ಹುಬ್ಬಳ್ಳಿ: ರಾಜ್ಯದಲ್ಲಿ ಮೊದಲ ಯಶಸ್ವಿ ಪ್ಲಾಸ್ಮಾ ಥೆರಪಿಗೆ ಒಳಗಾಗಿ ಗುಣವಾದ 65 ವರ್ಷದ ವೃದ್ಧ (ಪಿ-2710)ನನ್ನು ಇಲ್ಲಿನ ಕಿಮ್ಸ್ನಿಂದ ಬುಧವಾರ ಬಿಡುಗಡೆಗೊಳಿಸಿ ಮನೆಗೆ ಕಳುಹಿಸಿಕೊಡಲಾಯಿತು.
ತೀವ್ರ ಉಸಿರಾಟದ ಸಮಸ್ಯೆ, ನ್ಯೂಮೋನಿಯಾ ಸೇರಿ ಹಲವು ಕಾಯಿಲೆಗಳು ಇದ್ದವು. ಮುಂಬೈನಿಂದ ಬಂದು ಇಲ್ಲಿನ ಕಿಮ್ಸ್ಗೆ ದಾಖಲಾಗಿದ್ದ ವ್ಯಕ್ತಿಗೆ ಕರೊನಾ ಪಾಸಿಟಿವ್ ಇರುವುದು ಗೊತ್ತಾಗಿತ್ತು. ಈತನಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ವೈದ್ಯರ ತಂಡ ನಿರ್ಧರಿಸಿತ್ತು. ಹುಬ್ಬಳ್ಳಿ ಕರಾಡಿ ಓಣಿಯ ಸೋಂಕು ಮುಕ್ತ ವ್ಯಕ್ತಿ ಕೊಟ್ಟ ಪ್ಲಾಸ್ಮಾವನ್ನು ವೃದ್ಧನಿಗೆ ನೀಡಲಾಗಿತ್ತು. ಕಿಮ್್ಸ ಮೆಡಿಸಿನ್ ವಿಭಾಗದ ಡಾ. ರಾಮ ಕೌಲಗುಡ್ಡ, ಡಾ. ಸಚಿನ್ ಹೊಸಕಟ್ಟಿ, ಪೆಥಾಲಜಿ ವಿಭಾಗದ ಡಾ. ಪುರುಷೋತ್ತಮ ರೆಡ್ಡಿ, ಡಾ. ಕವಿತಾ ಏವೂರು, ಎಸ್ಡಿಎಂ ಆಸ್ಪತ್ರೆಯ ಡಾ. ಜೀವಪ್ರಿಯಾ, ಡಾ. ಗಿರೀಶ ಕಾಮತ್, ನವನಗರ ಕ್ಯಾನ್ಸರ್ ಆಸ್ಪತ್ರೆಯ ಡಾ. ಉಮೇಶ ಹಳ್ಳಿಕೇರಿ ನೇತೃತ್ವದ ತಂಡ ಮೇ 29 ಮತ್ತು 30ರಂದು ಪ್ಲಾಸ್ಮಾ ಥೆರಪಿ ಚಿಕಿತ್ಸೆ ನಡೆಸಿತ್ತು. ಅಂದಿನಿಂದ ಇಂದಿನವರೆಗೆ ನಿಗಾ ಇರಿಸಲಾಗಿತ್ತು. ಸೋಂಕು ಮುಕ್ತನಾಗಿ ಬುಧವಾರ ಬಿಡುಗಡೆಗೊಂಡ ವೃದ್ಧನಿಗೆ ಸಚಿವ ಜಗದೀಶ ಶೆಟ್ಟರ್ ಅವರು ಹೂಗುಚ್ಛ ನೀಡಿ, ‘ಏನೂ ಟೆನ್ಶನ್ ಮಾಡ್ಕೋಬೇಡಿ. ಆರಾಮ್ ಇರಿ. ಆರೋಗ್ಯದತ್ತ ಲಕ್ಷ್ಯೊಡಿ’ ಎಂದು ಸಲಹೆ ನೀಡಿ ಬೀಳ್ಕೊಟ್ಟರು. ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಪಂ ಸಿಇಒ ಡಾ. ಬಿ.ಸಿ. ಸತೀಶ,
ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಪ್ರಭಾರ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ., ಇತರರು ಇದ್ದರು.
ಮನೆಗೆ ಯಾವಾಗ್ ಹೋಗ್ತೀನೊ ಅಂದ್ಕೋತಿದ್ದೆ…: ‘ಔಷಧೋಪಚಾರ ಚೆನ್ನಾಗಿದ್ದರೂ ಹೊರ ಜಗತ್ತು ನೋಡದಂತಾಗಿತ್ತು. ಯಾವಾಗ ಮನೆಗೆ ಹೋಗ್ತೀನೊ ಅಂದ್ಕೋತಾ ಇದ್ದೆ…’ ರಾಜ್ಯದಲ್ಲಿ ಮೊದಲು ಯಶಸ್ವಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಪಡೆದು ಕರೊನಾ ಸೋಂಕಿನಿಂದ ಗುಣವಾದ 65 ವರ್ಷದ ವ್ಯಕ್ತಿ ‘ವಿಜಯವಾಣಿ’ಗೆ ಪ್ರತಿಕ್ರಿಯಿಸುತ್ತ ಹೀಗೆ ಹೇಳಿದರು. 21 ದಿನ ಕಿಮ್ಸ್ನಲ್ಲಿ ಇದ್ದೆ. ನಿತ್ಯವೂ ವೈದ್ಯೋಪಚಾರ ಉತ್ತಮವಾಗಿಯೇ ನಡೆಯುತ್ತಿತ್ತು. ಆದರೆ, ಮನೆ ಕಡೆ ನೆನಪಾಗಿ ದುಃಖ ಉಮ್ಮಳಿಸುತ್ತಿತ್ತು. ನಾನು ಸೋಂಕಿನಿಂದ ಗುಣ ಹೊಂದಿ ಮನೆಗೆ ಹೋಗಿಯೇ ಹೋಗುತ್ತೇನೆ ಎಂಬ ಆತ್ಮವಿಶ್ವಾಸ ಹೊಂದಿದ್ದೆ. ಹಾಗೆಯೇ ಆಯಿತು. ಕಿಮ್್ಸ ವೈದ್ಯರು ಮತ್ತು ಸಿಬ್ಬಂದಿಯ ಕಾಳಜಿಯಿಂದ ನನಗೆ ಮರು ಜೀವ ಸಿಕ್ಕಿದೆ ಎಂದು ಖುಷಿ ಹಂಚಿಕೊಂಡರು.