್ತಿಯಲ್ಲಾದರೂ ಮೋದಿ ಜನಪ್ರಿಯತೆ ಕುಗ್ಗಿಸಿ ಮತದಾರರನ್ನು ತಮ್ಮಡೆಗೆ ಸೆಳೆಯವ ತಂತ್ರಗಾರಿಕೆ ಅನುಸರಿಸುತ್ತಿದ್ದಾರೆ.

‘ಹತ್ತು ವರ್ಷಗಳ ಕಾಲ ಕಾದು ಕಾದು ಬಯಸಿ ಪಡೆದುಕೊಂಡಿರುವ ಭಾಗ್ಯವನ್ನು ವಿನಾಕಾರಣ ಕೈಚೆಲ್ಲಲೇಬಾರದು. ದೇಶದ ಪರಮೋಚ್ಛ ಸ್ಥಳ ಸಂಸತ್ ಪ್ರವೇಶಿಸಬೇಕು’ ಎಂದು ಕನಸು ಕಟ್ಟಿಕೊಂಡಿರುವ ಅಭ್ಯರ್ಥಿ ಡಿ.ಆರ್. ಪಾಟೀಲ ಅವರಿಗಿದು ಮಾಡು ಇಲ್ಲವೇ ಮಡಿ ಹೋರಾಟ.

ನಾಲ್ಕು ದಶಕಗಳ ಅವರ ರಾಜಕೀಯ ಅನುಭವ ಮತ್ತು ಸಾಮರ್ಥ್ಯವನ್ನು ಒರೆಗೆ ಹಚ್ಚಲೇಬೇಕಾದ ಸಮಯ ಇದಾಗಿದೆ. ಹೀಗಾಗಿ, ಅವರು ಸಕಲ ಅಸ್ತ್ರಗಳೊಂದಿಗೆ ಚುನಾವಣೆ ಕಣಕ್ಕೆ ಇಳಿಯಲು ಸಜ್ಜಾಗುತ್ತಿದ್ದಾರೆ. ಸ್ಥಳೀಯ ಮುಖಂಡರು ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿದ್ದು, ವಿರೋಧಿ ಪಕ್ಷವನ್ನು ಕಟ್ಟಿಹಾಕುವ ಕುರಿತು ಚಿಂತನ-ಮಂಥನ ನಡೆಸಿದ್ದಾರೆ.