Tuesday, 20th November 2018  

Vijayavani

ಕಬ್ಬು ಬೆಳಗಾರರ ಜತೆ ಸಿಎಂ ಸಭೆ - ವಿಧಾನಸೌಧಕ್ಕೆ ಆಗಮಿಸಿದ ರೈತ ಮುಖಂಡರು - ಕಬ್ಬಿನ ಬಾಕಿ ಹಣ ಕೊಡಿಸ್ತಾರಾ ಎಚ್‌ಡಿಕೆ?        ಉ-ಕ ರೈತರ ಹೋರಾಟಕ್ಕೆ ಜಾತಿ ಲೇಪನ - ನಾಲಾಯಕ್ ಅನ್ನೋದು ಕೆಟ್ಟ ಪದ ಅಲ್ಲ - ಸಿಎಂ ವಿರುದ್ಧ ಮತ್ತೆ ಗುಡುಗಿದ ಯಡಿಯೂರಪ್ಪ        ಸಿಂಪಲ್ ಮ್ಯಾರೇಜ್ ಆಗೋರಿಗೆ ಶಾಕ್‌- ಮುಜರಾಯಿ ದೇವಸ್ಥಾನದಲ್ಲಿ ಮದುವೆಗೆ ಬ್ರೇಕ್‌ - ಅರ್ಚಕರ ಮನವಿಗೆ ಇಲಾಖೆ ನಿರ್ಧಾರ        ದಿಗ್ಗಜರಿಂದಲೇ ಬಿಬಿಎಂಪಿಗೆ ಬಾಕಿ - ಜಾರ್ಜ್‌, ಹ್ಯಾರೀಸ್‌, ಕುಪೇಂದ್ರರೆಡ್ಡಿ ಕಟ್ಟಿಲ್ಲ ಟ್ಯಾಕ್ಸ್‌ - ಪಾಲಿಕೆ ದಿವಾಳಿಗೆ ಕಾರಣರಾದ್ರಾ ನಾಯಕರು        ಛತ್ತಿಸ್‌ಗಡದಲ್ಲಿ ಎರಡನೇ ಹಂತದ ಮತದಾನ -72 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟಿಂಗ್‌ - ಮಧ್ಯ ಪ್ರದೇಶದಲ್ಲಿ ಪ್ರಧಾನಿ ರ‍್ಯಾಲಿ        ಬೆಂಗಳೂರಿಗೆ ಬಂದಿಳಿದ ನವಜೋಡಿ - ಮುಂಬೈನಿಂದ ಸಿಲಿಕಾನ್‌ ಸಿಟಿಗೆ ರಣವೀರ್‌, ದೀಪಿಕಾ - ನಾಳೆ ಲೀಲಾ ಪ್ಯಾಲೇಸ್‌ನಲ್ಲಿ ರಿಸೆಪ್ಷನ್       
Breaking News

ಮೊಬೈಲ್ ಫೋನ್ ಪರದೆ ಸುತ್ತಲಿನ ಪರದಾಟ

Wednesday, 17.10.2018, 3:00 AM       No Comments

| ಟಿ. ಜಿ. ಶ್ರೀನಿಧಿ 

ಮೊಬೈಲ್ ಫೋನ್​ಗಳು ಮಾರುಕಟ್ಟೆಗೆ ಬಂದ ಹೊಸತರಲ್ಲಿ ಅವುಗಳ ಪರದೆ ಬಹಳ ಚಿಕ್ಕದಾಗಿರುತ್ತಿತ್ತು. ಅನೇಕ ಮೊಬೈಲ್​ಗಳ ಪರದೆ ಅವುಗಳಲ್ಲಿದ್ದ ಕೀಲಿಮಣೆಗಿಂತ ಚಿಕ್ಕದಾಗಿರುತ್ತಿದ್ದದ್ದೂ ಉಂಟು.

ಮೊಬೈಲ್ ಫೋನಿನ ಸವಲತ್ತುಗಳು ಹೆಚ್ಚಿದಂತೆ ಅವುಗಳ ಪರದೆಯ ಗಾತ್ರವೂ ಹೆಚ್ಚುತ್ತ ಬಂತು. ಸ್ಪರ್ಶಸಂವೇದಿ ಪರದೆಗಳು(ಟಚ್​ಸ್ಕ್ರೀನ್) ಬಳಕೆಗೆ ಬಂದಮೇಲಂತೂ ಇದು ಇನ್ನಷ್ಟು ಜಾಸ್ತಿಯಾಯಿತು. ಸ್ಮಾರ್ಟ್​ಫೋನ್​ಗಳು ಜನಪ್ರಿಯವಾದಂತೆ ಮೊಬೈಲಿನ ಬಹುಭಾಗವನ್ನು ಪರದೆಗಳೇ ಆವರಿಸಿರುವುದು ಕೂಡ ಸಾಮಾನ್ಯವಾಯಿತು. ಯಾವುದೇ ಸ್ಮಾರ್ಟ್​ಫೋನ್ ನೋಡಿದರೂ ಅದರ ಪರದೆಯ ಸುತ್ತ ಚೌಕಟ್ಟಿನಂತಹ ಅಂಚುಗಳಿರುವುದನ್ನು ನಾವು ನೋಡಬಹುದು. ತಾಂತ್ರಿಕ ಪರಿಭಾಷೆಯಲ್ಲಿ ‘ಬೆಜೆಲ್’ ಎಂದು ಕರೆಯುವುದು ಈ ಚೌಕಟ್ಟನ್ನೇ. ಆರಂಭದಲ್ಲಿ ಬಂದ ಫೋನ್​ಗಳಲ್ಲಿ ಈ ಚೌಕಟ್ಟು ಸಾಕಷ್ಟು ದೊಡ್ಡದಾಗಿಯೇ ಇರುತ್ತಿತ್ತು. ಆಪ್​ಗಳ ಬಳಕೆ ಹಾಗೂ ಪರದೆ ಮೇಲೆ ಅವು ತೋರಿಸುವ ಮಾಹಿತಿಯ ಪ್ರಮಾಣಗಳೆರಡೂ ಜಾಸ್ತಿಯಾದಂತೆ ಈ ಚೌಕಟ್ಟಿಗಾಗಿ ಜಾಗವನ್ನೇಕೆ ವ್ಯರ್ಥಮಾಡಬೇಕು ಎನ್ನುವ ಪ್ರಶ್ನೆ ಕೇಳಿಬಂತು. ಚೌಕಟ್ಟನ್ನು ಸಾಧ್ಯವಾದಷ್ಟೂ ತೆಳ್ಳಗಾಗಿಸಿ ಪರದೆಯ ಗಾತ್ರವನ್ನು ಸಾಧ್ಯವಿದ್ದಷ್ಟೂ ಹೆಚ್ಚಿಸುವ ಪ್ರಯತ್ನಕ್ಕೆ ಕಾರಣವಾದದ್ದು ಇದೇ ಪ್ರಶ್ನೆ.

ಈ ಪ್ರಯತ್ನದ ಪರಿಣಾಮವಾಗಿ ಇಂದಿನ ಬಹುತೇಕ ಮೊಬೈಲ್​ಗಳಲ್ಲಿ ಬೆಜೆಲ್​ನ ಗಾತ್ರ ಗಮನಾರ್ಹವಾಗಿ ಕಡಿಮೆಯಾಗಿದೆ. ಕಂಡೂ ಕಾಣದಷ್ಟು ತೆಳ್ಳಗಿನ ಬೆಜೆಲ್ ಇರುವ ಫೋನ್​ಗಳನ್ನು ‘ಬೆಜೆಲ್-ಲೆಸ್’ ಫೋನ್​ಗಳೆಂದು ಗುರುತಿಸುವ ಅಭ್ಯಾಸ ಕೂಡ ಬಂದಿದೆ.

ಇಂತಹ ಫೋನ್​ಗಳಲ್ಲಿ ಎಡ-ಬಲದ ಅಂಚುಗಳಿಗಿಂತ ಮೇಲಿನ ಹಾಗೂ ಕೆಳಗಿನ ಅಂಚುಗಳು ಕೊಂಚ ಹೆಚ್ಚೇ ಇರುವುದನ್ನು ನಾವು ನೋಡಬಹುದು. ಮೊಬೈಲ್ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ಹಲವಾರು ಭಾಗಗಳನ್ನು ಈ ಜಾಗದಲ್ಲಿ ಅಡಕಗೊಳಿಸಬೇಕಾದ ಅನಿವಾರ್ಯತೆಯೇ ಈ ವಿಚಿತ್ರ ವಿನ್ಯಾಸಕ್ಕೆ ಕಾರಣವಾಗಿದೆ.

ಮೊಬೈಲ್ ಪರದೆ ಮೇಲುತುದಿಯ ವಿಷಯಕ್ಕೆ ಬಂದರೆ ಅಷ್ಟು ಜಾಗದೊಳಗೆ ಸೆಲ್ಪಿ ಕ್ಯಾಮೆರಾ, ಸ್ಪೀಕರ್(ಇಯರ್-ಪೀಸ್), ಪ್ರಾಕ್ಸಿಮಿಟಿ ಸೆನ್ಸರ್ ಮುಂತಾದ ಹಲವು ಭಾಗಗಳು ಅಡಕವಾಗಿರುತ್ತವೆ. ಅದರ ಕೆಳಗೆ, ಪರದೆಯ ಆರಂಭದಲ್ಲಿ, ಮೊಬೈಲ್ ಜಾಲ, ಬ್ಯಾಟರಿ, ಅಂತರ್ಜಾಲ, ಸಮಯ ಮುಂತಾದ ವಿವರಗಳನ್ನು ಪ್ರದರ್ಶಿಸಲು ಒಂದು ತೆಳ್ಳಗಿನ ಪಟ್ಟಿಯಷ್ಟು ಜಾಗ ಬಳಕೆಯಾಗುತ್ತದೆ. ಒಟ್ಟು ಪರಿಣಾಮ, ಮೊಬೈಲ್ ಮೇಲ್ಮೈಯ ಸಾಕಷ್ಟು ಜಾಗ ಆಪ್​ಗಳ ಬಳಕೆಗೆ ಸಿಗುವುದಿಲ್ಲ!

ಮೊಬೈಲ್ ಸಂಪರ್ಕದ ವಿವರಗಳು ಪ್ರದರ್ಶಿತವಾಗುವುದು ಪರದೆಯ ಎಡ ಹಾಗೂ ಬಲತುದಿಗಳಲ್ಲಿ ಮಾತ್ರವೇ. ಅವೆರಡೂ ತುದಿಗಳ ನಡುವೆ ಕೊಂಚ ಭಾಗ ಹೇಗೂ ಉಪಯೋಗವಾಗುವುದಿಲ್ಲ. ಆ ಭಾಗದ ಪರದೆಯನ್ನು ಕತ್ತರಿಸಿಹಾಕಿ ಅಲ್ಲಿ ಸೆಲ್ಪಿ ಕ್ಯಾಮೆರಾವನ್ನೂ ಸ್ಪೀಕರ್-ಪ್ರಾಕ್ಸಿಮಿಟಿ ಸೆನ್ಸರ್​ಗಳನ್ನೂ ಕೂರಿಸಿದರೆ ಹೇಗೆ?

ಈಚೆಗೆ ಮಾರುಕಟ್ಟೆಗೆ ಬಂದಿರುವ ಹಲವು ಮಾದರಿಯ ಸ್ಮಾರ್ಟ್​ಫೋನ್​ಗಳಲ್ಲಿ ಕಾಣಸಿಗುವ ಪರದೆಯ ವಿನ್ಯಾಸಕ್ಕೆ ಸ್ಪೂರ್ತಿಯಾಗಿರುವುದು ಇದೇ ಪ್ರಶ್ನೆ. ಪರದೆಯ ಮೇಲ್ತುದಿಯ ನಡುವೆ ಒಂದಷ್ಟು ಭಾಗವನ್ನು ಕತ್ತರಿಸಿರುವ ಈ ವಿನ್ಯಾಸವನ್ನು ‘ನಾಚ್’ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಹಾಗೆಂದರೆ ‘ಅಂಚಿನಲ್ಲಿ ಮಾಡಿದ ಕಚ್ಚು’ ಎಂದು ಅರ್ಥ.

ಈ ವಿನ್ಯಾಸ ಮೊದಲಿಗೆ ಗಮನಸೆಳೆದದ್ದು ‘ಐಫೋನ್ ಎಕ್ಸ್’ನಲ್ಲಿ. ಆನಂತರ ಹಲವಾರು ಮೊಬೈಲ್ ನಿರ್ವತೃಗಳು ಈ ವಿನ್ಯಾಸವನ್ನು ತಮ್ಮ ಉತ್ಪನ್ನಗಳಲ್ಲಿ ಬಳಸಿದ್ದಾರೆ. ಮೇಲೆ ಹೇಳಿದಂತಹ ಅಗಲವಾದ ನಾಚ್ ಮಾತ್ರವೇ ಅಲ್ಲದೆ ಪರದೆಯ ಮೇಲ್ತುದಿಯ ನಡುವೆ ಸಣ್ಣದಾದ ಒಂದು ಕಚ್ಚನ್ನಷ್ಟೇ ಮಾಡುವ, ಗಾಜಿನ ಮೇಲಿನ ಮಳೆಹನಿಯಂತೆ ಕಾಣುವ ‘ರೈನ್​ಡ್ರಾಪ್ ನಾಚ್’ ಎಂಬ ಇನ್ನೊಂದು ವಿನ್ಯಾಸವೂ ಇದೀಗ ಪ್ರಚಲಿತಕ್ಕೆ ಬರುತ್ತಿದೆ.

ಮೊಬೈಲ್ ಪರದೆಯ ಮೇಲೆ ಸ್ಥಳಾವಕಾಶ ವ್ಯರ್ಥವಾಗುವುದನ್ನು ತಡೆಯುವುದು ನಾಚ್ ವಿನ್ಯಾಸದ ಮೂಲ ಉದ್ದೇಶ. ಆದರೆ ಈ ಮೂಲಕ ಮೊಬೈಲ್ ಮೇಲ್ಮೈಯನ್ನು ಪೂರ್ತಿಯಾಗಿ ಆವರಿಸಿರುವ ಪರದೆಯನ್ನು ರೂಪಿಸುವುದು ಸಾಧ್ಯವಾಗುವುದಿಲ್ಲ. ಹೀಗೆ ಪರದೆಯಲ್ಲೊಂದು ಕಚ್ಚುಮಾಡಿ ಅಗತ್ಯ ಭಾಗಗಳನ್ನೆಲ್ಲ ಅಲ್ಲಿ ಅಡಕಗೊಳಿಸುವ ಬದಲು, ಆ ಭಾಗಗಳನ್ನೆಲ್ಲ ಹೇಗಾದರೂ ಮಾಡಿ ಪರದೆಯ ಹಿಂದಕ್ಕೆ ಕಳಿಸಿಬಿಟ್ಟರೆ?

ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನಗಳೂ ನಡೆದಿವೆ. ಸ್ಪೀಕರ್, ಫಿಂಗರ್​ಪ್ರಿಂಟ್ ಸೆನ್ಸರ್ ಇತ್ಯಾದಿಗಳನ್ನೆಲ್ಲ ಪ್ರತ್ಯೇಕವಾಗಿ ಇರಿಸುವ ಬದಲು ಅವನ್ನೆಲ್ಲ ಪರದೆಯ ಭಾಗಗಳಾಗಿಯೇ ರೂಪಿಸುವ ಪ್ರಯತ್ನ ಈಗಾಗಲೇ ಕಾರ್ಯರೂಪಕ್ಕೂ ಬಂದಿದೆ. ಇದೇ ರೀತಿ ಕೆಲವು ನಿರ್ವತೃಗಳು ಬಳಸುವಾಗ ಮಾತ್ರ ಹೊರಬರುವ ಸೆಲ್ಪಿ ಕ್ಯಾಮೆರಾ ವಿನ್ಯಾಸವನ್ನೂ ರೂಪಿಸಿದ್ದಾರೆ.

ಈ ಪ್ರಯತ್ನಗಳೆಲ್ಲ ಬಳಕೆದಾರರ ಮೆಚ್ಚುಗೆ ಪಡೆದುಕೊಂಡರೆ ಬೆಜೆಲ್ ಎಂಬ ಪರಿಕಲ್ಪನೆಯೇ ಸಂಪೂರ್ಣ ಮಾಯವಾಗಬಹುದು, ಮೇಲ್ಮೈ ಪೂರ್ತಿ ವಿಸ್ತೀರ್ಣವನ್ನು ಪರದೆಯೇ ಆವರಿಸಿಕೊಂಡಿರುವಂತಹ ಮೊಬೈಲ್​ಗಳು ಸಾಮಾನ್ಯವಾಗಬಹುದು ಎನ್ನುವುದು ಸದ್ಯದ ನಿರೀಕ್ಷೆ.

Leave a Reply

Your email address will not be published. Required fields are marked *

Back To Top