ಮೋದಿ ಅಲೆಯೋ, ಗೌಡರ ನಾಮಬಲವೋ?

ಜಗನ್ನಾಥ್ ಕಾಳೇನಹಳ್ಳಿ ತುಮಕೂರು

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸ್ಪರ್ಧೆಯಿಂದ ರಾಷ್ಟ್ರದ ಗಮನಸೆಳೆದಿದ್ದ ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆ ಕಾವು ತಗ್ಗಿದೆ. ಈಗ ಎಲ್ಲೆಡೆ ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಇಳಿವಯಸ್ಸಿನಲ್ಲಿ ದೊಡ್ಡಗೌಡರನ್ನು ಜಿಲ್ಲೆಯ ಜನತೆ ಕೈ ಹಿಡಿಯುತ್ತಾರಾ ಎಂಬ ಯಕ್ಷಪ್ರಶ್ನೆ ಸಹಜವಾಗಿ ಎಲ್ಲರನ್ನೂ ಕಾಡುತ್ತಿದೆ.

ಲೋಕಸಭಾ ಮಹಾಸಮರಕ್ಕೆ ಗುರುವಾರ ತೆರೆಬಿದ್ದಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ದೇವೇಗೌಡರು ಗೆಲ್ತಾರಾ, ಮೋದಿ ಅಲೆಯಲ್ಲಿ ಕೊಚ್ಚಿ ಹೋಗ್ತಾರಾ ಎಂಬ ಕುತೂಹಲ ಹೆಚ್ಚಿದೆ.

ಲೋಕಸಮರದಲ್ಲಿ ಇತಿಹಾಸ!: ಈ ಬಾರಿ ಲೋಕಸಮರದಲ್ಲಿ ಶೇ.77.03 ದಾಖಲೆ ಮತದಾನವಾಗಿದ್ದು, ಈವರೆಗಿನ ಲೋಕ ಚುನಾವಣೆಯಲ್ಲಿ ಹೊಸ ಇತಿಹಾಸ. ಹಾಗಾಗಿ, ಮತದಾನದ ಶೇಕಡವಾರು ಅಂಕಿ-ಅಂಶ ಸಿಕ್ಕ ಬಳಿಕ ಬಿಜೆಪಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಕಾರ್ಯಕರ್ತರು, ಮುಖಂಡರು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.

ಕ್ಷೇತ್ರದಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಶೇಕಡವಾರು ಮತದಾನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 2014ರಲ್ಲಿ ಶೇ.72.54 ಮತದಾನವಾಗಿತ್ತು. ಈ ಬಾರಿ 4.49 ಮತದಾನ ಹೆಚ್ಚಳವಾಗಿದ್ದು, ಇದಕ್ಕೆ ಯುವ ಮತದಾರರೇ ಕಾರಣ ಎಂಬುದು ಸ್ಪಷ್ಟವಾಗಿದೆ. ಈ ಬಾರಿ ದೇಶ ಮೊದಲು ಎಂಬ ಬಿಜೆಪಿ ಅಬ್ಬರದ ಪ್ರಚಾರ, ಮೋದಿ ಅಲೆ ಮತದಾನ ಹೆಚ್ಚಳಕ್ಕೆ ಕಾರಣವೆಂಬ ವ್ಯಾಖ್ಯಾನವೂ ಇದೆ.

ನಗರದಲ್ಲೇ ನಿರುತ್ಸಾಹ!: ಬಿಜೆಪಿ ವೋಟ್ ಬ್ಯಾಂಕ್ ಎನಿಸಿರುವ ನಗರದಲ್ಲೇ ಮತದಾನ ಕಡಿಮೆ ಆಗಿದೆ. ಆದರೆ, ಮುಸ್ಲಿಂ ಮತದಾರರು ಹೆಚ್ಚಿರುವ ಮತಗಟ್ಟೆಗಳಲ್ಲಿ ಮತದಾನ ಪ್ರಮಾಣ ಕಡಿಮೆ ಆಗಿರುವುದು ಮೈತ್ರಿಕೂಟದ ಕಳವಳಕ್ಕೆ ಕಾರಣವಾಗಿದೆ. ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ತುಮಕೂರು ನಗರ ಕ್ಷೇತ್ರದಲ್ಲಿ ಶೇ.65.42 ಅತಿಕಡಿಮೆ ಮತದಾನವಾಗಿದೆ. ಕ್ಷೇತ್ರದಲ್ಲಿ ಚಲಾವಣೆ ಆಗಿರುವ 1238624 ಮತಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಗೆಲುವಿನ ದಡ ಮುಟ್ಟಲು ಕನಿಷ್ಠ 5.50ರಿಂದ 5.75 ಲಕ್ಷ ಮತಗಳಿಸಬೇಕಿದೆ.

ಎಸ್ಪಿಎಂ, ರಾಜಣ್ಣ ರೆಬೆಲ್: ಮಧುಗಿರಿಯಲ್ಲಿ ಮೈತ್ರಿಕೂಟದ ನಿರೀಕ್ಷೆಗಳು ಗಾಳಿಗೆ ತೂರಿ ಬಿಜೆಪಿಗೆ ಈ ಬಾರಿ ಮಾಜಿ ಶಾಸಕ ಕೆ.ಎನ್.ರಾಜಣ್ಣರ ‘ಬಂಡಾಯ’ದ ಲಾಭ ಲಭಿಸುವ ಲೆಕ್ಕಾಚಾರಗಳಿವೆ. ಅದೇ ರೀತಿ ಕೊರಟಗೆರೆಯಲ್ಲೂ ಬಿಜೆಪಿ ನಿರೀಕ್ಷೆ ಮೀರಿ ಮತ ಪಡೆಯುವ ಸಾಧ್ಯತೆಗಳಿವೆ. ಇದು ಡಿಸಿಎಂ ಡಾ.ಜಿ.ಪರಮೇಶ್ವರ್ ಪ್ರತಿನಿಧಿಸುವ ಕ್ಷೇತ್ರವಾಗಿದ್ದು, ಮೈತ್ರಿಕೂಟದ ಮುಖಂಡರು ಒಗ್ಗಟ್ಟಿನ ಪ್ರಚಾರ ನಡೆಸದಿರುವುದು ದೊಡ್ಡ ಮುನ್ನಡೆ ನಿರೀಕ್ಷಿಸಿರುವ ಗೌಡರ ಲೆಕ್ಕಾಚಾರ ತಲೆಕೆಳಗೆ ಮಾಡಲಿದೆ ಎನ್ನಲಾಗಿದೆ. ಇನ್ನು, ಹಾಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡಗೆ ಆಗಾಗಿರುವ ‘ಅನ್ಯಾಯ’ ಕೂಡ ಫಲಿತಾಂಶ ಏರುಪೇರಿಗೆ ಕಾರಣವಾಗಲಿದೆ.

ಬಿಜೆಪಿ ಶಾಸಕರಿರುವ ತಿಪಟೂರು (ಶೇ.80.27), ತುರುವೇಕೆರೆ (ಶೇ.80), ಚಿಕ್ಕನಾಯಕನಹಳ್ಳಿ ಶೇ.78 ಮತದಾನವಾಗಿದೆ. 2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಈ ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಶೇಕಡವಾರು ಹೆಚ್ಚಳವಾಗಿರುವುದು ಬಿಜೆಪಿಗೆ ವರದಾನವಾಗಲಿದೆ ಎಂಬ ಲೆಕ್ಕಾಚಾರ ಇದೆ. ಗುಬ್ಬಿ ಕ್ಷೇತ್ರದಲ್ಲಿ ಕಳೆದ ವಿಧಾನಸಭೆಯಲ್ಲಿ ಬಿಜೆಪಿ ಹಾಗೂ ಪಕ್ಷೇತರ ಮತಗಳು ಹಂಚಿಹೋಗಿದ್ದು, ಈ ಬಾರಿ ಬಿಜೆಪಿ ತೆಕ್ಕೆಗೆ ಬಂದಿವೆ ಎಂಬ ಮಾತುಗಳಿವೆ. ಆದರೆ, ಜೆಡಿಎಸ್/ಕಾಂಗ್ರೆಸ್ ಮೈತ್ರಿಕೂಟಕ್ಕೆ ಇದು ಪ್ಲಸ್ ಆಗಲಿದೆ ಎಂಬುದನ್ನು ತಳ್ಳಿಹಾಕುವಂತಿಲ್ಲ ಎಂಬ ಮತ್ತೊಂದು ವಾದವೂ ಇದೆ.

ಮೇ 23ಕ್ಕೆ ಮತ ಏಣಿಕೆ ನಡೆಯಲಿದ್ದು ಒಟ್ಟಿನಲ್ಲಿ ಕೂಡಿ-ಕಳೆಯುವ, ಜಾತಿ ಲೆಕ್ಕಾಚಾರ, ಮೋದಿ-ದೇವೇಗೌಡ ನಾಮಬಲದಲ್ಲಿ ಯಾರಿಗೆ ವಿಜಯಲಕ್ಷ್ಮೀ ಒಲಿಯುವಳು ಎಂಬುದನ್ನು ಕಾದುನೋಡಬೇಕಿದೆ.

ಒಬಿಸಿ ಯಾರ ಕೈಹಿಡಿಯಲಿದೆ ?: ಈ ಬಾರಿ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರವಹಿಸಿಲಿರುವ ಒಬಿಸಿ ವರ್ಗಗಳ ಮತ ಯಾರ ಕೈ ಹಿಡಿಯಲಿದೆ ಎಂಬ ಚರ್ಚೆ ಹೆಚ್ಚು ಮಹತ್ವ ಪಡೆದಿದೆ. ಸಣ್ಣಪುಟ್ಟ 29 ಜಾತಿಗಳಲ್ಲದೆ ಅತಿಹೆಚ್ಚಿನ ಸಂಖ್ಯೆಯಲ್ಲಿರುವ ಕುರುಬರು, ಗೊಲ್ಲರು, ತಿಗಳರು ಈ ಬಾರಿ ಯಾರನ್ನು ಬೆಂಬಲಿಸಿದ್ದಾರೆ ಎಂಬುದನ್ನು ಫಲಿತಾಂಶ ನಿರ್ಧರಿಸಲಿದೆ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋತು 1 ವರ್ಷವಾದರೂ ಕುರುಬರ ಆಕ್ರೋಶ ಇನ್ನೂ ತಣ್ಣಗಾದಂತೆ ಕಾಣುತ್ತಿಲ್ಲ. ದೇವೇಗೌಡರಿಗೆ ಈ ಲೆಕ್ಕಾಚಾರ ತಲೆಕೆಡಿಸಿದೆ. ಅಲ್ಲದೆ, ಯಾದವ ಸಮುದಾಯ ಕೂಡ ಬಿಜೆಪಿ ಕೈಹಿಡಿದಿದೆ ಎನ್ನುವ ಮಾತುಗಳಿವೆ.

ತುಮಕೂರು ಗ್ರಾಮಾಂತರದಲ್ಲಿ ಸುರೇಶ್ ಗೌಡರ ಹೋರಾಟ: ತುಮಕೂರು ಗ್ರಾಮಾಂತರದಲ್ಲಿ ಅತಿಹೆಚ್ಚು ಶೇ.81.87 ಮತದಾನವಾಗಿದೆ. ಇಲ್ಲಿ ಮೊದಲಿನಿಂದಲೂ ಬಿಜೆಪಿ-ಜೆಡಿಎಸ್ ನಡುವೆ ಜಿದ್ದಾಜಿದ್ದಿ ಇದೆ. ಇಲ್ಲಿ ಕಾಂಗ್ರೆಸ್ ನೆಲೆಯೇ ಇಲ್ಲ. ಆ ಕಾರಣಕ್ಕಾಗಿ ಕ್ಷೇತ್ರದಲ್ಲಿ ಮೈತ್ರಿ ವರ್ಕ್​ಔಟ್ ಆಗಿಲ್ಲ. ಬದಲಿಗೆ ಮಾಜಿ ಶಾಸಕ ಬಿ.ಸುರೇಶ್​ಗೌಡರು ಅಸ್ತಿತ್ವ ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ಲೀಡ್ ಗಿಟ್ಟಿಸಿಕೊಳ್ಳಲು ಶತಾಯಗತಾಯ ಹೋರಾಡಿರುವುದು ಬಿಜೆಪಿಗೆ ಲಾಭ ತರುವ ನಿರೀಕ್ಷೆ ಇದೆ. ದೇವೇಗೌಡರ ಕಾರಣಕ್ಕೆ ಅತ್ಯಲ್ಪ ಮುನ್ನಡೆ ಬರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಹಳ್ಳಿಹಳ್ಳಿಗೂ ‘ಮೋದಿ’ ಕಾಲಿಟ್ಟಿದ್ದು, ಈ ಬಾರಿ ಲೋಕಸಮರದ ಫಲಿತಾಂಶದಲ್ಲಿ ಪ್ರಭಾವ ಬೀರಿರುವ ಸಾಧ್ಯತೆಗಳಿವೆ.

Leave a Reply

Your email address will not be published. Required fields are marked *