ಮೋದಿ ಆಡಳಿತದಲ್ಲಿ ಜನಸಾಮಾನ್ಯರ ಪ್ರಗತಿಗೆ ಒತ್ತು

ಸೊರಬ: ಗರೀಬಿ ಹಠಾವೊ ಹೋರಾಟದಿಂದ ಕಾಂಗ್ರೆಸ್ ನಾಯಕರ ಬಡತನ ಕಡಿಮೆಯಾಯಿತೇ ವಿನಃ ದೇಶದ ಬಡತನ ದೂರವಾಗಲಿಲ್ಲ ಎಂದು ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮೋದಿ ಆಡಳಿತಕ್ಕೆ ಬಂದ ಮೇಲೆ ಉಜ್ವಲ್ ಯೋಜನೆ, ಕೃಷಿ ಸಮ್ಮಾನ್, ಆಯುಷ್ಮಾನ್, ಜನೌಷಧ ಕೇಂದ್ರಗಳನ್ನು ತೆರೆದು ಸಾಮಾನ್ಯ ಜನರ ಪ್ರಗತಿಗೆ ಒತ್ತು ನೀಡಲಾಗಿದೆ. ನೀರಾವರಿ, ರೈಲ್ವೆಗೆ ಒತ್ತು ನೀಡಿದ್ದೇನೆ ಎಂದರು.

ಶಾಸಕ ಹರತಾಳು ಹಾಲಪ್ಪ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವದ ಹಬ್ಬ ಎದುರಾಗಿದ್ದು ಜಾತ್ಯತೀತವಾಗಿ ಎಲ್ಲರೂ ಭಾಗವಹಿಸಬೇಕು. ಈ ಹಬ್ಬದಲ್ಲಿ ದೇಶದ ಘನತೆ, ಗೌರವ ಎತ್ತಿಹಿಡಿಯುವಂತೆ ಆಚರಿಸಿ ಉತ್ತಮ ಅಭ್ಯರ್ಥಿಗಳನ್ನು ಆರಿಸಬೇಕು. ಈ ಚುನಾವಣೆ ಪ್ರಪಂಚಕ್ಕೆ ನಾಯಕತ್ವ ಕೊಡುವಂಥದ್ದು. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕಿದೆ. ಜಿಲ್ಲೆಯಲ್ಲಿ ಬಿ.ವೈ. ರಾಘವೇಂದ್ರ ಲಕ್ಷಾಂತರ ಮತಗಳಿಂದ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಿರಸಿ-ಸಿದ್ದಾಪುರ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸಭೆಯನ್ನು ಉದ್ಘಾಟಿಸಿದರು. ತಾಲೂಕು ಬಿಜೆಪಿ ಅಧ್ಯಕ್ಷ ಎ.ಎಲ್.ಅರವಿಂದ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕುಮಾರ ಬಂಗಾರಪ್ಪ, ಮುಖಂಡರಾದ ದತ್ತಾತ್ರಿ, ಟಿ.ಡಿ.ಮೇಘರಾಜ್, ಶ್ರೀಪಾದ ಹೆಗಡೆ ನಿಸರಾಣಿ, ಎಚ್.ಎಸ್.ಮಂಜಪ್ಪ, ಜಿಪಂ ಸದಸ್ಯ ಸತೀಶ್, ತಾಪಂ ಅಧ್ಯಕ್ಷೆ ನಯನಾ ಹೆಗಡೆ, ಎಂ.ಡಿ.ಉಮೇಶ್, ಗಜಾನನ ರಾಜ್, ಗೀತಾ ಮಲ್ಲಿಕಾರ್ಜುನ, ನಾಗರಾಜ್ ಚಿಕ್ಕಸವಿ, ತಬಲಿ ಬಂಗಾರಪ್ಪ, ಪಾಣಿ ರಾಜಪ್ಪ, ದೇವಕಿ ಪಾಣಿ, ಶಿವರಾಜ ಗೌಡ, ದೇವೇಂದ್ರಪ್ಪ ಯಲಕುಂದ್ಲಿ, ಈಶ್ವರ ಚನ್ನಪಟ್ಟಣ, ನಿರಂಜನ ಕುಪ್ಪಗಡ್ಡೆ, ಗುರುಪ್ರಸನ್ನ ಗೌಡ, ಶಿವಯೋಗಿ ಇತರರಿದ್ದರು.