ಮೋಡಿ ಮಾಡಿದ ಮುದ್ದು ಶ್ವಾನಗಳು

ಹುಬ್ಬಳ್ಳಿ: ಮುದ್ದು ಶ್ವಾನಗಳ ಆಟಾಟೋಪ ನೋಡಲು ಅಲ್ಲಿ ನೂರಾರು ಶ್ವಾನ ಪ್ರಿಯರು ಪಾಲ್ಗೊಂಡಿದ್ದರು. ನಾಯಿಗಳ ಜಂಪಿಂಗ್, ರನ್ನಿಂಗ್, ಶೇಕ್ ಹ್ಯಾಂಡ್ ಮಾಡುವ ಶೈಲಿ ಕಂಡು ಬೆರಗಾದರು.
ಇಲ್ಲಿನ ಇಂದಿರಾ ಗಾಜಿನ ಮನೆಯಲ್ಲಿ ಭಾನುವಾರ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ ಕಂಡು ಬಂದ ದೃಶ್ಯವಿದು. ಪ್ರಾಕ್ ಡಾಗ್ ಎಂಬ ಪಪ್ಪಿ ಆಟನೋಡಿ ಪ್ರೇಕ್ಷಕರು ಚಪ್ಪಾಳೆ, ಶಿಳ್ಳೆ ಹೊಡೆದರು. ಮಾಲೀಕ ಹೇಳಿದಂತೆ ಜಂಪ್ ಮಾಡುವುದು, ಶೇಕ್ ಹ್ಯಾಂಡ್ ಕೊಡುವುದು ಮಜಬೂತಾಗಿತ್ತು. ವೈಯಾರಿಯಂತೆ ಬಳಕುತ್ತ ಹೆಜ್ಜೆ ಹಾಕಿದ ಶ್ವಾನಗಳನ್ನು ಕಂಡು ಪ್ರೇಕ್ಷಕರು ಭೇಷ್ ಎಂದರು.
ಪ್ರದರ್ಶನದಲ್ಲಿ ಜರ್ಮನ್ ಶೆಫರ್ಡ್, ಡಾಬರ್​ವುನ್, ಲ್ಯಾಬ್ರೊಡಾರ್, ಪಿಟ್​ಬುಲ್, ಅಮೆರಿಕನ್ ಬುಲ್ಲಿ, ಹಸ್ಕಿ, ರಾಟ್​ವೀಲರ್, ಸೇಂಟ್ ಬರ್ನಾರ್ಡ್, ಪಗ್, ಆಸ್ಟ್ರೇಲಿಯಾದ ಚಾಚುವಾ, ಚಿಹುವಾ ಚೌಚೌ ಸೇರಿದಂತೆ 30ಕ್ಕೂ ಹೆಚ್ಚು ವಿಧದ ತಳಿಯ ನಾಯಿಗಳು ಪಾಲ್ಗೊಂಡಿದ್ದವು. ಹುಬ್ಬಳ್ಳಿ, ದಾವಣಗೆರೆ, ಹಾವೇರಿ, ರಾಣೆಬೆನ್ನೂರು, ಗದಗ, ಖಾನಾಪುರ, ಬೈಲಹೊಂಗಲ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯವರು ನಾಯಿಯನ್ನು ತಂದಿದ್ದರು. ಪುಟಾಣಿ ಮಕ್ಕಳು ಮುದ್ದು ಶ್ವಾನದೊಂದಿಗೆ ಹೆಜ್ಜೆ ಹಾಕಿ ಸೆಲ್ಪೀ ಕಿಕ್ಕಿಸಿಕೊಂಡರು.
ಪ್ರಥಮ ಸ್ಥಾನ ಪಡೆದ ಶ್ವಾನಕ್ಕೆ 10 ಸಾವಿರ ರೂ. ಬಹುಮಾನ, ಫಲಕ ನೀಡಲಾಯಿತು. ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಎಲ್ಲ ಶ್ವಾನಗಳಿಗೂ ಮೆಡಲ್ ನೀಡಲಾಯಿತು ಎಂದು ಆಯೋಜಕಿ ಶ್ರೇಯಾ ರೋಷನ್ ಹಿರೇಕೆರೂರು ತಿಳಿಸಿದರು.