More

  ಮೈ ನವಿರೇಳಿಸಿದ ಸಾಹಸ ಪ್ರದರ್ಶನ: ಮುದ್ದೇನಹಳ್ಳಿಯಲ್ಲಿ ವಾರ್ಷಿಕ ಕ್ರೀಡಾ, ಸಾಂಸ್ಕೃತಿಕ ಮೇಳಕ್ಕೆ ಚಾಲನೆ

  ಚಿಕ್ಕಬಳ್ಳಾಪುರ: ಮೈ ನವಿರೇಳಿಸುವ ಬೈಕ್ ಸ್ಟಂಟ್, ಪ್ಯಾರಾ ಮೋಟಾರ್ ಸಾಹಸ, ನಾನಾ ಬಗೆಯ ಪಿರಮಿಡ್ ರಚನೆ, ಹಾರುತ್ತಿದ್ದ ಹಾಟ್ ಏರ್ ಬಲೂನ್‌ನಿಂದ ಆಟವಾಡುತ್ತ ಕೆಳಗಿಳಿದ ವಿದ್ಯಾರ್ಥಿಗಳು, ಆಕರ್ಷಕ ಸಾಂಸ್ಕೃತಿಕ ನೃತ್ಯ, ಪಥ ಸಂಚಲನ…
  ಇವು ಮುದ್ದೇನಹಳ್ಳಿಯ ಸತ್ಯಸಾಯಿ ಲೋಕಸೇವಾ ಸಮೂಹ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ ಮೇಳದಲ್ಲಿ ಕಂಡು ಬಂದ ದೃಶ್ಯಗಳು.

  ಜ.15 ರಿಂದ 19ರವರೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವ ಕೆ.ಆರ್.ಸುರೇಶ್ ಕುಮಾರ್ ಬುಧವಾರ ಚಾಲನೆ ನೀಡಿದರು. ರಾಜ್ಯದ 17 ಜಿಲ್ಲೆ, ತೆಲಂಗಾಣದ 30 ವಿದ್ಯಾಸಂಸ್ಥೆಗಳಿಂದ ಸುಮಾರು 4 ಸಾವಿರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  ಬೆಂಕಿಯ ಗೋಳದಲ್ಲಿ ವೇಗವಾಗಿ ಬೈಕ್‌ನಲ್ಲಿ ಜಿಗಿತ, ಬ್ಯಾಟ್ ಬಾಲ್ ಮತ್ತು ಬ್ಯಾಸ್ಕೇಟ್ ಬಾಲ್ ಆಡುತ್ತ ಚಾಲನೆ, ಕಾಲಿನಲ್ಲಿ ಹ್ಯಾಂಡಲ್ ಹಿಡಿದು ಮತ್ತು ಹಿಂದಕ್ಕೆ ಕುಳಿತು ಚಾಲನೆ, 3 ರಿಂದ 6 ಮಂದಿ ನಾನಾ ಬಗೆಯ ಪಿರಮಿಡ್ ನಿರ್ಮಿಸಿ ಬೈಕ್‌ನಲ್ಲಿ ನಿಂತುಕೊಂಡು ಸಾಗುವ ದೃಶ್ಯಗಳು ನೋಡುಗರನ್ನು ತುದಿಗಾಲಲ್ಲಿ ನಿಲ್ಲಿಸಿದ್ದವು.

  ಸರಿ ಸುಮಾರು 3 ಗಂಟೆಗೂ ಹೆಚ್ಚು ಕಾಲ ನಡೆದ ಸಾಹಸ ಪ್ರದರ್ಶನ ವೀಕ್ಷಿಸಿದ ಗಣ್ಯರು ಮತ್ತು ಪ್ರೇಕ್ಷಕರು ಮೂಕವಿಸ್ಮಿತರಾದರು, ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.

  ಇದರ ಜತೆಗೆ ಜಾರುಗಾಲಿ ಚಮತ್ಕಾರ, 120 ಅಡಿ ಎತ್ತರದಲ್ಲಿ ಚಮತ್ಕಾರಿಕ ವಿನ್ಯಾಸ ರಚನೆ, ಬಿಸಿಗಾಳಿ ಬುಗ್ಗೆಯಿಂದ ಹಗ್ಗದ ಸಹಾಯ ಪಡೆದು ಜಾರುತ್ತಾ ನೆಲ ಸ್ಪರ್ಶ ಮಾಡುವ ವಾಯುವೀರರ ಸಾಹಸ, ಪ್ಯಾರಾಗ್ಲೈಡಿಂಗ್ ವಾಯುವಿಹಾರ, ಕುದುರೆ ಮತ್ತು ಏಕ ಚಕ್ರ ಸೈಕಲ್ ಸವಾರಿ ಸೇರಿ ನಾನಾ ಸಾಹಸ ಪ್ರದರ್ಶನಗಳು ಗಮನ ಸೆಳೆದವು.

  ಆಕರ್ಷಕ ಪಥ ಸಂಚಲನ, ನೃತ್ಯ: ಸಚಿವ ಕೆ.ಆರ್.ಸುರೇಶ್ ಕುಮಾರ್ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಮೇಳದ ಧ್ವಜಾರೋಹಣ ನೆರವೇರಿಸಿದ ಬಳಿಕ ಸದ್ಗುರು ಶ್ರೀ ಮಧುಸೂಧನ್ ಸಮವಸ್ತ್ರದೊಂದಿಗೆ ಸಾಗುತ್ತಿದ್ದ ಪಥ ಸಂಚಲನ ತಂಡಗಳ ಗೌರವ ವಂದನೆ ಸ್ವೀಕರಿಸಿದರು. ಯೋಗಾಸನದ ಭಂಗಿಗಳು, ಕರಾಟೆ, ಕೇರಳದ ವೀರಕಲೆ ಕಳರಿ ಯುದ್ಧ, ಕ್ರಿಕೆಟ್ ಚಮತ್ಕಾರಿಕ ತಂತ್ರಗಳ ಪ್ರದರ್ಶನ, ಪ್ರಾದೇಶಿಕ ಸೊಗಡನ್ನು ಬಿಂಬಿಸುವ ಜಾನಪದ ಮತ್ತು ಪೌರಾಣಿಕ ಕತೆ ಬಿಂಬಿಸುವ ನೃತ್ಯಾಭಿನಯ ನಡೆಯಿತು. ಕಲಾಕೃತಿ ನಂದಿ ವಾಹನದ ಮೂಲಕ ಮೈದಾನಕ್ಕೆ ಕ್ರೀಡಾಜ್ಯೋತಿ ತರಲಾಯಿತು.

  ಉಪಸ್ಥಿತರಿದ್ದ ಗಣ್ಯರು: ಶ್ರೀ ವಿನಯಾನಂದ ಸ್ವಾಮೀಜಿ, ಉತ್ತರಾಖಂಡದ ನಗರಾಭಿವೃದ್ಧಿ ಸಚಿವ ಮದನ್ ಕೌಶಿಕ್, ಶಿಕ್ಷಣ ತಜ್ಞ ಅತುಲ್ ಕೊಠಾರಿ, ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಕುಲಪತಿ ಬಿ.ಎನ್.ನರಸಿಂಹಮೂರ್ತಿ, ಸೇವಕರಾದ ಆಂಟನಿ ಟ್ಯಾನಿ, ಡೇವಿಡ್ ಕಾರ್ನ್‌ಸ್ವೀಟ್, ಬಿ.ನಾರಾಯಣ ರಾವ್, ಕರಾಯ ಸಂಜೀವ ಶೆಟ್ಟಿ ಇತರರು ಭಾಗವಹಿಸಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts