ಹುಬ್ಬಳ್ಳಿ: ಮೊಬೈಲ್ಫೋನ್ ಆನ್ಲೈನ್ ವ್ಯಾಪಾರ ಸ್ಥಗಿತ, ರಿಯಾಯಿತಿ ನಿಷೇಧ ಸೇರಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಭಾರತೀಯ ಮೊಬೈಲ್ ವ್ಯಾಪಾರಸ್ಥರ ಒಕ್ಕೂಟ (ಎಐಎಂಆರ್ಎ) ಹಾಗೂ ಇತರೆ ಸಂಘಟನೆಗಳ ಪದಾಧಿಕಾರಿಗಳು ನಗರದಲ್ಲಿ ಬುಧವಾರ ಪ್ರತಿಭಟನೆ ಮೆರವಣಿಗೆ ನಡೆಸಿದರು.
ನಗರದ ಹರ್ಷ ಕಾಂಪ್ಲೆಕ್ಸ್ನಿಂದ ಹೊರಟ ಮೆರವಣಿಗೆ, ಮಿನಿ ವಿಧಾನಸೌಧಕ್ಕೆ ಆಗಮಿಸಿತು. ನಂತರ ಆನ್ಲೈನ್ ವ್ಯಾಪಾರದಿಂದ ಆಗುತ್ತಿರುವ ನಷ್ಟದ ಕುರಿತು ತಹಸೀಲ್ದಾರ್ ಮುಂದೆ ವಿವರಿಸಿ ಮನವಿ ಸಲ್ಲಿಸಿದರು. ಭಾರತದಲ್ಲಿ ನಡೆಯುತ್ತಿರುವ ಮೊಬೈಲ್ಫೋನ್ ವ್ಯಾಪಾರದ ಲಾಭ ವಿದೇಶಿಗರಿಗೆ ಸಿಗುತ್ತಿದೆ. ಆನ್ಲೈನ್ ಮೊಬೈಲ್ ಮಾರಾಟದಿಂದ ನಮಗೆ ಭಾರಿ ನಷ್ಟವಾಗುತ್ತಿದೆ. ಕೂಡಲೆ ಇಂಥ ಅನೈತಿಕ ವ್ಯವಹಾರ ತಡೆಯಬೇಕು. ಭಾರತೀಯರಾದ ನಮಗೆ ಇದರ ಲಾಭ ದಕ್ಕಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು. ಒಕ್ಕೂಟದ ಅಧ್ಯಕ್ಷ ಸಂತೋಷ ಮುರಗಿಪಾಟೀಲ, ಪದಾಧಿಕಾರಿಗಳಾದ ನಾಗರಾಜ ರಟಗಲ್, ಶ್ರೀನಿವಾಸ ರತನ, ಜಮೀನ ಮುದ್ದಿನ, ಇಮ್ರಾನ್ ಸವಣೂರ, ಆಶೀಫ್ ಚವ್ಹಾಣ, ಹಿತೇಶ ಜೈನ್, ನಿಖಿಲ ಜೈನ್, ಸಿದ್ಧಾರ್ಥ ಹತ್ತಿಕಾಳ, ಪ್ರಸನ್ನ ದೀಕ್ಷಿತ, ಅಮರ ಪಿಕಾರೆ ಇತರರು ಭಾಗವಹಿಸಿದ್ದರು.
45 ಲಕ್ಷ ರೂ. ನಷ್ಟ: ಹರ್ಷ ಕಾಂಪ್ಲೆಕ್ಸ್ನಲ್ಲಿ ಬಹುತೇಕ ಮೊಬೈಲ್ಫೋನ್ ಮಾರಾಟ ಮಳಿಗೆಗಳು ಮುಚ್ಚಿದ್ದು, ಕೆಲವರು ಮಾತ್ರ ವ್ಯಾಪಾರದಲ್ಲಿ ತೊಡಗಿದ್ದರು. ಒಂದು ದಿನ ಸಂಪೂರ್ಣ ಬಂದ್ ಆಚರಿಸಿದ್ದರಿಂದ 45 ಲಕ್ಷ ರೂ.ಗೂ ಹೆಚ್ಚಿನ ವಹಿವಾಟು ನಡೆಯಲಿಲ್ಲ ಎಂದು ಮೊಬೈಲ್ಫೋನ್ ವ್ಯಾಪಾರಿಗಳು ತಿಳಿಸಿದ್ದಾರೆ.