ಮಂಜುನಾಥ ತಿಮ್ಮಯ್ಯ ಮೈಸೂರು
ಅರಮನೆ ನಗರಿ ಮೈಸೂರಿಗೆ ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ‘ಟೂರ್ ಪ್ಯಾಕೇಜ್’ ಕಲ್ಪಿಸುವ ಮೂಲಕ ಪರ್ಯಟನೆಯ ಆಸ್ವಾದವನ್ನು ಉಣಬಡಿಸಬೇಕಿದೆ.
ದಸರಾ ಸಂದರ್ಭದಲ್ಲಿ ಮಾತ್ರ 15 ದಿನಗಳ ಕಾಲ ನಡೆಯುವ ಪ್ಯಾಕೇಜ್ ಟೂರ್ ವ್ಯವಸ್ಥೆ ವರ್ಷವಿಡೀ ಮಾಡಬೇಕು. ಇದು ಸಾಧ್ಯವಾಗದಿದ್ದರೆ ವಾರಾಂತ್ಯದಲ್ಲಿಯಾದರೂ ಕಾರ್ಯರೂಪಕ್ಕೆ ತರಬೇಕು ಎಂಬುದು ಪ್ರವಾಸಿಗರ ಬೇಡಿಕೆ.
ಮೈಸೂರು ಪ್ರವಾಸಿಗರ ಪಾಲಿಗೆ ನೆಚ್ಚಿನ ತಾಣ. ಇಲ್ಲಿಯ ಪ್ರೇಕ್ಷಣೀಯ ಸ್ಥಳಗಳು ಯಾತ್ರಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತವೆ. ಆದರೆ, ಅಲ್ಲೊಂದು ಇಲ್ಲೊಂದು ಇರುವ ಪ್ರವಾಸಿ ಕೇಂದ್ರಗಳಿಗೆ ಹೋಗಲು ಸಂಪರ್ಕ ಕೊಂಡಿಯಿಲ್ಲ. ಇದು ಅವರಿಗೆ ಅನನುಕೂಲ ಉಂಟು ಮಾಡುತ್ತಿದೆ.
ಈ ಕಾರಣಕ್ಕೆ ಮೈಸೂರು ಅರಮನೆ, ಚಾಮರಾಜೇಂದ್ರ ಮೃಗಾಲಯ ಮತ್ತು ಚಾಮುಂಡಿಬೆಟ್ಟಕ್ಕೆ ಮಾತ್ರ ಭೇಟಿ ಕೊಡುವ ಪ್ರವಾಸಿಗರು, ಉಳಿದ ಸ್ಥಳಗಳ ಕಡೆಗೆ ಮುಖ ಮಾಡುವುದೇ ಇಲ್ಲ. ಇದು ಮೈಸೂರು ಪ್ರವಾಸೋದ್ಯಮಕ್ಕೂ ಮತ್ತು ಪ್ರವಾಸಿಗರಿಗೂ ನಷ್ಟವೇ ಸರಿ. ಆದರೆ, ಟೂರ್ ಪ್ಯಾಕೇಜ್ ಹೆಸರಿನಲ್ಲಿ ಖಾಸಗಿ ಸಂಸ್ಥೆ ದುಡ್ಡು ಮಾಡಿಕೊಳ್ಳುತ್ತಿವೆ.
‘ಮೈಸೂರು ಪ್ರವಾಸ’ ಎಂದರೇ ಬರೀ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ ಎಂದು ಬಹಳಷ್ಟು ಜನ ತಿಳಿದುಕೊಂಡಿದ್ದಾರೆ.ಉಳಿದ ಪ್ರೇಕ್ಷಣೀಯ ತಾಣಗಳ ಕುರಿತು ಪ್ರಚಾರ ಮಾಡುತ್ತಿಲ್ಲ. ಅಲ್ಲಿಗೆ ಪ್ರವಾಸಿಗರನ್ನು ಸೆಳೆಯುವ ಕಾರ್ಯತಂತ್ರವನ್ನೂ ಮಾಡುತ್ತಿಲ್ಲ. ಇದು ಸಮಗ್ರ ಪ್ರವಾಸೋದ್ಯಮ ಪ್ರಗತಿಗೆ ಅಡ್ಡಿಯಾಗಿದೆ. ಈ ಕೊರತೆ ನಿವಾರಣೆಗಾಗಿ ಟೂರ್ ಪ್ಯಾಕೇಜ್ ಕಾರ್ಯಕ್ರಮ ಪರಿಚಯಿಸಬೇಕಿದೆ. ಮೈಸೂರು ನಗರದ ಪ್ರವಾಸಿ ಸ್ಥಳ ವೀಕ್ಷಣೆಗೆ ಒಂದು ಪ್ಯಾಕೇಜ್ ಮತ್ತು ಇನ್ನೊಂದು ಮೈಸೂರಿನಾಚೆ ಗ್ರಾಮಾಂತರ ಪ್ರದೇಶದಲ್ಲಿರುವ ತಾಣಗಳ ಭೇಟಿಗೆ ಮತ್ತೊಂದು ಪ್ಯಾಕೇಜ್ ಶುರು ಮಾಡಬೇಕಿದೆ.
ನಗರದಲ್ಲಿ ಒಂದು ಸುತ್ತು:
ಟೂರಿಸ್ಟ್‌ಗಳಿಗೆ ಸಾಂಸ್ಕೃತಿಕ ನಗರಿ ಪರಿಚಯಿಸುವ ಒಂದು ದಿನ ಪ್ರವಾಸವನ್ನು ವ್ಯವಸ್ಥೆ ಮಾಡಬೇಕು.
ಮೈಸೂರು ಅರಮನೆ, ಮೃಗಾಲಯ, ಚಾಮುಂಡಿಬೆಟ್ಟದೊಂದಿಗೆ ಜಗನ್ಮೋಹನ ಅರಮನೆಯಲ್ಲಿರುವ ಕಲಾ ಗ್ಯಾಲರಿ, ಸೆಂಟ್ ಫಿನೋಮಿನ ಚರ್ಚ್, ರೈಲ್ವೆ ಮ್ಯೂಸಿಯಂ, ಜಯಲಕ್ಷ್ಮೀ ವಿಲಾಸ್ ಪ್ಯಾಲೇಸ್, ಲಲಿತ್ ಮಹಲ್ ಅರಮನೆ, ಕಲೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕೃತಿ ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ, ಕಾರಂಜಿಕೆರೆ, ಲಿಂಗಾಂಬುದಿ ಕೆರೆ, ಕುಕ್ಕರಹಳ್ಳಿ ಕೆರೆ, ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇರುವ ಬೋನ್ಸಾಯ್(ಕುಬ್ಜ ಮರಗಳು) ಗಾರ್ಡನ್, ಗಿಳಿಗಳ ಶುಕವನ, ಸಂಗೀತ ಮ್ಯೂಸಿಯಂ, ನಾದಮಂಟಪ ಹಾಗೂ ವೆಂಕಟೇಶ್ವರ ದೇವಾಲಯಗಳು ವೀಕ್ಷಿಸಲು ಅವಕಾಶ ಕಲ್ಪಿಸಿಕೊಡಬಹುದು.
ಮೈಸೂರಿನಾಚೆ ಪ್ರವಾಸ:
ಮೈಸೂರಿನ ಆಚೆಯೂ ಅನೇಕ ಪ್ರಕೃತಿ ಸೌಂದರ್ಯ ತಾಣಗಳಿವೆ. ವನ್ಯ-ಅರಣ್ಯ ಪ್ರೇಮಿಗಳಿಗಾಗಿ ಎಚ್.ಡಿ.ಕೋಟೆಯ ಬಂಡೀಪುರ ಅರಣ್ಯ, ಕಾಡಂಚಿನ ಕಬಿನಿ ಹಿನ್ನೀರು, ನಾಗರಹೊಳೆ, ಹುಣಸೂರು ತಾಲೂಕಿನ ಅಂಚಿನ ನಾಗರಹೊಳೆಯಲ್ಲಿ ಸಫಾರಿ, ದೇವರ ದರ್ಶನಕ್ಕಾಗಿ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ, ತಿ.ನರಸೀಪುರ ತಾಲೂಕಿನ ತಲಕಾಡು ಪುಣ್ಯಕ್ಷೇತ್ರ, 3 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳಕ್ಕೆ ಸಾಕ್ಷಿಯಾಗುವ ತಿ.ನರಸೀಪುರ ತಾಲೂಕಿನ ಸಂಗಮ ಕ್ಷೇತ್ರಕ್ಕೂ ಧಾರ್ಮಿಕ ಪ್ರವಾಸ ಕೈಗೊಳ್ಳಬಹುದಾಗಿದೆ.
ಯುನೆಸ್ಕೋ ಮಾನ್ಯತೆ ಪಡೆದಿರುವ ಸೋಮನಾಥಪುರ ದೇವಸ್ಥಾನದ ಪಾರಂಪರಿಕ ದರ್ಶನ. ಜಲ ಕ್ರೀಡೆಗಾಗಿ ವರುಣ ಕೆರೆ, ಚುಂಚನಕಟ್ಟೆ ಜಲಪಾತ, ಕಾವೇರಿ ನದಿ ಪಾತ್ರ, ಕೆಆರ್‌ಎಸ್ ಹಿನ್ನೀರಿನ ವೀಕ್ಷಣೆಗೆ ವ್ಯವಸ್ಥೆ ಮಾಡಬಹುದು. ಟಿಬೇಟಿಯನ್ಸ್ ನೆಲೆಸಿರುವ, ಬುದ್ಧ ದೇವಸ್ಥಾನ ಇರುವ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ವಿಶೇಷ ತಾಣವಾಗಿ ಪರಿಗಣಿಸಬಹುದು.
ಸಾರಿಗೆ, ಗೈಡ್ ವ್ಯವಸ್ಥೆ ಕಲ್ಪಿಸಿ
ಹೀಗೆ ಎರಡು ರೀತಿ ಪ್ರವಾಸ ಪ್ಯಾಕೇಜ್ ಕಲ್ಪಿಸಬೇಕು. ಅದಕ್ಕಾಗಿ ಪ್ರವಾಸಿಗರ ಸಮೂಹ ಕರೆದುಕೊಂಡು ಹೋಗಲು ವಾಹನ ವ್ಯವಸ್ಥೆ ಮಾಡಬೇಕು. ಸ್ಥಳಗಳ ಮಾಹಿತಿ ನೀಡಲು ಮಾರ್ಗದರ್ಶಿಗಳನ್ನು(ಗೈಡ್) ನಿಯೋಜನೆ ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸಿಕೊಟ್ಟರೆ ಸಾಕು.
ಅದಕ್ಕಾಗಿ ಯಾತ್ರಿಗಳಿಂದ ಇಂತಿಷ್ಟು ಶುಲ್ಕ ಸಂಗ್ರಹಿಸಬಹುದು. ಹೀಗೆ ಮಾಡುವುದರಿಂದ ಗೊಂದಲ, ಕಿರಿಕಿರಿವಿಲ್ಲದೆ ಪ್ರವಾಸಿಗರು ಪಯಣ ಮಾಡಬಹುದು. ಜತೆಗೆ, ಪ್ರವಾಸೋದ್ಯಮ ಇಲಾಖೆ ಆದಾಯ ದೊರೆಯುತ್ತದೆ. ಇದು ಕಾರ್ಯಸಾಧು ಮಾಡಲು ವಿವಿಧ ಸರ್ಕಾರಿ ಸಂಸ್ಥೆಗಳು ಒಂಟಿಯಾಗಿ ಕಾರ್ಯನಿರ್ವಹಣೆ ಮಾಡಬೇಕಿದೆ. ಜಿಲ್ಲಾಡಳಿತ ಮೇಲುಸ್ತುವಾರಿಯಲ್ಲಿ ಪ್ರವಾಸೋದ್ಯಮ ಇಲಾಖೆ ಸಂಪರ್ಕ ಸೇತುವೆಯಂತೆ ಕೆಲಸ ಮಾಡಬೇಕಾಗುತ್ತದೆ.
ನಿರ್ಲಕ್ಷೃ ಒಳಪಟ್ಟಿರುವ ಪ್ರವಾಸಿ ತಾಣಗಳು
ಮೈಸೂರು ಆಚೆಯೂ 23 ಹೆಚ್ಚು ಪ್ರವಾಸಿ ತಾಣಗಳು ಇವೆ. ಆದರೆ, ಅವುಗಳು ನಿರ್ಲಕ್ಷೃಕ್ಕೆ ಒಳಪಟ್ಟಿವೆ. ಅವುಗಳ ಪ್ರಚಾರವನ್ನೂ ಮಾಡುತ್ತಿಲ್ಲ. ಖಾದಿ ಗ್ರಾಮೋದ್ಯಮಕ್ಕೆ ಒತ್ತು ನೀಡಿರುವ ನಂಜನಗೂಡು ತಾಲೂಕಿನ ಬದನವಾಳು ಗಾಂಧಿ ಆಶ್ರಮ, ಗೊಮ್ಮಟಗಿರಿ, ಚಿಕ್ಕಹುಣಸೂರು ಕೆರೆ, ಸಾಲಿಗ್ರಾಮದ ದೊಡ್ಡಕರೆ, ಎಚ್.ಡಿ.ಕೋಟೆ ತಾಲೂಕಿನ ಚಿಕ್ಕದೇವಮ್ಮನ ಬೆಟ್ಟ, ಭೀಮನಕೊಲ್ಲಿಯ ಮಹದೇಶ್ವರ ಸ್ವಾಮಿ ದೇವಸ್ಥಾನ, ಕಬಿನಿ, ನುಗು, ತಾರಕ ಜಲಾಶಯ ಸೇರಿದಂತೆ ಇನ್ನಿತರ ಪ್ರವಾಸಿ ತಾಣಗಳತ್ತ ಪ್ರವಾಸಿಗರನ್ನು ಆಕರ್ಷಿಸುವ ಕೆಲಸವಾಗುತ್ತಿಲ್ಲ. ಹೀಗಾಗಿ, ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯೂ ಆಗಿಲ್ಲ. ಪ್ರವಾಸಿಗರಿಗೂ ಈ ಕುರಿತು ಗೊತ್ತಿಲ್ಲದಿರುವುದು ನಿಜಕ್ಕೂ ವಿಪರ್ಯಾಸ.
ಈಗಿರುವ ಪ್ಯಾಕೇಜ್ ಆಕರ್ಷಕವಾಗಿಲ್ಲ
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ (ಕೆಎಸ್‌ಟಿಡಿಸಿ) ಒಂದು ದಿನ ಮೈಸೂರು ಪ್ರವಾಸ ಪ್ಯಾಕೇಜ್ ಆಕರ್ಷಕವಾಗಿಲ್ಲ. ಜಗನ್ಮೋಹನ ಕಲಾ ಗ್ಯಾಲರಿ, ಮೃಗಾಲಯ, ಚಾಮುಂಡಿಬೆಟ್ಟ, ಸೆಂಟ್ ಫಿಲೋಮಿನ ಚರ್ಚ್ ಜತೆಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗುಂಬಜ್, ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ, ಶ್ರೀರಂಗಪಟ್ಟಣ ದೇವಸ್ಥಾನ, ಸಂಜೆ ಬೃಂದಾವನ ಗಾರ್ಡನ್ ಮಾತ್ರ ವೀಕ್ಷಣೆಗೆ ಅವಕಾಶ ಇದೆ. ನಗರದಲ್ಲಿರುವ ಇನ್ನೂ ಪ್ರಮುಖ ಸ್ಥಳಗಳನ್ನು ಕೈಬಿಡಲಾಗಿದೆ. ಮೈಸೂರು ನಗರಕ್ಕಾಗಿ ಪ್ರತ್ಯೇಕ ಪ್ಯಾಕೇಜ್ ಮಾಡಬೇಕು ಎಂಬುದು ಪ್ರವಾಸಿಗರ ಆಗ್ರಹ.
ಜಿಲ್ಲೆಗೆ ಸೀಮಿತವಾಗಿ ಟೂರ್ ವ್ಯವಸ್ಥೆ ಇರಲಿ
ದಸರಾ ಪ್ರಯುಕ್ತ ಪ್ರವಾಸಿಗರಿಗೆ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಕಲ್ಪಿಸುವ ಪ್ಯಾಕೇಜ್ ಟೂರ್ ವ್ಯವಸ್ಥೆ ಜನಪ್ರಿಯವಾಗಿದೆ. ಗಿರಿದರ್ಶಿನಿ, ದೇವದರ್ಶಿನಿ ಹಾಗೂ ಕೊಡಗು ಟ್ರಿಪ್ ಆಯೋಜನೆ ಮಾಡುತ್ತದೆ. ಕರ್ನಾಟಕ ಸಾರಿಗೆ(ವೇಗದೂತ) ರಾಜಹಂಸ, ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸಲ್) ಇವಿ ಪವರ್ ಪ್ಲಸ್, ಅಂಬಾರಿ ಕ್ಲಬ್ ಕ್ಲಾಸ್, ಅಂಬಾರಿ ಉತ್ಸವ್ ಹಾಗೂ ಪಲ್ಲಕ್ಕಿ ಉತ್ಸವ ಎಂಬ ಸಾರಿಗೆ ಸೇವೆಗಳ ಜತೆಗೆ ವಿಶೇಷ ಪ್ಯಾಕೇಜ್ ಸಾರಿಗೆ ಸೇವೆಗಳ ಸೌಲಭ್ಯ ಒದಗಿಸಲಾಗುತ್ತದೆ. ಕಡಿಮೆ ಖರ್ಚಿನಲ್ಲಿ ಒಂದು ದಿನ ಪ್ರವಾಸ ಇದಾಗಿದೆ. ಇದರಲ್ಲಿ ಮೈಸೂರು ಜಿಲ್ಲೆಗಿಂತ ಹೊರ ಜಿಲ್ಲೆಗಳಿಗೆ ಭೇಟಿ ಹೆಚ್ಚು ಇರುತ್ತದೆ. ಮೈಸೂರು ಜಿಲ್ಲೆಗೆ ಸೀಮಿತವಾಗಿ ಪ್ರತ್ಯೇಕ ಪ್ಯಾಕೇಜ್ ಮಾಡಿದರೆ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲ.
ಮೈಸೂರು ನಗರ ಪ್ರವಾಸಿ ತಾಣಗಳ ಮತ್ತು ಗ್ರಾಮಾಂತರ ಪ್ರೇಕ್ಷಣಿಕ ಸ್ಥಳಗಳ ವೀಕ್ಷಣೆಗಾಗಿ ಸದ್ಯಕ್ಕೆ ಟೂರ್ ಪ್ಯಾಕೇಜ್ ಇಲ್ಲ. ಆದರೆ, ಟೂರಿಸಂ ಸರ್ಕಿಟ್ ಮಾಡುವ ಪ್ರಸ್ತಾವನೆ ಇದೆ. ಇದು ಜಾರಿಯಾದರೆ ಮೈಸೂರು ಸೇರಿದಂತೆ ಸುತ್ತಲಿನ ಜಿಲ್ಲೆಯ ಪ್ರವಾಸಿ ತಾಣಗಳ ಭೇಟಿಕ್ಕೆ ಟೂರ್ ಪ್ಯಾಕೇಜ್ ವ್ಯವಸ್ಥೆ ಮಾಡಲಾಗುವುದು.
ಕೆ.ರುದ್ರೇಶ್, ಪ್ರಭಾರ ಜಂಟಿ ನಿರ್ದೇಶಕ
ಪ್ರವಾಸೋದ್ಯಮ ಇಲಾಖೆ