ಮೈಸೂರು: ಅಕ್ರಮ ಆಸ್ತಿ ಆರೋಪದ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ 5ನೇ ವಲಯ ಆಯುಕ್ತ ಡಿ.ನಾಗೇಶ್ ಅವರ ಮನೆ ಹಾಗೂ ಕಚೇರಿ ಮೇಲೆ ಏಕಕಾಲದಲ್ಲಿ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದು, 1.95 ಕೋಟಿ ರೂ.ಮೊತ್ತದ ಸ್ಥಿರಾಸ್ತಿ ಮತ್ತು 77.74 ಲಕ್ಷ ರೂ.ಬೆಲೆ ಬಾಳುವ ಚರಾಸ್ತಿಗಳು ಪತ್ತೆಯಾಗಿವೆ.
ಖಚಿತ ಮಾಹಿತಿ ಮೇರೆಗೆ ಮೈಸೂರು, ಶ್ರೀರಂಗಪಟ್ಟಣ, ಬೆಂಗಳೂರಿನಲ್ಲಿ ಆರೋಪಿಗೆ ಸೇರಿರುವ ಮನೆ, ಕಚೇರಿಗಳ ಮೇಲೆ ದಾಳಿ ಮಾಡಿ ಶೋಧ ನಡೆಸಲಾಯಿತು.
ಶ್ರೀರಂಗಪಟ್ಟಣದ ಕಾವೇರಿ ಹೊಸ ಬಡಾವಣೆ (ಡಾಲರ್ಸ್ ಕಾಲನಿ)ಯಲ್ಲಿರುವ ನಾಗೇಶ್ ಅವರ ಮನೆ, ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಚೇರಿ ಹಾಗೂ ಬೆಂಗಳೂರಿನಲ್ಲಿ ಪತ್ನಿ, ಮಕ್ಕಳಿರುವ ಕ್ವಾಟ್ರಸ್‌ನಲ್ಲಿ ಬೆಳಗ್ಗೆ 7ಗಂಟೆಗೆ ದಾಳಿ ಮಾಡಲಾಯಿತು.
ಮೈಸೂರು, ಮಡಿಕೇರಿ ಹಾಗೂ ಚಾಮರಾಜನಗರ ಜಿಲ್ಲೆಯ ಲೋಕಾಯುಕ್ತ ಪೊಲೀಸರು ಒಳಗೊಂಡ 3 ತಂಡಗಳ ಮಿಂಚಿನ ಕಾರ್ಯಚರಣೆ ನಡೆಸಿದವು. ಸುಮಾರು 30ಕ್ಕೂ ಹೆಚ್ಚು ಲೋಕಾಯುಕ್ತ ಪೊಲೀಸರು ವಿವಿಧೆಡೆ ಸುಮಾರು 10 ತಾಸುಗಳ ಕಾಲ ಶೋಧ ನಡೆಸಿದರು. ಪರಿಶೀಲನೆ ವೇಳೆ ಅಧಿಕ ಪ್ರಮಾಣದಲ್ಲಿ ಅಕ್ರಮ ಆಸ್ತಿ ಗಳಿಕೆಯ ಮಹತ್ವದ ದಾಖಲೆಗಳೂ ಪತ್ತೆಯಾಗಿವೆ.
ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ಸಮೀಪದ ಕಾವೇರಿ ಹೊಸ ಬಡಾವಣೆಯಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ 5 ಅಂತಸ್ತಿನ ಬೃಹತ್ ಕಟ್ಟಡವನ್ನೂ ಪತ್ತೆ ಮಾಡಲಾಗಿದೆ.
2018-19ರಲ್ಲಿ ಶ್ರೀರಂಗಪಟ್ಟಣ ತಾಲೂಕಿನ ತಹಸೀಲ್ದಾರ್ ಆಗಿ 2 ವರ್ಷ ಕಾರ್ಯನಿರ್ವಹಿಸಿದ್ದರು. ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕು ತಹಸೀಲ್ದಾರ್, ಚನ್ನಪಟ್ಟಣ ಸೇರಿದಂತೆ ವಿವಿಧೆಡೆ ಕಾರ್ಯನಿರ್ವಹಿಸಿದ್ದರು. ಹಾಲಿ ಪಾಲಿಕೆ 5ನೇ ವಲಯದ ಆಯುಕ್ತರಾಗಿ, ಪಾಲಿಕೆ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮೈಸೂರು ಜಿಲ್ಲಾ ಲೋಕಾಯುಕ್ತ ಎಸ್.ಪಿ ಟಿ.ಜೆ.ಉದೇಶ್ ನೇತೃತ್ವದಲ್ಲಿ ಡಿವೈಎಸ್‌ಪಿ ಕೆ.ಸಿ.ಪ್ರಕಾಶ್, ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ್‌ಕುಮಾರ್, ಉಮೇಶ್, ರೂಪಶ್ರೀ, ರವಿಕುಮಾರ್, ಲೋಹಿತ್‌ಕುಮಾರ್ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.