ಮೋದಿ ಅಲೆ, ಮಾಡಿದ ಕೆಲಸವೇ ಆಧಾರ

ಹುಬ್ಬಳ್ಳಿ: ದೇಶಕ್ಕಾಗಿ ಹಗಲಿರುಳೆನ್ನದೇ ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಹಾಗೂ ಅವರ ನೆರವಿನಿಂದ ಕಳೆದೈದು ವರ್ಷದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳೇ ನನಗೆ ಆಧಾರ. ಮೋದಿ ಮತ್ತೆ ಪ್ರಧಾನಿಯಾಗಬೇಕು ಎನ್ನುವ ಜನಸಾಮಾನ್ಯರ ಒತ್ತಾಸೆ, ಕ್ಷೇತ್ರದ ಎಲ್ಲ ಸಮುದಾಯದವರ ಪ್ರೀತಿ-ವಿಶ್ವಾಸದಿಂದಾಗಿ ಈ ಸಲ 2 ಲಕ್ಷಕ್ಕಿಂತ ಹೆಚ್ಚು ಅಂತರದಿಂದ ಗೆಲ್ಲುವ ವಿಶ್ವಾಸವಿದೆ…

ಧಾರವಾಡ ಲೋಕಸಭೆ ಕ್ಷೇತ್ರದಿಂದ ಪುನರಾಯ್ಕೆ ಬಯಸಿರುವ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಹೀಗೆ ಹೇಳಿದರು.

ವಿಜಯವಾಣಿ ಕಚೇರಿಯಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದ್ದು ಇಲ್ಲಿದೆ.

2014ರಲ್ಲಿ ಎದುರಾಳಿಯಾಗಿದ್ದವರೇ ಈಗಲೂ ಅಭ್ಯರ್ಥಿ. ಹೇಗೆ ಎದುರಿಸುತ್ತೀರಿ?

ಪ್ರಲ್ಹಾದ ಜೋಶಿ: ಅಭ್ಯರ್ಥಿ ಅವರೇ (ವಿನಯ ಕುಲಕರ್ಣಿ) ಆದರೂ ದೇಶದಲ್ಲೂ, ಕ್ಷೇತ್ರದಲ್ಲೂ ಸನ್ನಿವೇಶಗಳು ಬೇರೆ. ನಾನು ಯಾರ ವೈಯಕ್ತಿಕ ಟೀಕೆಯನ್ನೂ ಮಾಡುವುದಿಲ್ಲ. ರಾಜಕಾರಣದಲ್ಲಿರುವವರಿಗೂ ಸಭ್ಯತೆ, ಸಂಸ್ಕೃತಿ ಇರಬೇಕು. ನಾನು ಕ್ಷೇತ್ರದ ಹೆಸರಿಗೆ ಕಳಂಕ ಬರುವಂತೆ ಎಲ್ಲೂ ನಡೆದುಕೊಂಡಿಲ್ಲ. ಕ್ಷೇತ್ರವನ್ನು ಸಮರ್ಥವಾಗಿ ಹಾಗೂ ಗೌರವಯುತವಾಗಿ ಪ್ರತಿನಿಧಿಸಿದ್ದೇನೆ ಎಂಬ ಹೆಮ್ಮೆ ಇದೆ. ಸಂಸತ್ತಿನ ಚಟುವಟಿಕೆಯಲ್ಲಿಯೂ ರಾಷ್ಟ್ರೀಯ ಸರಾಸರಿಗಿಂತ ನನ್ನದು ಜಾಸ್ತಿ ಇದೆ.

ಕಳೆದ ಐದು ವರ್ಷದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ಜನರು ಮನಗಂಡಿದ್ದಾರೆ. ಸದಾ ಜನರಿಗೆ ಲಭ್ಯನಿದ್ದೇನೆ. ಐಐಟಿ, ಐಐಐಟಿ, ಅಮೃತ ಯೋಜನೆ, ಸ್ಮಾರ್ಟ್ ಸಿಟಿ ಇವೆಲ್ಲ ಸಮಯೋಚಿತ ಪ್ರಯತ್ನ, ನಿರಂತರವಾಗಿ ಬೆನ್ನು ಬಿದ್ದಿದ್ದರಿಂದಲೇ ಸಿಕ್ಕಿದ್ದು. ಉಜ್ವಲ ಯೋಜನೆಯಲ್ಲಿ 72 ಸಾವಿರ ಕುಟುಂಬಕ್ಕೆ ಅಡುಗೆ ಅನಿಲ ವಿತರಿಸಲಾಗಿದೆ. ಖಾದಿ ಗ್ರಾಮೋದ್ಯೋಗ ವಲಯ ಕಚೇರಿ, ಬಿಐಎಸ್ ಕಚೇರಿ ತಂದಿದ್ದು ಎಷ್ಟೋ ಜನರಿಗೆ ಅನುಕೂಲವಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ತನ್ನ ಮೇಲೆ ಪ್ರಕರಣ ದಾಖಲಾಗಲು ಪ್ರಲ್ಹಾದ ಜೋಶಿಯವರೇ ಕಾರಣ ಎನ್ನುತ್ತಿದ್ದಾರಲ್ಲ?

ನ್ಯಾಯಾಲಯ, ಕಾನೂನು ಜ್ಞಾನ ಇಲ್ಲದವರು ಆಡುವ ಮಾತು. ಹಿಂದೆಯೇ ಹೈಕೋರ್ಟ್​ನಲ್ಲಿದ್ದ ಪ್ರಕರಣದಲ್ಲಿ ಆದೇಶವಾಗಿದೆ. ಅದರಂತೆ ಜೆಎಂಎಫ್​ಸಿ ಕೋರ್ಟ್ ವಿಚಾರಣೆ ನಡೆಸಿ ಎಫ್​ಐಆರ್ ದಾಖಲಿಸಲು ಆದೇಶಿಸಿದೆ. ಅದೆಲ್ಲ ಚುನಾವಣೆ ಸಂದರ್ಭದಲ್ಲೇ ಆದರೆ ನಾನೇನು ಮಾಡಲಿ? ನ್ಯಾಯಾಲಯದ ಮೇಲೆ ಪ್ರಭಾವ ಬೀರುವಷ್ಟು ದೊಡ್ಡವ ನಾನಾ? ಅವರ (ವಿನಯ ಕುಲಕರ್ಣಿ) ಪ್ರೌಢಿಮೆ ಬಗ್ಗೆ ಏನೆನ್ನಬೇಕು? ಅವರ ಮಾತು ನನಗಂತೂ ಅರ್ಥವಾಗುತ್ತಿಲ್ಲ. ಕೊಲೆಯಾದ ಯೋಗೀಶಗೌಡ ನಮ್ಮ ಪಕ್ಷದ ಜಿ.ಪಂ. ಸದಸ್ಯರಾಗಿದ್ದರು. ಅವರ ಸಹೋದರ ಗುರುನಾಥಗೌಡ ನಮ್ಮ ಪಕ್ಷದಲ್ಲಿದ್ದಾರೆ ಎಂಬ ಕಾರಣಕ್ಕೆ ನ್ಯಾಯಾಲಯದ ಆದೇಶಕ್ಕೂ ಪ್ರಲ್ಹಾದ ಜೋಶಿ ಕಾರಣ ಎಂದರೆ ಸರಿಯಾ?

ಜನರು ಪ್ರಜ್ಞಾವಂತರಿದ್ದಾರೆ. ಜಾತಿ ರಾಜಕಾರಣವನ್ನೂ ಬಯಸುವುದಿಲ್ಲ. ಜಾತಿ ರಾಜಕಾರಣ ಕೆಲ ನಾಯಕರಿಗಷ್ಟೇ ಬೇಕಾಗಿದೆ! ಹೀಗಾಗಿ ಇಲ್ಲಸಲ್ಲದ ಆರೋಪ ಮಾಡುತ್ತಾರೆ. ಮತದಾರರು ಎಲ್ಲವನ್ನೂ ಗಮನಿಸುತ್ತಿದ್ದು, ಮೋದಿಯವರೇ ಮತ್ತೆ ಪ್ರಧಾನಿಯಾಗಬೇಕು ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ. ಹೀಗಾಗಿ, ಸರಿಯಾದ ತೀರ್ಪು ನೀಡಲಿದ್ದಾರೆ ಎಂಬ ಪೂರ್ಣ ವಿಶ್ವಾಸವಿದೆ.

ಈ ಸಲ ಕಾಂಗ್ರೆಸ್-ಜೆಡಿಎಸ್ ಜಂಟಿಯಾಗಿರುವುದರಿಂದ ನಿಮ್ಮ ಮೇಲೆ ಆಗುವ ಪರಿಣಾಮ?

2009ರಲ್ಲಿ ಜೆಡಿಎಸ್ ಸ್ಪರ್ಧಿಸಿರಲಿಲ್ಲ. 2014ರಲ್ಲಿ ಜೆಡಿಎಸ್ ಅಭ್ಯರ್ಥಿಗೆ 8 ಸಾವಿರ ಮತ ಬಿದ್ದಿತ್ತು. ಈ ಕ್ಷೇತ್ರದಲ್ಲಿ ಜೆಡಿಎಸ್ ಪ್ರಭಾವ ಅಷ್ಟಾಗಿ ಇಲ್ಲ. ಆ ಪಕ್ಷದ ಒಬ್ಬರೂ ಶಾಸಕರಿಲ್ಲ. ಹೀಗಾಗಿ ಎರಡು ಪಕ್ಷಗಳ ಮೈತ್ರಿಯಿಂದ ಬಿಜೆಪಿಗೆ ಯಾವ ಭಯವೂ ಇಲ್ಲ.

ಸಿಎಸ್​ಆರ್ ಚಟುವಟಿಕೆ ಹೆಮ್ಮೆ ತಂದಿದೆ

ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸ್ಥಾಯಿ ಸಮಿತಿ ಅಧ್ಯಕ್ಷನಾಗಿ ಸಿಎಸ್​ಆರ್ (ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆ) ನಿಧಿಯಡಿ ಮಾಡಿದ ಕೆಲಸದ ಬಗ್ಗೆ ತುಂಬಾ ಹೆಮ್ಮೆ ಇದೆ.

ಸರ್ಕಾರಿ ಶಾಲೆಗಳಿಗೆ ಸುಮಾರು 15000 ಡೆಸ್ಕ್​ಗಳನ್ನು ವಿತರಿಸಿದ್ದೇವೆ. ಸಿಎಸ್​ಆರ್ ನಿಧಿಯನ್ನು ಶಾಲೆಗಳಿಗೆ ಬಳಕೆ ಮಾಡಿದರೆ ವೋಟ್ ಬರುವುದಿಲ್ಲವೆಂದು ಕೆಲವರು ಹೇಳಿದ್ದರು. ಆದರೆ, ಜಿಲ್ಲೆಯಲ್ಲಿ ಹಲವು ಶಾಲೆಗಳಲ್ಲಿ ಮಕ್ಕಳು ನೆಲದ ಮೇಲೆ ಕುಳಿತು ಶಿಕ್ಷಣ ಪಡೆಯುತ್ತಿದ್ದದ್ದನ್ನು ನೋಡಿದ್ದೆ. ಹಾಗಾಗಿ ಮತದ ದೃಷ್ಟಿಯಿಂದ ನೋಡದೇ ಮಕ್ಕಳ ಹಿತದೃಷ್ಟಿಯಿಂದ ಕೆಲಸ ಮಾಡಿದ್ದೇನೆ. ಇನ್ನು 2-3 ವರ್ಷಗಳಲ್ಲಿ ಮತ್ತೆ 15000 ಡೆಸ್ಕ್ ವಿತರಿಸುವ, ಯಾವ ಮಗುವೂ ನೆಲದ ಮೇಲೆ ಕುಳಿತು ಓದುವ ಪರಿಸ್ಥಿತಿ ಇಲ್ಲದಂತೆ ಮಾಡುವ ಗುರಿ ಇದೆ.

564 ಶಾಲಾ-ಕಾಲೇಜುಗಳಿಗೆ ಸ್ಮಾರ್ಟ್ ಬೋರ್ಡ್ ವಿತರಿಸಿದ್ದೇವೆ. ಒಟ್ಟಾರೆ ಜಿಲ್ಲೆಗೆ 65 ಕೋಟಿ ರೂ. ಸಿಎಸ್​ಆರ್ ಅನುದಾನದಿಂದ ಸೌಲಭ್ಯ ಒದಗಿಸಿದ್ದೇನೆ.

ಪೈಪ್​ಲೈನ್ ಗ್ಯಾಸ್: ಪೈಪ್​ಲೈನ್ ಮೂಲಕ ಮನೆ ಮನೆಗೆ ಅಡುಗೆ ಅನಿಲ ಪೂರೈಸುವ ಯೋಜನೆ ಅವಳಿ ನಗರದಲ್ಲಿ ಕಾರ್ಯಾರಂಭ ಮಾಡಿದೆ. ನವನಗರ ಭಾಗದಲ್ಲಿ ಈಗಾಗಲೇ ಸುಮಾರು ಸಾವಿರ ಮನೆಗಳಿಗೆ ಪೂರೈಸಲಾಗುತ್ತಿದೆ. ಈ ರೀತಿ ಸುಮಾರು 30 ಸಾವಿರ ಮನೆಗಳಿಗೆ ಅಡುಗೆ ಅನಿಲ ಪೂರೈಕೆ ಮಾಡುವ ಉದ್ದೇಶವಿದೆ.

2014ರಲ್ಲಿಯೇ ಈ ಯೋಜನೆ ಆರಂಭಗೊಂಡರೂ ರಾಜ್ಯ ಸರ್ಕಾರದ ಅಸಹಕಾರದಿಂದ ನಿಗದಿತ ಗುರಿ ಮುಟ್ಟಲು ಸಾಧ್ಯವಾಗಿಲ್ಲ. ರಸ್ತೆ ಅಗೆಯಲು ಪರವಾನಗಿ ನೀಡುವ ವಿಷಯವನ್ನು ಇತ್ಯರ್ಥಪಡಿಸಲು ರಾಜ್ಯ ಸರ್ಕಾರ ಒಂದೂವರೆ ವರ್ಷ ತೆಗೆದುಕೊಂಡಿತು. ನಂತರ ದೆಹಲಿಗೆ ಅಧಿಕಾರಿಯನ್ನು ಕರೆಸಿ ಶಿಸ್ತುಕ್ರಮದ ಎಚ್ಚರಿಕೆ ನೀಡಬೇಕಾಯಿತು.

ಪೈಪ್​ಲೈನ್ ಮೂಲಕ ಮನೆ ಮನೆಗೆ ಅಡುಗೆ ಅನಿಲ ಪೂರೈಸುವ ಯೋಜನೆ ಅತ್ಯಂತ ಸುರಕ್ಷಿತ, ಮಿತವ್ಯಯವಾದುದು.

ಎರಡು ಕ್ರೀಡಾಂಗಣ: ಸಿಎಸ್​ಆರ್​ನಲ್ಲಿ ಧಾರವಾಡ ಈಜುಗೊಳ ಮತ್ತು ಹುಬ್ಬಳ್ಳಿಯ ತಾರಿಹಾಳದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ವಣವಾಗುತ್ತಿದೆ. ಒಂದು ಕ್ಷೇತ್ರದಲ್ಲಿ ಎರಡೆರಡು ಕ್ರೀಡಾಂಗಣ ಆಗುತ್ತಿರುವುದು ಇಡಿ ದೇಶದಲ್ಲಿ ಧಾರವಾಡದಲ್ಲಿ ಮಾತ್ರ.

ಹುಬ್ಬಳ್ಳಿ-ಬೆಂಗಳೂರು ಪ್ರಯಾಣ 4 ಗಂಟೆ!: ದಾವಣಗೆರೆಯಿಂದ ನೇರವಾಗಿ ಬೆಂಗಳೂರಿಗೆ ರೈಲು ಮಾರ್ಗ ನಿರ್ವಣಕ್ಕೆ ರಾಜ್ಯ ಸರ್ಕಾರ ಭೂಮಿ ನೀಡಿದರೆ ಹುಬ್ಬಳ್ಳಿ-ಬೆಂಗಳೂರು ಮಧ್ಯದ ಪ್ರಯಾಣದ ಅವಧಿ ಕೇವಲ 4 ತಾಸು!

ಆದರೆ, ಭೂಮಿ ನೀಡಲು ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ಪ್ರಲ್ಹಾದ ಜೋಶಿ ದೂರಿದರು.

ಕೇಂದ್ರ ಸಚಿವ ಅನಂತಕುಮಾರ ಅವರೊಂದಿಗೆ ಸೇರಿ ಪ್ರಧಾನಿ ನರೇಂದ್ರ ಮೋದಿ ಜೊತೆ ಒಮ್ಮೆ ಪ್ರಯಾಣಿಸುವಾಗ, ಹುಬ್ಬಳ್ಳಿ-ಬೆಂಗಳೂರು ಪ್ರಯಾಣ 4 ತಾಸಿಗೆ ಇಳಿಯಬೇಕೆಂದು ಮನವಿ ಮಾಡಿದ್ದೆ. ರಾಜ್ಯ ಸರ್ಕಾರ ಭೂಮಿ ನೀಡಿದರೆ, ಪ್ರತಿ ಗಂಟೆಗೆ 180 ಕಿಮೀ ವೇಗದಲ್ಲಿ ಸಂಚರಿಸುವ ವಂದೇ ಮಾತರಂ ರೈಲನ್ನು ಮಂಜೂರಿ ಮಾಡಿಸಲು ಬದ್ಧನಿದ್ದೇನೆ. ಹುಬ್ಬಳ್ಳಿ-ಚಿಕ್ಕಜಾಜೂರು ರೈಲು ಜೋಡಿ ಮಾರ್ಗ ನಿರ್ವಣಕ್ಕೆ ಕೇಂದ್ರ ಸರ್ಕಾರ ಹಣ ಬಿಡುಗಡೆಗೊಳಿಸಿದ್ದು, 2020ರಲ್ಲಿ ಪೂರ್ಣಗೊಳ್ಳಲಿದೆ.

ಕಿಮ್ಸ್​ಗೆ ಎಂದಾದರೂ ಕೇಂದ್ರದ ಹಣ ಬಂದಿತ್ತಾ?: ಹುಬ್ಬಳ್ಳಿಯ ಕಿಮ್್ಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ವಣಕ್ಕೆ ಕೇಂದ್ರ ಸರ್ಕಾರ 120 ಕೋಟಿ ರೂ. ನೀಡಿದೆ. ರಾಜ್ಯ ಸರ್ಕಾರದ ಸಂಸ್ಥೆಗೆ ಇಷ್ಟೊಂದು ಅನುದಾನವನ್ನು ರಾಜ್ಯ ಸರ್ಕಾರವೇ ನೀಡಿರಲಿಲ್ಲ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರಾಜ್ಯದ ಪಾಲು 30 ಕೋಟಿ ರೂ. ದಲ್ಲಿ ಬರೀ 15 ಕೋಟಿ ರೂ. ಬಂದಿದೆ. ಇನ್ನೂ 15 ಕೋಟಿ ಬಾಕಿ ಉಳಿಸಿಕೊಂಡಿದೆ. ಆಸ್ಪತ್ರೆಗೆ ಸಂಬಂಧಿಸಿದಂತೆ ವೈದ್ಯಕೀಯ ಪರಿಕರಗಳನ್ನು ಕೇಂದ್ರವೇ ಪೂರೈಸಿದೆ. ಆದರೆ ರಾಜ್ಯ ಸರ್ಕಾರ ಸಿಬ್ಬಂದಿ ನೇಮಕಕ್ಕೆ ಇನ್ನೂ ಮುಂದಾಗಿಲ್ಲ. ಕೇಂದ್ರದಿಂದ ಯೋಜನೆಗಳು ಬಹು ಬೇಗ ಜಾರಿಯಾಗುತ್ತವೆ. ಆದರೆ, ರಾಜ್ಯ ಸರ್ಕಾರ ಅಡೆತಡೆಯೊಡ್ಡುತ್ತಿದೆ.

ಧಾರವಾಡದ ಡಿಮ್ಹಾನ್ಸ್ ಅಭಿವೃದ್ಧಿಗೆ ಕೇಂದ್ರ ಸರ್ಕಾರ 30 ಕೋಟಿ ರೂ. ನೀಡಿದೆ. ಜಿಲ್ಲಾಸ್ಪತ್ರೆಗೂ ಭರಪೂರ ಅನುದಾನ ನೀಡಿದೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆ ನೀಡಿದೆ.

ಐಐಟಿ ಸುಮ್ನೆ ಬರಲಿಲ್ಲ: ಐಐಟಿಗೆ ಜಾಗ ಕೊಟ್ಟಿದ್ದೇವೆ ಎಂದು ಎದುರಾಳಿಗಳು ಹೇಳುತ್ತಾರೆ. ಅದು ರಾಜ್ಯದ ಕರ್ತವ್ಯ. ಐಐಟಿಗಾಗ ಎಸ್.ಎಂ. ಕೃಷ್ಣ ಸರ್ಕಾರ, ಯಡಿಯೂರಪ್ಪ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದ್ದವು. ಮಂಜೂರಿ ಆಗಿರಲಿಲ್ಲ. ಧಾರವಾಡಕ್ಕೆ ಐಐಟಿ ಬಂದರೆ ವಿದ್ಯಾನಗರಿಯ ಕಿರೀಟಕ್ಕೊಂದು ಗರಿಯಾಗುತ್ತದೆ ಎಂದು ಕೇಂದ್ರ ಸಚಿವರಾಗಿದ್ದ ಅನಂತಕುಮಾರ ಅವರ ಮೂಲಕ ಸ್ಮೃತಿ ಇರಾನಿಯವರಿಗೆ ಹೇಳಿಸಿದ್ದೆ. ಜಗದೀಶ ಶೆಟ್ಟರ್ ಅವರೂ ಒತ್ತಾಯಿಸಿದ್ದರು. ಈ ವಿಷಯದಲ್ಲಿ ಅನಂತಕುಮಾರ ಅವರನ್ನು ಎಷ್ಟು ಸ್ಮರಿಸಿಕೊಂಡರೂ ಸಾಲದು. ಅದರ ಮಧ್ಯೆ ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಮೈಸೂರು, ರಾಯಚೂರು ಎಂದೆಲ್ಲ ಹೇಳಿದರು. ಪುನಃ ಸ್ಮೃತಿ ಇರಾನಿಯವರನ್ನು ಭೇಟಿ ಮಾಡಿ ವಿನಂತಿಸಿದೆವು. ಅವರು ವಿಶೇಷ ಕಾಳಜಿ ವಹಿಸಿ ಮಂಜೂರಿ ಮಾಡಿದರು.

ಅದಾದ ಮೇಲೆ ರಾಜ್ಯ ಸರ್ಕಾರ ಜಾಗದ ವಿಷಯದಲ್ಲಿ ಅಲ್ಲಿ ಇಲ್ಲಿ ಎಂದು ಸಮಯ ಕಳೆಯಿತು. ಈಗ ಕಟ್ಟಡಕ್ಕೆ ಕೇಂದ್ರ ಸರ್ಕಾರ ಹಣ ಕೂಡ ನೀಡಿದೆ.

ದಾಖಲೆ ಅನುದಾನ: 1200 ಕೋಟಿ ರೂ. ಸಿಆರ್​ಎಫ್(ಸೆಂಟ್ರಲ್ ರೋಡ್ ಫಂಡ್) ಬಂದಿದೆ. ಇದೊಂದು ದಾಖಲೆ. ಭೂಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೆ ಗಂಟುಬಿದ್ದಿದ್ದೆ. ಅಧಿಕಾರಿಗಳು ಆಗುವುದಿಲ್ಲ ಎಂದು ಕುಳಿತಿದ್ದರು. ಗಡ್ಕರಿಯವರು ಪಾಲಿಸಿಯನ್ನೇ ಬದಲಿಸಿದರು. ಗದಗ, ವಿಜಯಪುರ ಹೆದ್ದಾರಿ, ಬೈಪಾಸ್​ಗಳ ಕೆಲಸ ನಡೆದಿದೆ.

ಅದು ರಾಜ್ಯದ ಹಕ್ಕು ಎಂದು ಕಾಂಗ್ರೆಸ್​ನವರು ಹೇಳಿಕೊಳ್ಳುತ್ತಾರೆ. ಯುಪಿಎ ಸರ್ಕಾರದ 10 ವರ್ಷದಲ್ಲಿ 44 ಕೋಟಿ ರೂ. ಮಾತ್ರ ಬಂದಿತ್ತು. ಆಗ ರಾಜ್ಯದ ಹಕ್ಕು ಇರಲಿಲ್ಲವೆ ಎಂದು ಪ್ರಲ್ಹಾದ ಜೋಶಿ ಖಾರವಾಗಿ ಪ್ರಶ್ನಿಸಿದರು.

ಫ್ಲೈಓವರ್ ವಿಷಯದಲ್ಲೂ ಅಷ್ಟೆ; ನಿತಿನ್ ಗಡ್ಕರಿಯವರ ಬಳಿ ಮನವಿ ಮಾಡಿಕೊಂಡು ರಾಜ್ಯ ಸರ್ಕಾರದಿಂದ ಡಿಪಿಆರ್ ಕಳುಹಿಸಿ ಎಂದೆವು. 300 ಕೋಟಿ ರೂ.ಗಳ ಯೋಜನೆಗೆ ಡಿಪಿಆರ್ ಮಾಡಿದ ಕನ್ಸಲ್ಟಂಟ್ ಕಂಪನಿಗೆ 3 ಕೋಟಿ ರೂ. ಕೊಡಲು ರಾಜ್ಯದ ಕಾಂಗ್ರೆಸ್ ಸರ್ಕಾರ ಸತಾಯಿಸಿದ್ದರಿಂದ ಡಿಪಿಆರ್ ಸಲ್ಲಿಕೆಗೆ ವಿಳಂಬವಾಯಿತು. ಆದಾಗ್ಯೂ ಗಡ್ಕರಿಯವರು ಮಂಜೂರಿ ಭರವಸೆ ನೀಡಿದ್ದಾರೆ.