ಮೊಯ್ಲಿ ಬೆಂಬಲಕ್ಕೆ ದಳಪತಿಗಳ ಷರತ್ತು!

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿಗೆ ಬೆಂಬಲ ನೀಡಲು ಜೆಡಿಎಸ್ ಸ್ಥಳೀಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದು, ಜಿಲ್ಲೆಯಲ್ಲಿ ಮೈತ್ರಿ ಧರ್ಮಪಾಲನೆ ಸಂಬಂಧ ಮಿತ್ರ ಪಕ್ಷಕ್ಕೆ ಹಲವು ಷರತ್ತುಗಳನ್ನು ಹಾಕಿದ್ದಾರೆ.

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಜಿಲ್ಲಾ ಯುವ ಘಟಕದಿಂದ ಭಾನುವಾರ ಕಾರ್ಯಕರ್ತರ ಸಭೆ ಕೈಗೊಳ್ಳಲಾಗಿತ್ತು. ಇದರಲ್ಲಿ ಬಹುತೇಕರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಲವು ಷರತ್ತುಗಳಿಗೆ ಕಾಂಗ್ರೆಸ್ ಸಮ್ಮತಿಸಿದ ಬಳಿಕ ಬೆಂಬಲ ನೀಡುವ ಕುರಿತು ತೀರ್ಮಾನ ಕೈಗೊಂಡರು.

ಶಾಸಕ ಡಾ.ಕೆ.ಸುಧಾಕರ್ ನಿರಂತರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಸ್ಥಳೀಯ ಮುಖಂಡರನ್ನು ಟೀಕಿಸುತ್ತಿದ್ದಾರೆ. ಈ ಭಾಗದಲ್ಲಿ ಜೆಡಿಎಸ್ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಕಾಂಗ್ರೆಸ್​ನೊಂದಿಗೆ ವೇದಿಕೆ ಹಂಚಿಕೊಳ್ಳಬಾರದೆಂಬ ಮಾತು ಕೇಳಿಬಂತು.

ಸಮಸ್ಯೆ ಬಗೆಹರಿಸಿ, ಬೆಂಬಲ ಕೇಳಿ: ಪಕ್ಷದ ವರಿಷ್ಠರ ಜತೆ ರ್ಚಚಿಸಿದರೆ ಸಾಲದು. ಕಾಂಗ್ರೆಸ್ ಅಭ್ಯರ್ಥಿ ಸ್ಥಳೀಯ ಮುಖಂಡರೊಂದಿಗೂ ಮಾತುಕತೆ ನಡೆಸಬೇಕು. ಮೊದಲು ನಮ್ಮ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ಯುವ ಘಟಕ ಜಿಲ್ಲಾಧ್ಯಕ್ಷ ರಾಜಶೇಖರ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸ್ವತಃ ಅಭ್ಯರ್ಥಿ ವೀರಪ್ಪ ಮೊಯ್ಲಿಯೇ ಇದುವರೆಗೂ ಜೆಡಿಎಸ್​ನ ಸ್ಥಳೀಯ ಮುಖಂಡರೊಂದಿಗೆ ಮಾತುಕತೆ ನಡೆಸಿಲ್ಲ. ನಾವಷ್ಟಕ್ಕೆ ನಾವು ಬೆಂಬಲ ಕೊಡುವುದು ಹೇಗೆ? ಎಂದು ಪ್ರಶ್ನಿಸಿದರು.

ಯುವ ಮುಖಂಡ ಅಂಗರೇಖನಹಳ್ಳಿ ರವಿಕುಮಾರ್ ಮಾತನಾಡಿ, ಶಾಸಕ ಸುಧಾಕರ್ ಮೊಯ್ಲಿ ಅವರನ್ನು ಸೋಲಿಸಲು ಪಣತೊಟ್ಟಿದ್ದು, ಜೆಡಿಎಸ್ ಮೇಲೆ ಗೂಬೆ ಕೂರಿಸಲು ಹುನ್ನಾರ ನಡೆಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಮೊದಲು ನಮ್ಮ ಷರತ್ತುಗಳನ್ನು ಒಪ್ಪಬೇಕೆಂದು ಒತ್ತಾಯಿಸಿದರು. ಮುಖಂಡರಾದ ಕಾಕಲಚಿಂತೆ ರಾಜಣ್ಣ, ಆರ್.ಮಟಮಪ್ಪ ಮತ್ತಿತರರಿದ್ದರು.