ಮೋದಿ ಪರ ಘೋಷಣೆ ಕೂಗಿದ್ದು ಬಿಜೆಪಿ ಕಾರ್ಯಕರ್ತರಲ್ಲ

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಗರದ ಮಾನ್ಯತಾ ಟೆಕ್ ಪಾರ್ಕ್ ಸಂವಾದಕ್ಕೆ ಆಗಮಿಸಿ ದಾಗ ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಕೂಗಿದವರು ಬಿಜೆಪಿ ಕಾರ್ಯಕರ್ತರಲ್ಲ ಎಂದು ರಾಜ್ಯ ಬಿಜೆಪಿ ಚುನಾವಣಾ ಸಮಿತಿ ಸಂಚಾಲಕ ಆರ್. ಅಶೋಕ್ ತಿಳಿಸಿದ್ದಾರೆ.

ರಾಜ್ಯ ಬಿಜೆಪಿ ಲೋಕಸಭಾ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅಶೋಕ್, ರಾಹುಲ್ ಆಗಮಿಸಿದಾಗ ಮೋದಿ ಪರ ಘೋಷಣೆ ಕೂಗಿದ್ದು ಇದೊಂದೇ ಘಟನೆ ಅಲ್ಲ. ದೇಶದ ವಿವಿಧೆಡೆಯೂ ಇದೇ ರೀತಿ ಆಗಿದೆ. ದೇಶಾದ್ಯಂತ ಮೋದಿ ಅಲೆ ಇದ್ದು, ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದು ಯುವಕರ ಮನಸ್ಸಿನಲ್ಲಿ ಬೇರೂರಿದೆ. ಅದು ಈ ರೀತಿ ವ್ಯಕ್ತವಾಗುತ್ತಿದೆ ಎಂದರು.

ಪಕ್ಷವನ್ನು ಬೆಂಬಲಿಸಿದವರ ಕೈ ಬಿಡುವುದಿಲ್ಲ. ಈಗಾಗಲೇ ಪೊಲೀಸರು ಕರೆದೊಯ್ದಿರುವ ಟೆಕ್ಕಿಗಳಿಗೆ ಸಂಪೂರ್ಣ ಸಹಕಾರವನ್ನು ಬಿಜೆಪಿ ನೀಡುತ್ತದೆ. ಯಾವುದೇ ಕಾರಣಕ್ಕೆ ಪ್ರಕರಣ ದಾಖಲಿಸಬಾರದು ಎಂದು ಪೊಲೀಸರಿಗೆ ತಿಳಿಸಲಾಗಿದೆ. ಕಾನೂನು ಸೇರಿ ಎಲ್ಲ ಸಹಾಯವನ್ನೂ ಮಾಡುತ್ತೇವೆ ಎಂದರು.

ಹೊಗಳಿಕೆ ಮಾತ್ರ: ಘಟನೆ ಬಗ್ಗೆ ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅಶೋಕ್, ನಿಜವಾದ ನಾಯಕರಾದವರು ಕೇವಲ ಹೊಗಳಿಕೆಯನ್ನೇ ನಿರೀಕ್ಷಿಸಬಾರದು. ತೆಗಳಿಕೆಗಳನ್ನೂ ಸವಾಲಾಗಿ ಸ್ವೀಕರಿಸಬೇಕು. ತಮ್ಮ ಪರಂಪರೆಯನ್ನು ಬೆನ್ನಿಗಂಟಿಸಿಕೊಂಡು, ಎಲ್ಲರೂ ಹೊಗಳಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ. ಇಂದಿರಾ ಗಾಂಧಿ ಹಾದಿಯಲ್ಲೆ ಮೊಮ್ಮಗ ನಡೆಯುತ್ತಿದ್ದಾರೆ ಎಂದು ಆಕ್ಷೇಪಿಸಿದರು, ಪ್ರಜಾ ಸ್ವಾತಂತ್ರ್ಯ ಹತ್ತಿಕ್ಕುವ ಕಾಂಗ್ರೆಸ್ ಕೃತ್ಯವನ್ನು ಬಿಜೆಪಿ ಖಂಡಿಸುತ್ತದೆ. ಪ್ರಧಾನಿಯನ್ನು ಕೊಲ್ಲಿ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳದ, ಕಲಬುರಗಿಯಲ್ಲಿ ಮೋದಿ ಬಗ್ಗೆ ಅವಾಚ್ಯ ಶಬ್ದ ಪ್ರಯೋಗಿಸಿದವರನ್ನೂ ಬಂಧಿಸದ ಪೊಲೀಸರು ಕೇವಲ ಮೋದಿ ಪರ ಘೋಷಣೆ ಕೂಗಿದ್ದ ಯುವಕರನ್ನು ಬಂಧಿಸಿರುವುದು ಸರಿಯಲ್ಲ. ರಾಹುಲ್ ನಡವಳಿಕೆ ಬಗ್ಗೆ ದೇಶದ ಎಲ್ಲ ನಾಗರಿಕರಿಗೆ ಬೇಸರ ಇದೆ. ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಲಾಗಿದೆ ಎಂದರು.

ರಾಜ್ಯ ಬಿಜೆಪಿ ಸಹ ವಕ್ತಾರರಾದ ಎ.ಎಚ್. ಆನಂದ್, ಎಸ್. ಪ್ರಕಾಶ್, ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತಮ್ಮೇಶ್ ಗೌಡ ಉಪಸ್ಥಿತರಿದ್ದರು.

ವಾಕ್ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ರಾಹುಲ್ ಗಾಂಧಿ, ಸಣ್ಣ ತೆಗಳಿಕೆಯನ್ನೂ ಸಹಿಸಿಕೊಳ್ಳದೇ ಪೊಲೀಸ್ ಮೂಲಕ ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ. ಘೊಷಣೆ ಕೂಗಿದವರನ್ನು ಬಂಧಿಸುವವರು, ಮೋದಿಯನ್ನು ಕೊಲ್ಲುವಂತೆ ಕರೆ ನೀಡುವವರನ್ನು ಬಂಧಿಸಿಲ್ಲ. ಇದು ರಾಹುಲ್ ಗಾಂಧಿಯವರ ಆಷಾಢಭೂತಿತನವನ್ನು ತೋರಿಸುತ್ತದೆ.

| ರಾಜೀವ್ ಚಂದ್ರಶೇಖರ್, ರಾಜ್ಯಸಭಾ ಸದಸ್ಯ

ಬಡವರ ಹೊಟ್ಟೆಯ ಹಸಿವು ಇಂಗಿಸಬೇಕಿದ್ದ ಇಂದಿರಾ ಕ್ಯಾಂಟೀನ್ ಆಹಾರ, ಹೊಟ್ಟೆಯಲ್ಲಿ ಕಾಯಿಲೆ ತುಂಬಿಸುತ್ತಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ವಸೂಲಿಗೆ ನಿಸ್ಸೀಮನಾದ ಅಕೌಂಟೆಂಟ್ ನೇಮಿಸಿದ್ದಕ್ಕೆ ಸಚಿವರೂ ಸ್ಪಷ್ಟನೆ ನೀಡಬೇಕು. ಇದೆಲ್ಲ ಬೆಳವಣಿಗೆ ನೋಡಿದರೆ ಇದು. ಪರ್ಸೆಂಟೇಜ್ ಸರ್ಕಾರ ಎಂದು ಮನದಟ್ಟಾಗುತ್ತಿದೆ.

| ಆರ್. ಅಶೋಕ್, ಲೋಕಸಭೆ ಚುನಾವಣಾ ಸಮಿತಿ ಸಂಚಾಲಕ