ಸಿನಿಮಾ

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ‘ಕೈ‘ ಬಲವರ್ಧನೆ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಮುಂದಿನ ವರ್ಷ ನಡೆಯಲಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯ ಮೇಲೆ ಜಿಲ್ಲೆಯ 11 ಕ್ಷೇತ್ರಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪರಿಣಾಮ ಬೀರಲಿದೆಯೇ?

ಇಂತಹವೊಂದು ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಈಗಲೇ ಶುರುವಾಗಿದ್ದು, ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿ, ಬಲ ಕುಗ್ಗಿರುವ ಬಿಜೆಪಿಗೆ 2024ರ ಲೋಕಸಭಾ ಚುನಾವಣೆಯಲ್ಲಿ ಜಯದ ಹಾದಿ ಕಠಿಣವಾಗಬಹುದು. ಸೊರಗಿರುವ ಜೆಡಿಎಸ್ ಸಹ ಸಾಕಷ್ಟು ಬೆವರು ಸುರಿಸಬೇಕಾಗುತ್ತದೆ. ಆದರೆ ಬಲ ವೃದ್ಧಿಸಿಕೊಂಡಿರುವ ಕಾಂಗ್ರೆಸ್‌ಗೆ ಅನುಕೂಲಕರ ಸನ್ನಿವೇಶ ಸೃಷ್ಟಿಯಾಗಿದೆ ಎಂದು ವಿಶ್ಲೇಷಿಸಲಾಗಿದೆ.

ನೆಲ ಕಚ್ಚಿದ ಕಮಲ:
ವಿಧಾನಸಭೆ ಚುನಾವಣೆಯ ಬಳಿಕ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ. ಇದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಲ ತಂದುಕೊಡಬಹುದು.
ಬಿಜೆಪಿಯ ಭದ್ರಕೋಟೆಯಾಗಿದ್ದ ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳಲ್ಲೂ ಬಿಜೆಪಿ ಸಂಪೂರ್ಣ ಧೂಳೀಪಟವಾಗಿದೆ. ಇದುವೇ ಕಮಲ ಪಡೆಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದಾಗಿದೆ ಎಂದು ಅಂದಾಜಿಸಲಾಗುತ್ತಿದೆ.
1962ರಲ್ಲಿ ಏಕಸದಸ್ಯ ಲೋಕಸಭಾ ಕ್ಷೇತ್ರವಾದ ನಂತರ ಈವರೆಗೆ ನಡೆದಿರುವ 15 ಚುನಾವಣೆಗಳಲ್ಲಿ 11 ಬಾರಿ ಕಾಂಗ್ರೆಸ್ ಜಯ ಗಳಿಸಿದೆ. ಬಿಜೆಪಿಗೆ 4 ಬಾರಿ ಗೆದ್ದಿರುವ ಇತಿಹಾಸವಿದೆ. ಕಳೆದ ಎರಡು ಸಲ ಸತತವಾಗಿ ಕಮಲ ಅರಳಿದೆ.

ನೆಲ ವಿಸ್ತರಿಸಿಕೊಂಡ ಕೈ:
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಮೈಸೂರು ಜಿಲ್ಲೆಯ ನರಸಿಂಹರಾಜ, ಕೃಷ್ಣರಾಜ, ಚಾಮರಾಜ, ಚಾಮುಂಡೇಶ್ವರಿ, ಹುಣಸೂರು ಮತ್ತು ಪಿರಿಯಾಪಟ್ಟಣ, ಕೊಡುಗು ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರ ಒಳಪಟ್ಟಿವೆ. ಈ 8 ಕ್ಷೇತ್ರಗಳ ಪೈಕಿ ನರಸಿಂಹರಾಜ, ಚಾಮರಾಜ, ಪಿರಿಯಾಪಟ್ಟಣ, ಮಡಿಕೇರಿ, ವಿರಾಜಪೇಟೆ ಕ್ಷೇತ್ರಗಳಲ್ಲಿ ಈ ಸಲ ಗೆದ್ದಿರುವ ಕಾಂಗ್ರೆಸ್ ತನ್ನ ನೆಲೆಯನ್ನು ವಿಸ್ತರಿಸಿಕೊಂಡಿದೆ. ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಂಡಿರುವ ಕೈ ಪಡೆ ಹೊಸ ಚೈತನ್ಯ ಪಡೆದುಕೊಂಡಿದೆ.

ಬಿಜೆಪಿ ಕೃಷ್ಣರಾಜ ಕ್ಷೇತ್ರದಲ್ಲಿ ಮಾತ್ರ ಜಯ ಕಂಡಿದೆ. ಚಾಮರಾಜ, ಮಡಿಕೇರಿ, ವಿರಾಜಪೇಟೆ ಕ್ಷೇತ್ರಗಳನ್ನು ಕಳೆದುಕೊಂಡು ಕಮಲ ಆಘಾತಕ್ಕೆ ಒಳಗಾಗಿದೆ. 2 ದಶಕದಿಂದ ಕೊಡಗು ಜಿಲ್ಲೆ ಬಿಜೆಪಿಯ ಭದ್ರಕೋಟೆ ಆಗಿತ್ತು. ಅದೀಗ ಛಿದ್ರವಾಗಿದೆ.
ಜೆಡಿಎಸ್ ಹುಣಸೂರು, ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಮಾತ್ರ ಜಯ ಸಾಧಿಸಿದೆ. ಪಿರಿಯಾಪಟ್ಟಣ ಕ್ಷೇತ್ರವನ್ನು ಜೆಡಿಎಸ್ ಕಳೆದುಕೊಂಡು ಸೊರಗಿದೆ.

ಕೈಗೆ ಸರ್ಕಾರದ ಬಲ:
ರಾಜ್ಯದಲ್ಲಿ ತನ್ನ ಸರ್ಕಾರ ರಚನೆಯಾಗುತ್ತಿರುವುದರಿಂದ ಕಾಂಗ್ರೆಸ್‌ಗೆ ಇನ್ನಷ್ಟು ಆನೆ ಬಲ ಬಂದಿದೆ. ಅಧಿಕಾರವನ್ನು ಕಳೆದುಕೊಂಡಿರುವ ಬಿಜೆಪಿ ಇಲ್ಲಿ ದುರ್ಬಲಗೊಂಡಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದ್ದು, ಇಲ್ಲಿ ಜಯ ಸಾಧಿಸುವ ಪಕ್ಷಗಳಿಗೆ ಸ್ಥಳೀಯವಾಗಿ ಸಂಘಟನಾಶಕ್ತಿ ಧಕ್ಕಲಿದೆ. ಸ್ಥಳೀಯ ಸಂಸ್ಥೆಗಳ ಮೇಲೆ ಕೈ-ದಳ ಹಿಡಿತ ಹೆಚ್ಚು. ಇಲ್ಲಿ ಬಿಜೆಪಿ ನಿಯಂತ್ರಣ ಕಡಿಮೆ ಇದೆ. ಇದು ಸಹ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು.

2019ರಲ್ಲಿ ಕಮಲಕ್ಕೆ ಪ್ರತಿ ಕ್ಷೇತ್ರದಲ್ಲೂ ಮುನ್ನಡೆ:
2019ರ ಲೋಕಸಭಾ ಚುನಾವಣೆಯಲ್ಲಿ ವಿರಾಜಪೇಟೆ, ಮಡಿಕೇರಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದ ಕಾರಣಕ್ಕೆ ಬಿಜೆಪಿಗೆ ಕೊಡಗು ಜಿಲ್ಲೆ ಹೆಚ್ಚಿನ ಲೀಡ್ ಕೊಟ್ಟಿತ್ತು. ಜೆಡಿಎಸ್ ಶಾಸಕರಿದ್ದ ಪಿರಿಯಾಪಟ್ಟಣ, ಹುಣಸೂರು, ಕಾಂಗ್ರೆಸ್ ಶಾಸಕರಿದ್ದ ನರಸಿಂಹರಾಜ ಕ್ಷೇತ್ರದಲ್ಲಿ ಕೈಗೆ ಕೊಂಚ ಮುನ್ನಡೆ ಸಿಕ್ಕಿತ್ತು. ಜೆಡಿಎಸ್ ಶಾಸಕರಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಮಲಕ್ಕೆ ಭಾರಿ ಮುನ್ನಡೆ ದೊರೆತಿತ್ತು. ಉಳಿದಂತೆ, ಕೃಷ್ಣರಾಜ, ಚಾಮರಾಜ ವಿಧಾನಸಭಾ ಕ್ಷೇತ್ರಗಳಲ್ಲಿ ಸಹ ಬಿಜೆಪಿ ಮುನ್ನಡೆ ಗಳಿಸುವುದರೊಂದಿಗೆ ಗೆಲುವಿನ ಅಂತರ ಹಿಗ್ಗಲು ಸಾಧ್ಯವಾಗಿತ್ತು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವಿದ್ದ ಕಾರಣಕ್ಕೆ ಆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಹಾಕಿರಲಿಲ್ಲ. ಅದು ಬೆಂಬಲ ನೀಡಿದ್ದರೂ ಕೈಗೆ ಸೋಲಾಗಿತ್ತು.

ಜಯದ ಟಾನಿಕ್, ಸೋಲಿನ ಕಷಾಯ:
2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್.ವಿಶ್ವನಾಥ್ ಅವರನ್ನು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ 31,608 ಮತಗಳ ಅಂತರದಲ್ಲಿ ಮಣಿಸಿದ್ದರು. 2019ರ ಚುನಾವಣೆಯಲ್ಲಿ 1,38,647 ಮತಗಳ ಅಂತರದಿಂದ ಪ್ರತಾಪ್ ಸಿಂಹ ಪುನಾರಾಯ್ಕೆಯಾಗಿದ್ದರು. ಪ್ರತಾಪ್ ಸಿಂಹ 6,88,974 ಮತ ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ 5,50,327 ಮತ ಪಡೆದಿದ್ದರು. ಕಳೆದ ಸಲ ಪಕ್ಷದ ಬಲವರ್ಧನೆಯಿಂದ ಬಿಜೆಪಿಗೆ ಜಯದ ಟಾನಿಕ್ ದೊರೆತಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ 8 ಸ್ಥಾನಗಳಲ್ಲಿ 3 ಸ್ಥಾನಕ್ಕೆ ಕುಸಿದಿದ್ದ ಕಾಂಗ್ರೆಸ್‌ಗೆ ಸೋಲಿನ ಕಹಿ ಕಷಾಯವಾಗಿ ದೊರೆತಿತ್ತು. ಶಾಸಕರ ಸಂಖ್ಯಾಬಲವು ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂಬುದಕ್ಕೆ ಇದು ಸಾಕ್ಷಿ.

2014ರ ಲೋಕಸಭಾ ಚುನಾವಣೆ
ಕ್ಷೇತ್ರಗಳು ಪ್ರತಾಪ್ ಸಿಂಹ(ಬಿಜೆಪಿ) ಎಚ್.ವಿಶ್ವನಾಥ್(ಜೆಡಿಎಸ್) ಚಂದ್ರಶೇಖರಯ್ಯ (ಜೆಡಿಎಸ್)
ಮಡಿಕೇರಿ 81,666 56,713 13,010
ವೀರಾಜಪೇಟೆ 77,611 59,866 4,285
ಪಿರಿಯಾಪಟ್ಟಣ 37,101 56,458 30,246
ಹುಣಸೂರು 48,582 64,990 34,870
ಚಾಮುಂಡೇಶ್ವರಿ 65,469 73,733 32,676
ಕೃಷ್ಣರಾಜ 79,648 45,081 4,657
ಚಾಮರಾಜ 72,492 39,302 10,110
ನರಸಿಂಹರಾಜ 39,974 75,492 8,603
ಒಟ್ಟು 5,03,908 4,72,300 1,38,587

2019ರ ಲೋಕಸಭಾ ಚುನಾವಣೆ
ಕ್ಷೇತ್ರಗಳು ಪ್ರತಾಪ್ ಸಿಂಹ(ಬಿಜೆಪಿ) ವಿಜಯಶಂಕರ್(ಕಾಂಗ್ರೆಸ್)
ಮಡಿಕೇರಿ 1,02,161 58,185
ವಿರಾಜಪೇಟೆ 96,235 54,738
ಪಿರಿಯಾಪಟ್ಟಣ 53,465 77,247
ಹುಣಸೂರು 78,986 82,784
ಚಾಮುಂಡೇಶ್ವರಿ 1,11,365 89,215
ಕೃಷ್ಣರಾಜ 96,100 44,026
ಚಾಮರಾಜ 90,531 44,480
ನರಸಿಂಹರಾಜ 56,262 98,241
ಒಟ್ಟು 6,88,974 5,50,327

Latest Posts

ಲೈಫ್‌ಸ್ಟೈಲ್