ಮೋಡ ಮುಚ್ಚಿದ ಬಾನು…

| ಬಿ.ಎನ್.ಧನಂಜಯಗೌಡ, ಮೈಸೂರು

ಮೋಡ ಮುಚ್ಚಿದ ಬಾನು, ರೆಕ್ಕೆ ತಿರುಗದ ಫ್ಯಾನು, ಸಿಂಗಲ್ ಆದಲ್ಲೋ ನೀನು ಪ್ರವೀಣ… ದಡ್ಡ ದಡ್ಡ..’

ಹೋದಲ್ಲಿ, ಬಂದಲ್ಲಿ, ನಿಂತಲ್ಲಿ, ಕುಂತಲ್ಲಿ ಕಿವಿಗೆ ಬೀಳುವ ಈ ಹಾಡನ್ನು ಎಷ್ಟು ಕೇಳಿಸಿಕೊಂಡರೂ ಸಾಲದು. ಮತ್ತೆ ಮತ್ತೆ ಕೇಳಬೇಕೆನಿಸುವ ಈ ಹಾಡಿಗೆ ದನಿಗೂಡಿಸುವ, ಇದನ್ನೇ ದಿನದುದ್ದಕ್ಕೂ ಗುನುಗುನಿಸುವ ಯುವಕ-ಯುವತಿಯರೇನೂ ಕಮ್ಮಿಯಿಲ್ಲ. ಈ ವಿಭಿನ್ನ ಸಾಹಿತ್ಯ, ಇದರ ಉತ್ತಮ ರಾಗ ಸಂಯೋಜನೆಗೆ ಮಕ್ಕಳೂ ತಲೆದೂಗಿದ್ದಾರೆ. ಅಂದ ಹಾಗೆ ಈ ಹಾಡನ್ನು ಬರೆದವರು ದೊಡ್ಡ ನಿರ್ದೇಶಕರೇನಲ್ಲ. ಈಗಷ್ಟೇ ಕಾಲೇಜು ಮುಗಿಸುತ್ತಿರುವ ತರುಣ ತ್ರಿಲೋಕ ತ್ರಿವಿಕ್ರಮ.

ಹೌದು, ಕಿರಿಕ್ ಪಾರ್ಟಿ ಖ್ಯಾತಿಯ ನಿರ್ದೇಶಕ ರಿಷಬ್ ಶೆಟ್ಟಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕಾಸರಗೋಡು’ ಚಿತ್ರ ನಿರ್ದೇಶನ ಮಾಡುತ್ತಿರುವುದು ಈಗಾಗಲೇ ಸಿನಿಮಾಸಕ್ತರಿಗೆ ತಿಳಿದಿರುವ ವಿಷಯ. ಈ ಸಿನಿಮಾದ ‘ಮೋಡ ಮುಚ್ಚಿದ ಬಾನು..’ ಈಗಾಗಲೇ ಎಲ್ಲೆಡೆ ಸದ್ದು ಮಾಡಿದೆ. ಇನ್ನೂ ಸದ್ದು ಮಾಡುತ್ತಿದೆ. ಈ ಹಾಡನ್ನು ಸೇರಿದಂತೆ ಇದೇ ಸಿನಿಮಾಕ್ಕೆ ನಾಲ್ಕು ಹಾಡುಗಳನ್ನು ಬರೆಯುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರತಿಭಾವಂತ ಯುವ ಚಿತ್ರಸಾಹಿತಿಯೊಬ್ಬ ಕಾಲಿಟ್ಟಂತಾಗಿದೆ.

‘ಕಿರಿಕ್ ಪಾರ್ಟಿ’ ತಂಡ ತಮ್ಮ ಸಿನಿಮಾದ ಎಲ್ಲ ವಿಭಾಗಗಳಲ್ಲಿ ಹೊಸಬರಿಗೆ ಅವಕಾಶ ಕೊಡುವ ಉದ್ದೇಶದಿಂದ ರಾಜ್ಯಾದ್ಯಾಂತ ಹುಡುಕಾಟ ನಡೆಸಿತ್ತು. ಈ ವೇಳೆ ಆ ತಂಡದ ಕಣ್ಣಿಗೆ ಬಿದ್ದು ಸಿನಿಸಾಹಿತ್ಯ ರಚನೆಗೆ ಆಯ್ಕೆಯಾದವರು ತ್ರಿಲೋಕ್.

ತುಮಕೂರು ಜಿಲ್ಲೆ ಚಿಕ್ಕನಾಯಕಹಳ್ಳಿಯಲ್ಲಿ ಹುಟ್ಟಿದ ತ್ರಿಲೋಕ್ ದ್ವಿತೀಯ ಪಿಯುಸಿವರೆಗಿನ ಶಿಕ್ಷಣವನ್ನು ತುಮಕೂರಿನ ಜವಾಹರ್ ಲಾಲ್ ನವೋದಯ ವಿದ್ಯಾಲಯದಲ್ಲಿ ಪೂರೈಸಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ಓದಿದ್ದರೂ ಆ ದಿನಗಳಿಲ್ಲಿಯೇ ಪತ್ರಕರ್ತನಾಗಬೇಕು ಎಂಬ ಹಂಬಲದಿಂದ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ (ಪತ್ರಿಕೋದ್ಯಮ) ಸೇರಿದರು.

ಆನಂತರ ಮಾನಸ ಗಂಗೋತ್ರಿಯಲ್ಲಿ ಇಲೆಕ್ಟ್ರಾನಿಕ್ ಮೀಡಿಯಾ ವಿಷಯದಲ್ಲಿ ಎಂಎಸ್ಸಿ ಮುಗಿಸಿದರು. ಕೊನೆ ಸೆಮಿಸ್ಟರ್ ವೇಳೆ, ಕಿರಿಕ್ ಪಾರ್ಟಿ ತಂಡಕ್ಕೆ ಆಯ್ಕೆಯಾದರು. ಆದರೆ, ಮೈಸೂರಿನಲ್ಲಿ ಓದುತ್ತಿದ್ದ ಕಾರಣ, ಕಿರಿಕ್ ಪಾರ್ಟಿ ಸಿನಿಮಾ ನಿರ್ವಣದ ಚಟುವಟಿಕೆಯಲ್ಲಿ ತ್ರಿಲೋಕ್ ತೊಡಗಿಕೊಳ್ಳಲು ಸಾಧ್ಯವಾಗಿರಲಿಲ್ಲ. ಓದು ಮುಗಿದ ನಂತರ ರಿಷಬ್ ಶೆಟ್ಟಿ ಅವರನ್ನು ಸಂರ್ಪಸಿದ ತ್ರಿಲೋಕ್ ಅವರಿಗೆ ‘ಸ.ಹಿ.ಪ್ರಾ. ಶಾಲೆ ಕಾಸರಗೋಡು’ ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿತು. ಆರಂಭದಲ್ಲಿಯೇ ಸಹ ನಿರ್ದೇಶಕನಾಗಿ ಕೆಲಸ ಮಾಡುವ ಛಾನ್ಸ್. ದಡ್ಡ ಹಾಡಿನ ಟ್ಯೂನ್ ಕೇಳುತ್ತಿದ್ದಾಗ ಒಂದಷ್ಟು ಸಾಲುಗಳು ಹೊಳೆದವು. ಕೂಡಲೇ ಬರೆದು ನಿರ್ದೇಶಕ ರಿಷಬ್​ಗೆ ತೋರಿಸಿದರು. ಅವರಿಗೂ ಆ ಸಾಲುಗಳು ಮೆಚ್ಚುಗೆಯಾದವು. ಬರೆಯುವುದನ್ನು ಮುಂದುವರೆಸುವಂತೆ ರಿಷಬ್ ಸೂಚಿಸಿದರು. ಕವಿತೆಗಳನ್ನು ಬರೆಯುತ್ತಿದ್ದ ತ್ರಿಲೋಕ್ ಅವರಿಗೆ ಮೀಟರ್​ಗೆ (ರಾಗಕ್ಕೆ ತಕ್ಕ ಸಾಹಿತ್ಯ) ಬರೆಯುವುದು ಪ್ರಾರಂಭದಲ್ಲಿ ಕಷ್ಟವೆನಿಸಿತು. ಇಂತಹ ಸಮಯದಲ್ಲಿ ಅವರಿಗೆ ನೆರವಾದವರು ಚಿತ್ರದ ಸಂಗೀತ ನಿರ್ದೇಶಕ ವಾಸುಕಿ ವೈಭವ್. ‘ದಡ್ಡ’, ಬಲೂನ್’, ‘ಅರೆರೇ ಅವಳ ನಗುವ’ ಮುಂತಾದ ಹಾಡುಗಳಿಗೆ ತ್ರಿಲೋಕ್ ಸಾಹಿತ್ಯ ಬರೆದರು. ಈಗಾಗಲೇ ಆಡಿಯೋ ರಿಲೀಸ್ ಆಗಿದ್ದು, ಯೂಟ್ಯೂಬ್​ನಲ್ಲಿ ಭಾರಿ ಸದ್ದು ಮಾಡುತ್ತಿವೆ.

ಪತ್ರಕರ್ತನಾಗುವ ಆಸೆ

ಬರಹವನ್ನು ಹೆಚ್ಚು ಇಷ್ಟಪಡುವ ತ್ರಿಲೋಕ್ ಅವರಿಗೆ ಪತ್ರಕರ್ತನಾಗುವ ಆಸೆ ಇದೆ. ಹಾಗಾಗಿ ಆಗಾಗ ಪತ್ರಿಕೆಗಳಿಗೆ ಕತೆ, ಕವನ, ಲೇಖನಗಳನ್ನು ಬರೆಯುತ್ತಾ ಹವ್ಯಾಸಿ ಪತ್ರಕರ್ತನಾಗಿ ಗುರುತಿಸಿ ಕೊಂಡಿದ್ದಾರೆ. ಇನ್ನು ಚಿತ್ರರಂಗದಲ್ಲಿ ನಿರ್ದೇಶಕ ನಾಗುವುದಕ್ಕಿಂತ ಸಾಹಿತ್ಯ, ಸಂಭಾಷಣೆಗಳನ್ನು ಬರೆಯುತ್ತಾ ಬರಹಗಾರನಾಗಿಯೇ ಗುರುತಿಸಿಕೊಳ್ಳುವ ಅಭಿಲಾಷೆ ಹೊಂದಿದ್ದಾರೆ.

Leave a Reply

Your email address will not be published. Required fields are marked *