ಮೋದಿಯಂತೆ ದೇಶವೂ ಸುಂದರವಾಗಲಿ

ಕೋಲಾರ: ಬಡತನ ನಿವಾರಿಸಲು ಬದ್ಧತೆ ಹೊಂದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಲು ಪ್ರಬುದ್ಧ ನಾಗರಿಕರು ಸಹಕರಿಸಬೇಕೆಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್​ಜೀ ತಿಳಿಸಿದರು.

ನಗರದ ಸಾಯಿಧಾಮ್ ಹೋಟೆಲ್ ಸಭಾಂಗಣದಲ್ಲಿ ಬಿಜೆಪಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಬುದ್ಧರೊಂದಿಗೆ ವಿಚಾರಗೋಷ್ಠಿಯಲ್ಲಿ ಮಾತನಾಡಿ, ಮೋದಿ ಧರಿಸುವ ಉಡುಪು ಸುಂದರ, ರೂಪವೂ ಸುಂದರ, ವ್ಯಕ್ತಿತ್ವವೂ ಸುಂದರವಾಗಿರುವುದರಿಂದ ದೇಶವನ್ನು ಸುಂದರವಾಗಿಸಲು ಶ್ರಮಿಸುತ್ತಿದ್ದಾರೆ ಎಂದರು.

ವಿರೋಧ ಪಕ್ಷದವರಿಗೆ ಮೋದಿಯವರನ್ನು ಟೀಕಿಸಲು ಬೇರೆ ವಿಚಾರ ಇಲ್ಲದಿರುವುದರಿಂದ ಅವರ ಉಡುಪಿನ ಬಗ್ಗೆ ಅನಗತ್ಯ ಟೀಕೆ ಮಾಡುತ್ತಿದ್ದಾರೆ. ಮೋದಿ ಬದ್ಧತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಸಮರ್ಥಿಸಿಕೊಂಡರು.

ಮೋದಿಯಿಂದ ದೇಶದ ಎಲ್ಲ ಸಮಸ್ಯೆ ಬಗೆಹರಿದಿದೆ ಎಂದು ಹೇಳಲಾಗದು. ಆದರೆ ಬಡತನ ನಿವಾರಣೆ, ಸೋರಿಕೆ ತಡೆಗಟ್ಟುವಿಕೆ, ಬೆಲೆ ಏರಿಕೆ ನಿಯಂತ್ರಣ ಹಾಗೂ ಹದಗೆಟ್ಟಿದ್ದ ಆರ್ಥಿಕ ವ್ಯವಸ್ಥೆ ಸುಧಾರಿಸಲು ಕೆಲಸ ಮಾಡಿದ್ದಾರೆ ಎಂದು ಬಣ್ಣಿಸಿದರು.

ಮೋದಿ ಸರ್ಕಾರ ಮತ್ತೊಮ್ಮೆ ರಚನೆಯಾದರೆ ಲೋಕಪಾಲರ ನೇಮಕ, ಶ್ರೀರಾಮಮಂದಿರ ನಿರ್ವಣ, ದಲಿತರಿಗೆ ಸಿಗಬೇಕಾದ ಸ್ಥಾನಮಾನ ಹಾಗೂ ಭಯೋತ್ಪಾದನೆ ಸಂಪೂರ್ಣವಾಗಿ ಮಟ್ಟ ಹಾಕಲು ಸಾಧ್ಯವಾಗುತ್ತದೆ ಎಂದರು.

ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತರಾದ ಬಿ.ವಿ.ಗೋಪಿನಾಥ್, ಕೆ.ರಂಗನಾಥ್, ಡಾ. ವೆಂಕಟಾಚಲ, ನರೇಂದ್ರ ಪ್ರಭು, ನಿವೃತ್ತ ಅಧಿಕಾರಿ ಎಸ್.ವಿ.ಆರ್.ರೆಡ್ಡಿ, ವಕೀಲ ಹಾರೋಹಳ್ಳಿ ನಾರಾಯಣಸ್ವಾಮಿ ಪ್ರಶ್ನೆಗಳಿಗೆ ಉತ್ತರಿಸಿದ ಸಂತೋಷ್​ಜೀ, ಕಳೆದ 5 ವರ್ಷಗಳ ಸಾಧನೆಯಿಂದ ತೃಪ್ತಿಯಾಗಿದ್ದಲ್ಲಿ ಮುಂಬರುವ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಲಾ 100 ಮತ ಹಾಕಿಸಿ ಬಿಜೆಪಿಗೆ ಶಕ್ತಿ ನೀಡಿ, ಇಲ್ಲವೇ ಕನಿಷ್ಠ 100 ಮತದಾರರಿಗೆ ಕಡ್ಡಾಯವಾಗಿ ಮತ ಹಾಕುವಂತೆ ಅರಿವು ಮೂಡಿಸಿ ಎಂದರು.

ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಮಾತನಾಡಿ, ಮೋದಿ ಕೈ ಬಲಪಡಿಸುವ ಉದ್ದೇಶದಿಂದ ಬಿಜೆಪಿ ವಿವಿಧ ಸ್ಥರಗಳ ಜನರೊಂದಿಗೆ ಸಂವಾದ ನಡೆಸಿ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಮುಂದಾಗಿದೆ ಎಂದರು.

ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಡಿ.ಎಸ್. ವೀರಯ್ಯ, ಎಸ್​ಸಿ ಮೋರ್ಚಾ ರಾಷ್ಟ್ರೀಯ ಪರಿಷತ್ ಕಾರ್ಯದರ್ಶಿ ಚೀ.ನಾ.ರಾಮು, ಬಿಜೆಪಿ ಜಿಲ್ಲಾಧ್ಯಕ್ಷ ಬಿ,.ಪಿ. ವೆಂಕಟಮುನಿಯಪ್ಪ, ಕೋಲಾರ ಲೋಕಸಭೆ ಕ್ಷೇತ್ರ ಸಂಚಾಲಕ ಕೃಷ್ಣಾರೆಡ್ಡಿ, ರಾಜ್ಯ ವಕ್ತಾರ ಛಲವಾದಿ ನಾರಾಯಣಸ್ವಾಮಿ, ಜಿಪಂ ಮಾಜಿ ಸದಸ್ಯರಾದ ಎಸ್.ಬಿ. ಮುನಿವೆಂಕಟಪ್ಪ, ಬಾಲಾಜಿ ಚೆನ್ನಯ್ಯ, ಬಿಬಿಎಂಪಿ ಸದಸ್ಯ ಮುನಿಸ್ವಾಮಿ, ಡಾ. ನರೇಂದ್ರ ರಂಗಪ್ಪ, ಬಿಜೆಪಿ ಪ್ರಬುದ್ಧರ ಬಳಗದ ಸಂಚಾಲಕರಾದ ಶೈಲಜಾ, ಮೋಹನ್ ಮೂರ್ತಿ ಹಾಜರಿದ್ದರು.

ಲೋಕಪಾಲ್ ನೇಮಕಕ್ಕೆ ಸಿದ್ಧ: ಲೋಕಪಾಲ್ ನೇಮಕಕ್ಕೆ ಬಿಜೆಪಿ ಸಿದ್ಧವಿದೆ. ಸಂಸತ್ ಕಲಾಪದಲ್ಲಿ ಈ ವಿಚಾರವಾಗಿ ಒಮ್ಮತದ ತೀರ್ಮಾನ ಕೈಗೊಳ್ಳುವುದಕ್ಕೆ ಕಾಂಗ್ರೆಸ್ ಸಹಕರಿಸುತ್ತಿಲ್ಲ. ಇತ್ತೀಚೆಗೆ ಸಿಬಿಐಗೆ ನಿರ್ದೇಶಕರನ್ನು ನೇಮಿಸುವ ವಿಚಾರದಲ್ಲಿ 67 ಅಧಿಕಾರಿಗಳ ಹೆಸರು ಪ್ರಸ್ತಾಪಿಸಿದಾಗ ಕಾಂಗ್ರೆಸ್ ಸಹಮತ ತೋರಲಿಲ್ಲ. ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತನಿಖಾ ಸಂಸ್ಥೆ ಮತ್ತು ರಕ್ಷಣಾ ವ್ಯವಸ್ಥೆ ವಿಚಾರದಲ್ಲಿ ಸ್ಪಷ್ಟ ನಿಲುವು ಅನುಸರಿಲಿದೆ ಎಂದು ಸಂತೋಷ್​ಜೀ ತಿಳಿಸಿದರು.

ಎಸ್​ಐಟಿ ರಚನೆ ಅನುಮಾನ: ರಾಜ್ಯದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ವಿದ್ಯಮಾನಗಳ ಕುರಿತು ಬೇರೆಯವರಿಗೆ ತಪ್ಪಾಗಿ ಕಂಡು ಬಂದಿರಬಹುದು. ಆದರೆ ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ನಡೆದುಕೊಂಡ ರೀತಿ ಸರಿಯಿದೆ ಎಂದು ಸಂತೋಷ್ ಜೀ ಸಮರ್ಥಿಸಿಕೊಂಡರು. ಬಿಜೆಪಿ ಮೈತ್ರಿಕೂಟದ ಶಾಸಕರನ್ನು ಸೆಳೆಯಲು ವಾಮಮಾರ್ಗ ಅನುಸರಿಸಿದೆ ಎಂದು ವಿಡಿಯೋ ಬಹಿರಂಗ ಪಡಿಸಿದ ಸಂದರ್ಭದಲ್ಲಿ ಪ್ರಕರಣವನ್ನು ಎಸ್​ಐಟಿಗೆ ಒಪ್ಪಿಸಲು ಸರ್ಕಾರ ನಿರ್ಧರಿಸಿತು. ಸದನದಲ್ಲಿ ಸ್ಪೀಕರ್ 15 ದಿನದೊಳಗೆ ತನಿಖಾ ತಂಡ ರಚನೆ ಆಗಲಿದೆ ಎಂದು ಹೇಳಿದ್ದರೂ ಆದರೆ ಇನ್ನೂ ರಚನೆ ಆಗಿಲ್ಲ. ಆಗುವುದೂ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.