ಮೊಮ್ಮಕ್ಕಳಂತೆ ಮಧು ಗೆಲ್ಲಿಸುತ್ತೇವೆ

ಶಿವಮೊಗ್ಗ: ಹಾಸನ, ಮಂಡ್ಯದಲ್ಲಿ ಮೊಮ್ಮಕ್ಕಳ್ಳನ್ನು ಹೇಗೆ ಗೆಲ್ಲಿಸಲು ಪ್ರಯತ್ನ ಮಾಡುತ್ತೇವೆಯೋ ಅದೇ ರೀತಿ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಲು ಪ್ರಯತ್ನಿಸುತ್ತೇವೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ತಿಳಿಸಿದರು.

ನಗರದ ಹೆಲಿಪ್ಯಾಡ್​ನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಕಣಕ್ಕಿಳಿಯುತ್ತಿದ್ದು, ಅವರ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇವೆ. ಕಾಂಗ್ರೆಸ್​ನ ಡಿ.ಕೆ. ಶಿವಕುಮಾರ್ ಸೇರಿ ಎಲ್ಲ ನಾಯಕರು ಬಂದು ಮಧು ಪರ ಪ್ರಚಾರ ಮಾಡಲಿದ್ದಾರೆ ಎಂದರು.

ಉತ್ತರ ಕನ್ನಡ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಯಾವುದೇ ಗೊಂದಲಗಳಿಲ್ಲ. ಇಂದು ಬೆಳಗ್ಗೆ ದೇಶಪಾಂಡೆ ಅವರು ಬಂದು ನನ್ನ ಬಳಿ ಮಾತನಾಡಿದ್ದಾರೆ. ಆದರೆ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಡಿಸಿದರು. ಆದರೆ ಗೌರು ತಮ್ಮ ಸ್ಪರ್ಧೆ ಯಾವ ಕ್ಷೇತ್ರದಿಂದ ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಡಲಿಲ್ಲ.