ಮೋದಿ, ಇಮ್ರಾನ್ ಖಾನ್ ಒಳ ಒಪ್ಪಂದ?

ಚಿಕ್ಕಮಗಳೂರು: ಪಾಕಿಸ್ತಾನ ವಿರುದ್ಧ ಯುದ್ಧ ಮಾಡುತ್ತೇನೆಂದು ಬೀಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಮೋದಿ ಗೆಲ್ಲಬೇಕೆಂದು ಹೇಳಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೂ ಒಳ ಒಪ್ಪಂದವಾಗಿದೆಯೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಶಯ ವ್ಯಕ್ತಪಡಿಸಿದರು.

ಕಡೂರಿನಲ್ಲಿ ಗುರುವಾರ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಭಾಷಣ ಮಾಡಿದ ಸಿದ್ದರಾಮಯ್ಯ ಬಿಜೆಪಿ ಹಾಗೂ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಪಾಕ್ ವಿರೋಧಿಸಿ ಭಾರತದಲ್ಲಿ ಹಿರೋ ಆಗುತ್ತಿರುವ ಮೋದಿ ಅವರ ಇಬ್ಬಂದಿತನ ಮತದಾರರು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿಯವರಿಂದ ಯಾರೂ ದೇಶ ಪ್ರೇಮ ಪಾಠ ಕಲಿಯಬೇಕಿಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹಾತ್ಮ ಗಾಂಧಿ ಕೊಂದ ವಂಶಸ್ಥರಾದ ಇವರು ದೇಶಪ್ರೇಮಿಗಳಲ್ಲ. ಮೋಹನ್ ಭಾಗವತ್ ಆರ್​ಎಸ್​ಎಸ್​ನವರು ಎಂದರು.

ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು ಕಾಂಗ್ರೆಸ್ ಪರವಾಗಿದ್ದಾರೆ. ಇವರನ್ನು ಇಬ್ಬಾಗ ಮಾಡಲು ಬಿಜೆಪಿ ಪ್ರಯತ್ನ ಮಾಡುತ್ತಿರುವುದನ್ನು ಸಮುದಾಯದವರು ಎಚ್ಚರಿಕೆಯಿಂದ ಗಮನಿಸಬೇಕು. ದೇಶ ಉಳಿಯಬೇಕು. ವೈಯಕ್ತಿಕ ವಿಚಾರ ಚುನಾವಣೆಯಲ್ಲಿ ಮುಖ್ಯವಾಗಬಾರದು. ಬಿಜೆಪಿ ಹಿಂದುಳಿದವರನ್ನು, ದಲಿತರನ್ನು ಹಾಗೂ ಮುಖ್ಯವಾಗಿ ದೇಶದ ಯುವಕರನ್ನು ಹಾಳು ಮಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯದ 28 ಕ್ಷೇತ್ರದಲ್ಲಿ ಒಬ್ಬ ಹಿಂದುಳಿದವರಿಗೂ ಟಿಕೆಟ್ ನೀಡದೆ ಬಿಜೆಪಿ ಅನ್ಯಾಯ ಮಾಡಿದೆ. ಹಿಂದುಳಿದ ನಾಯಕನೆನ್ನುವ ಕೆ.ಎಸ್.ಈಶ್ವರಪ್ಪ ಅವರಿಗೆ ಒಬ್ಬ ಕುರುಬರಿಗೆ ಟಿಕೆಟ್ ಕೊಡಿಸಲು ಸಾಧ್ಯವಾಗಿಲ್ಲ. ಕಾಂಗ್ರೆಸ್-ಜೆಡಿಎಸ್ ಅಹಿಂದ ಪರವಾಗಿವೆ. ಅಹಿಂದ ವರ್ಗ ಮೈತ್ರಿ ಸರ್ಕಾರಕ್ಕೆ ಅನ್ಯಾಯ ಮಾಡಬಾರದು ಎಂದು ಮನವಿ ಮಾಡಿದರು.

ಮೋದಿ 84 ದೇಶಗಳಿಗೆ ವಿದೇಶ ಪ್ರವಾಸ ಮಾಡಿ 1690 ಕೋಟಿ ರೂ. ಖರ್ಚು ಮಾಡಿದ್ದೇ ಸಾಧನೆ. ಆದರೆ, ರೈತರ ಸಾಲ ಮನ್ನಾ ಮಾಡಲು ಹಣ ಇಲ್ಲವೆಂದರು. ಚೌಕಿದಾರ ಎನ್ನುವ ಮೋದಿ, ನೀರವ್ ಮೋದಿ ದೇಶ ಸಾವಿರ ಕೋಟಿ ರೂ. ಸಾಲ ಮಾಡಿ ದೇಶ ಬಿಟ್ಟು ಹೋಗುವಾಗ ಎಲ್ಲಿ ಹೋಗಿದ್ದರು. ಕಾಪೋರೇಟ್ ಕಂಪನಿ 3.50 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿರುವ ಮೋದಿ ರೈತರ ಸಾಲ ಮನ್ನಾ ಮಾಡಲಿಲ್ಲ. ಕೃಷಿಕರ ವಿರೋಧಿಯಾಗಿರುವ ಮೋದಿಗೆ ರೈತರು ಒಂದೂ ವೋಟು ಹಾಕಬಾರದು ಎಂದು ಹೇಳಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಉಪ ಸಭಾಪತಿ ಎಸ್.ಎಲ್. ಧಮೇಗೌಡ, ಹಾಸನ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜನ್, ಕೆಂಪರಾಜು, ಮಾಜಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ, ಮುಖಂಡರಾದ ಡಾ. ಡಿ.ಎಲ್.ವಿಜಯಕುಮಾರ್, ಮುಖಂಡ ಕೆ.ಎಸ್.ಆನಂದ್, ವನಮಾಲಾ ದೇವರಾಜ್, ಲೋಲಾಕ್ಷಿಬಾಯಿ ಇದ್ದರು.

ಏಕ ವಚನ ಸಂಬೋಧನೆ:ಬಿಜೆಪಿಯನ್ನು ಹಿಗ್ಗಾಮುಗ್ಗಾ ಟೀಕಿಸುವ ಭರದಲ್ಲಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಏಕ ವಚನದಲ್ಲಿ ಸಂಬೋಧನೆ ಮಾಡಿದರು.

ರಾಷ್ಟ್ರೀಕೃತ ಬ್ಯಾಂಕ್​ನಲ್ಲಿ ರೈತರ ಸಾಲ ಮನ್ನಾ ಮಾಡದ ದುರಾತ್ಮ ನರೇಂದ್ರ ಮೋದಿ. ನೋಟ್ ಬ್ಯಾನ್ ಮಾಡಿ ಸರದಿಯಲ್ಲಿ ತನ್ನ ತಾಯಿಯನ್ನು ನಿಲ್ಲಿಸಿ ಬಿಟ್ಟಾನೆ. ಇದು ಪ್ರಚಾರ ಪಡೆಯಲು. ಅಂಬಾನಿ, ಅದಾನಿ, ನೀರವ್ ಮೋದಿ ಯಾಕೆ ಸರದಿಯಲ್ಲಿ ನಿಲ್ಲಲಿಲ್ಲ ಎಂದು ಪ್ರಶ್ನೆ ಮಾಡಿದರು.

ಯಡಿಯೂರಪ್ಪ ಸಿಎಂ ಆಗಿ ಹಾವೇರಿಯಲ್ಲಿ ಎರಡು ರೈತರನ್ನು ಕೊಲ್ಲಿಸಿದ. ಭದ್ರಾ ಮೇಲ್ದಂಡೆ, ಹೆಬ್ಬೆ, ಗೋಂದಿ ನೀರಾವರಿ ಯೋಜನೆಗೆ ಒಂದೂ ರೂ. ನೀಡಿದ್ನಾ? ಎಂದು ಏಕ ವಚನದಲ್ಲಿ ಪ್ರಶ್ನೆ ಮಾಡಿದರು.

ಬಯಲು ನಾಡಲ್ಲಿ ನೀರಾವರಿ ಜಪ: ಮೈತ್ರಿ ಅಭ್ಯರ್ಥಿ ಪ್ರಚಾರ ಭಾಷಣದಲ್ಲಿ ಬಯಲು ಸೀಮೆಯ ನೀರಾವರಿ ಯೋಜನೆಗಳಿಗೆ ಶಕ್ತಿ ತುಂಬುವ ಜಪ ಮಾಡಲಾಯಿತು.

ಮುಖ್ಯಮಂತ್ರಿಯಾಗಿದ್ದಾಗ ಹೆಬ್ಬೆ ನೀರಾವರಿ ಯೋಜನೆಗೆ 100 ಕೋಟಿ ರೂ. ನೀಡಿದ್ದೇನೆ. ಎತ್ತಿನಹೊಳೆ ಯೋಜನೆಗೆ 13 ಸಾವಿರ ಕೋಟಿ ರೂ. ಕೊಟ್ಟಿದ್ದೆ. ಭದ್ರಾ ಮೇಲ್ದಂಡೆ ಜಾರಿ ಮಾಡಿದ್ದು ನಾನು ಎಂದು ಸಿದ್ದರಾಮಯ್ಯ ಬಯಲು ಸೀಮೆ ಬರದ ನಾಡಿನ ಜನರ ಗಮನ ಸೆಳೆಯುವ ಪ್ರಯತ್ನ ಮಾಡಿದರು.

ಬಯಲು ಸೀಮೆಗೆ ನೀರು ಯೋಜನೆ ಮುಂದಿನ ದಿನದಲ್ಲಿ ಮಾಡಲಾಗುವುದು. ನೀರಾವರಿ ಯೋಜನೆಗಳಿಗೆ ಶಕ್ತಿ ತುಂಬುವೆನು ಎಂದು ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಭರವಸೆ ನೀಡಿದರು.

ಬಿಜೆಪಿ ಸೋಲಿಸಲು ಸಿದ್ದು, ಗೌಡರ ಪಣ: ಪ್ರಜಾತಂತ್ರ ವ್ಯವಸ್ಥೆ ಉಳಿಸಿ ಬಿಜೆಪಿಯನ್ನು ಕೇಂದ್ರದಿಂದ ತೆಗೆಯಲೇಬೇಕೆಂಬ ಪಣದಿಂದ ಕಾಂಗ್ರೆಸ್-ಜೆಡಿಎಸ್ ಒಂದಾಗಿರುವುದಾಗಿ ಮಾಜಿ ಪಿಎಂ ಎಚ್.ಡಿ.ದೇವೇಗೌಡ ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಗೆ ತಿಲಾಂಜಲಿ ಇಟ್ಟಿರುವ ನರೇಂದ್ರ ಮೋದಿ ಸ್ವಾತಂತ್ರೊ್ಯೕತ್ತರದ ಕೆಟ್ಟ ಪ್ರಧಾನಿ. ಕೀಳು ಮಟ್ಟದ ಘೊಷಣೆಯಲ್ಲಿಯೇ ಐದು ವರ್ಷ ಕಾಲ ಕಳೆದಿದ್ದಾರೆ ಎಂದು ಹರಿಹಾಯ್ದರು.

ಆರೋಪದ ಬಗ್ಗೆ ರಾಹುಲ್ ಗಾಂಧಿ ಪ್ರಶ್ನೆ ಕೇಳಿದರೆ ಉತ್ತರ ಕೊಡದೆ ಲೋಕಸಭೆ ಅಧಿವೇಶನದಿಂದ ಮೋದಿ ಎದ್ದು ಹೊರ ಹೋಗಿದ್ದರು. 60 ವರ್ಷದ ಇತಿಹಾಸದಲ್ಲಿ ಇಂಥ ಘಟನೆ ನಡೆದಿಲ್ಲ. ಬಿಜೆಪಿ ಸೋಲಿಸಬೇಕೆಂಬ ಉದ್ದೇಶದಿಂದ ಜಂಟಿ ಹೋರಾಟ ಮಾಡಲಾಗುತ್ತಿದೆ ಎಂದು ಗೌಡರು ಮೈತ್ರಿ ಸಮರ್ಥಿಸಿಕೊಂಡರು.

ನರೇಂದ್ರ ಮೋದಿ ಮತ್ತೆ ಧಿಕಾರಕ್ಕೆ ಬರಬಾರದೆಂಬ ಉದ್ದೇಶದಿಂದಲೇ ಕಾಂಗ್ರೆಸ್-ಜೆಡಿಎಸ್ ಒಂದಾಗಿವೆ. ಎರಡೂ ಪಕ್ಷದ ಕಾರ್ಯಕರ್ತರಿಗೆ ಬಿಜೆಪಿಯೇ ಎದುರಾಳಿ ಎಂದು ಸಿದ್ದರಾಮಯ್ಯ ಕಾರ್ಯಕರ್ತರನ್ನು ಹುರಿದುಂಬಿಸಿದರು.

ಸಿಡಿಮಿಡಿಗೊಂಡ ಸಿದ್ದು

ಭಾಷಣದ ನಡುವೆ ಕಾರ್ಯಕರ್ತನೊಬ್ಬ ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ ಸಿಡಿಮಿಡಿಗೊಂಡರು. ಸಿದ್ದರಾಮಯ್ಯ ಭಾಷಣ ಮಾಡುವಾಗ ಮಧ್ಯ ಮಾತನಾಡಿದ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಕಳೆದ ಬಾರಿ ಆನಂದ್ ಪರ ಪ್ರಚಾರ ಮಾಡಲು ತಾವು ಬರಲಿಲ್ಲವೆಂದು ಜೋರಾಗಿ ಕೂಗಿದ. ಇದರಿಂದ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ಕಳೆದ ಬಾರಿ ನನಗೆ ಬರಲಾಗಲಿಲ್ಲ. ಆನಂದ್​ಗೆ ಟಿಕೆಟ್ ಕೊಟ್ಟಿದ್ದು ನಾನೇ. ಇದು ನಿನಗೆ ಗೊತ್ತಿದೆಯೇ? ವಿಳಂಬವಾಗಿ ಟಿಕೆಟ್ ನೀಡಿದ್ದರಿಂದ ಆನಂದಗೆ ಹಿನ್ನೆಡೆಯಾಗಿದೆ ಎಂದರು.

ದೇಶಕ್ಕೆ ಆಪತ್ತು ಬಂದಿದೆ

ಸರ್ವಾಧಿಕಾರಿ ಬೆಳೆಯುತ್ತಿರುವ ದೇಶಕ್ಕೆ ಆಪತ್ತು ಎದುರಾಗಿದೆ. ಒಬ್ಬ ವ್ಯಕ್ತಿಯ ಕೈಗೆ ಅಧಿಕಾರ ಹೋಗುವುದನ್ನು ತಡೆಯಲು ದೇಶದ ಜನ ಮಂದಾಗಬೇಕೆಂದು ಮಾಜಿ ಶಾಸಕ ವೈಎಸ್​ವಿ ದತ್ತ ಮನವಿ ಮಾಡಿದರು. ಪುಲ್ವಾಮಾ, ಬಾಲ್​ಕೋಟ್ ಘಟನೆಗಳ ಸಮೂಹ ಸನ್ನಿಗೆ ಜನ ಒಳಗಾಗಬಾರದು. ಕಳ್ಳನನ್ನು ಹಿಡಿದ ಪೊಲೀಸ್ ಹಿರೋ ಆಗಬೇಕೇ ಹೊರತು, ಅದಕ್ಕೆ ನಿರ್ದೇಶನ ನೀಡಿದ ಶಾಸಕ ಅಥವಾ ಜನ ಪ್ರತಿನಿಧಿ ಆಗಬಾರದು ಎಂದು ಹೇಳಿದರು. 2009ರಲ್ಲಿ ನಡೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಕಡೂರು ದತ್ತು ಪಡೆಯುತ್ತೇನೆಂದು ಹೇಳಿದ್ದ ಬಿ.ಎಸ್.ಯಡಿಯೂರಪ್ಪ ಕೈಕೊಟ್ಟಿದ್ದಾರೆ ಎಂದು ಹಳೆಯದನ್ನು ನೆನಪು ಮಾಡಿದರು.

Leave a Reply

Your email address will not be published. Required fields are marked *