ಮೈಸೂರು ವಿವಿ ಅಂಗಳದಲ್ಲಿ ಮೇಳೈಸಿದ ವಿದೇಶಿ ಸಂಸ್ಕೃತಿ

ಮೈಸೂರು: ಮೈಸೂರು ವಿವಿ ಅಂಗಳದಲ್ಲಿ ಭಾನುವಾರ ಸಂಜೆ ವಿದೇಶಿ ಸಂಸ್ಕೃತಿ ಮೇಳೈಸಿತು. ವಿಶೇಷ ಉಡುಗೆ ತೊಟ್ಟ ವಿದೇಶಿ ವಿದ್ಯಾರ್ಥಿಗಳು ತಮ್ಮ ತಾಯ್ನಡಿನ ಸಂಸ್ಕೃತಿ, ಪರಂಪರೆಯನ್ನು ಪ್ರದರ್ಶಿಸಿದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ 58 ದೇಶಗಳ ನೂರಾರು ವಿದ್ಯಾರ್ಥಿಗಳು, ತಮ್ಮ ಕಲೆ ಪ್ರದರ್ಶಿಸಿ ನೆರೆದಿದ್ದವರ ಮೆಚ್ಚುಗೆ ಗಳಿಸಿದರು.

ಮಾನಸಗಂಗೋತ್ರಿಯ ಸೆನೆಟ್‌ಭವನದಲ್ಲಿ ಮೈಸೂರು ವಿವಿ ಅಂತಾರಾಷ್ಟ್ರೀಯ ಕೇಂದ್ರದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ದಿನಾಚರಣೆ ಕಾರ್ಯಕ್ರಮಕ್ಕೆ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಮೈಸೂರು ವಿವಿಯಲ್ಲಿ 58ಕ್ಕೂ ಹೆಚ್ಚು ದೇಶಗಳ 700 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಈ ಬಾರಿಯ 99ನೇ ಘಟಿಕೋತ್ಸವದಲ್ಲಿ 24 ಚಿನ್ನದ ಪದಕಗಳನ್ನು ಪಡೆದುಕೊಂಡ ಎಮೆಲಿಫ್ ಸ್ಟೆಲ್ಲಾ ಚಿನೆಲೊ ಅವರು ಮಾದರಿಯಾಗಿದ್ದಾರೆ ಎಂದರು.

ವಿದ್ಯಾರ್ಥಿಗಳು ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಅದನ್ನು ನನ್ನ ಗಮನಕ್ಕೆ ತಂದು ಬಗೆಹರಿಸಿಕೊಳ್ಳಿ. ಮುಂದಿನ ದಿನಗಳಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚು ಮಾಡುವುದು ನನ್ನ ಗುರಿಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಾಥೆಲ್‌ನ ಕಾಸ್ಕೋಡಿಯಾ ಕಾಲೇಜಿನ ಯುಎಸ್-ಇಂಡಿಯಾ ಪುಲ್‌ಬ್ರೈಟ್ ಫೆಲೋ ಡಾ.ಡೇವಿಡ್ ಎ.ಶಪಿರೊ ಮಾತನಾಡಿ, ವಿದೇಶಿ ಹಾಗೂ ದೇಶಿ ವಿದ್ಯಾರ್ಥಿಗಳ ಐಕ್ಯತೆಗೆ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಪೂರಕವಾಗಿದೆ. ಬೇರೆ, ಬೇರೆ ಕಡೆಗಳಲ್ಲಿ ಇರುವ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಇದು ಸಹಕಾರಿಯಾಗಿದೆ ಎಂದರು.

ಒಂದು ದೇಶದವರು ಮತ್ತೊಂದು ದೇಶಕ್ಕೆ ತೆರಳಿ ಅಲ್ಲಿ ಶಿಕ್ಷಣ ಕಲಿಯುವುದರಿಂದ ಅಲ್ಲಿನ ಸಂಸ್ಕೃತಿಯನ್ನು ಅರಿಯಲು ಸಾಧ್ಯವಿದೆ. ಇದು ಭವಿಷ್ಯದಲ್ಲಿ ಉಪಯೋಗವಾಗುವುದಲ್ಲದೆ, ಅಭಿವೃದ್ಧಿಗೂ ಹೆಚ್ಚು ಸಹಾಯಕವಾಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲರೂ ಒಂದುಗೂಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಈ ವಾತಾವರಣ ಪೂರಕವಾಗಲಿದೆ ಎಂದು ತಿಳಿಸಿದರು.

ಮೈಸೂರು ವಿವಿ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಮಾತನಾಡಿ, ಆತಿಥ್ಯ ಸತ್ಕಾರವೆಂಬುದು ನಮ್ಮ ಭಾರತೀಯ ಸಂಸ್ಕೃತಿ. ವಿವಿಧ ದೇಶಗಳಿಂದ ಆಗಮಿಸಿರುವ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಂಸ್ಕೃತಿಯನ್ನು ಅರಿಯಬೇಕು. ಮೈಸೂರು ವಿವಿ ಸ್ಥಾಪಿಸಿದ ಕುವೆಂಪು ಅವರ ವಿಶ್ವಮಾನವ ಕಲ್ಪನೆಯನ್ನು ಅರಿತು ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಐಸಿಸಿಆರ್ ಪ್ರಾದೇಶಿಕ ನಿರ್ದೇಶಕ ಪಿ.ವೇಣುಗೋಪಾಲ್, ಅಂತಾರಾಷ್ಟ್ರೀಯ ಕೇಂದ್ರದ ಅಧ್ಯಕ್ಷ ಮಲ್ಲಿಕ್ ಜೆಂಗ್, ಕಾರ್ಯದರ್ಶಿ ಟೆನ್‌ಜಿನ್ ಯೋಂಟೇನ್ ಇದ್ದರು. ಮೈಸೂರು ವಿವಿ ಜತೆಗೆ ಬೆಂಗಳೂರು, ಮಂಗಳೂರು, ಪುಣೆಯಿಂದಲೂ ವಿದೇಶಿ ವಿದ್ಯಾರ್ಥಿಗಳು ಆಗಮಿಸಿದ್ದರು.