ಮೊದಲು ತಿಳಿವಳಿಕೆ, ನಂತರ ದಂಡ ವಸೂಲಿ

ಧಾರವಾಡ: ಸರಕು ಸಾಗಣೆ ವಾಹನಗಳಲ್ಲಿ ಕೂಲಿ ಕಾರ್ವಿುಕರು, ಸಾರ್ವಜನಿಕರನ್ನು ಕೊಂಡೊಯ್ಯುವುದು ಅಪರಾಧ. ಈ ಕುರಿತು ವಾಹನ ಚಾಲಕರು, ಮಾಲೀಕರು, ಕಾರ್ವಿುಕರು ಮತ್ತು ಸಾರ್ವಜನಿಕರಿಗೆ ಸಂಚಾರಿ ಠಾಣೆ ಪೊಲೀಸರಿಂದ ನಗರದಲ್ಲಿ ಮಂಗಳವಾರ ತಿಳಿವಳಿಕೆ ನೀಡಲಾಯಿತು.

ಜಿಲ್ಲಾಧಿಕಾರಿ ದೀಪಾ ಚೋಳನ್ ನಿರ್ದೇಶನದಂತೆ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಹಾಗೂ ಎಸಿಪಿ ಸಹಾಯಕ ಪೊಲೀಸ್ ಆಯುಕ್ತ ಎಂ.ಎನ್. ರುದ್ರಪ್ಪ ಮಾರ್ಗದರ್ಶನದಲ್ಲಿ ಬೆಳಗ್ಗೆ 9 ಗಂಟೆಯಿಂದ ಇನ್​ಸ್ಪೆಕ್ಟರ್ ಮುರಗೇಶ ಚನ್ನಣ್ಣವರ ನೇತೃತ್ವದಲ್ಲಿ 7 ತಂಡಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಯಿತು. ಸರಕು ಸಾಗಾಣಿಕೆ ವಾಹನ, ಕಟ್ಟಡ ಸಾಮಗ್ರಿ ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವುದು ಅಪರಾಧ ಮತ್ತು ಅಪಾಯಕಾರಿ ಎಂಬುದನ್ನು ಚಾಲಕರು ಮತ್ತು ಪ್ರಯಾಣಿಕರಿಗೆ ಇನ್ನು 3 ದಿನ ತಿಳಿಸಲಾಗುವುದು. ಮೊದಲ ಬಾರಿಗೆ ದಂಡ ವಿಧಿಸದೆ ತಿಳಿವಳಿಕೆ ನೀಡಿ ವಾಹನದ ಸಂಖ್ಯೆ ನಮೂದಿಸಿಕೊಳ್ಳಲಾಗುವುದು. ನಂತರ ಅದೇ ವಾಹನ, ಚಾಲಕ ತಪ್ಪು ಮಾಡಿದರೆ ದಂಡ ವಿಧಿಸಲಾಗುವುದು ಎಂದು ಇನ್​ಸ್ಪೆಕ್ಟರ್ ಮುರಗೇಶ ಚನ್ನಣ್ಣವರ ತಿಳಿಸಿದರು.

ಹಲವು ಪ್ರಕರಣ ದಾಖಲು: ಪ್ರಾದೇಶಿಕ ಸಾರಿಗೆ ವ್ಯಾಪ್ತಿಯ ಪೂರ್ವ ಮತ್ತು ಪಶ್ಚಿಮ ವಿಭಾಗದ ಪ್ರದೇಶಗಳಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಏ. 1ರಿಂದ ಮೇ 5ರವರೆಗೆ ಸರಕು ಸಾಗಾಣಿಕೆ ವಾಹನ, ಕಟ್ಟಡ ಸಾಮಗ್ರಿ ಸಾಗಾಣಿಕೆ ವಾಹನಗಳಲ್ಲಿ ಜನರನ್ನು, ಪ್ರಯಾಣಿಕರನ್ನು ಕೊಂಡೊಯ್ಯುತ್ತಿರುವುದನ್ನು ತಪಾಸಣೆ ನಡೆಸಿ 208 ಪ್ರಕರಣಗಳಲ್ಲಿ ದಂಡ ವಿಧಿಸಿದ್ದಾರೆ. ಧಾರವಾಡ ಪಶ್ಚಿಮ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಿಂದ 1,105 ವಾಹನ ತಪಾಸಿಸಿ, ನಿಯಮಬಾಹಿರವಾಗಿ ಜನರನ್ನು ಕೊಂಡೊಯ್ಯುತ್ತಿದ್ದ 89 ಹಾಗೂ ಶುಲ್ಕ ಪಡೆದು ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ 5 ಸೇರಿ 94 ಪ್ರಕರಣಗಳನ್ನು ದಾಖಲಿಸಿ, 3 ವಾಹನ ಜಪ್ತಿ ಮಾಡಿದ್ದಾರೆ. 74,600 ರೂ. ದಂಡ ವಸೂಲಿ ಮಾಡಿದ್ದಾರೆ. ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಿಂದ 1,155 ವಾಹನ ತಪಾಸಿಸಿ ನಿಯಮಬಾಹಿರವಾಗಿ ಜನರನ್ನು ಕೊಂಡೊಯ್ಯುತ್ತಿದ್ದ 114 ಪ್ರಕರಣ ದಾಖಲಿಸಿ, 10 ವಾಹನ ಜಪ್ತಿ ಮಾಡಿದ್ದಾರೆ. 1,02,600 ರೂ. ದಂಡ ವಸೂಲಿ ಮಾಡಿದ್ದಾರೆ. ಧಾರವಾಡ ಪಶ್ಚಿಮ, ಧಾರವಾಡ ಪೂರ್ವ (ಹುಬ್ಬಳ್ಳಿ) ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಿಂದ 2,260 ವಾಹನ ತಪಾಸಿಸಿ 13 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟು 1,77,200 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ರವೀಂದ್ರ ಕವಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.