ಮೈಸೂರು: ಜೀವನಲ್ಲಿ ಏನನ್ನಾದರೂ ಸಾಧಿಸಬೇಕೆಂದಿದ್ದರೆ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಲೇಬೇಕು. ಯಾವುದೇ ಕ್ಷೇತ್ರದಲ್ಲಿ ಪ್ರಗತಿ ಹೊಂ ದಲು ಬಾಲ್ಯದಲ್ಲಿ ಕ್ರೀಡಾ ನೈಪುಣ್ಯತೆ ಹೊಂದಲು ಪ್ರತಿಯೊಬ್ಬ ಮಗುವಿಗೂ ಮುಕ್ತ ಅವಕಾಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾದುದು ಎಂದು ಭಾರತದ ಸಶಸ್ತ್ರ ಪಡೆಗಳ ನಿವೃತ್ತ ಗ್ರೂಪ್ ಕ್ಯಾಪ್ಟನ್ ಎ. ಚತುರ್ವೇದಿ ಹೇಳಿದರು.
ನಗರದ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್‌ನ ಕನಕದಾಸನಗರ ಹಾಗೂ ಆರ್.ಟಿ.ನಗರದ ಕ್ಯಾಂಪಸ್‌ಗಳು ಸಂಯುಕ್ತವಾಗಿ ಓವಲ್ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಪ್ರತಿಯೊಂದು ಮಗುವಿನಲ್ಲೂ ಒಬ್ಬೊಬ್ಬ ಪ್ರತಿಭಾವಂತನಿರುತ್ತಾನೆ. ಆ ಪ್ರತಿಭಾವಂತನನ್ನು ಹೊರತರಲು ಆ ವಿದ್ಯಾರ್ಥಿಯ ಆಸಕ್ತಿವಲಯವನ್ನು ಗುರುತಿಸಬೇಕು. ಈ ನಿಟ್ಟಿನಲ್ಲಿ ಜೀವನೋತ್ಸಾಹ ಸಾಧಿಸಲು ಕ್ರೀಡೆಯನ್ನು ಉತ್ತೇಜಿಸಬೇಕು ಎಂದರು.
ಶಾಲಾ ಹಂತದಲ್ಲಿ ಮಕ್ಕಳು ಕ್ರೀಡಾ ಸಾಧಕರಾಗಲು ಅವಕಾಶವಿರುತ್ತದೆ. ಆ ಅವಕಾಶಗಳ ಬಾಗಿಲು ತೆರೆದುಕೊಡಲು ಇಂತಹ ಕ್ರೀಡಾಕೂಟಗಳನ್ನು ಏರ್ಪಡಿಸುವುದು ಅತ್ಯಂತ ಪ್ರಶಂಸನೀಯ. ಯಾವುದೇ ಮಗುವೂ ಅಕ್ಷರವಂಚಿತರಾಗಬಾರದೆಂದು ಹೇಗೆ ಭಾವಿಸುತ್ತೇವೆಯೋ ಹಾಗೆಯೇ ಮಗುವಿಗೆ ಕ್ರೀಡಾ ಅವಕಾಶಗಳೂ ತಪ್ಪಬಾರದು ಎಂಬುದು ನೈಜ ಶಿಕ್ಷಣದ ಧ್ಯೇಯವಾಗಬೇಕು. ಈ ನಿಟ್ಟಿನಲ್ಲಿ ಅಕ್ಷರ ಜ್ಞಾನದ ಜತೆಗೆ ಮಗುವಿನ ಇತರ ಆಸಕ್ತಿಗಳ ಬಗ್ಗೆಯೂ ಹೆಚ್ಚು ಆಸ್ಥೆ ವಹಿಸಿ ಶಿಕ್ಷಣ ನೀತಿ ರೂಪಿಸಿಕೊಂಡಿರುವ ನೈಪುಣ್ಯ ವಿದ್ಯಾಸಂಸ್ಥೆಯ ಬದ್ಧತೆ ಪ್ರಶಂಸನೀಯ ಎಂದರು.
ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಸಿ. ವೆಂಕಟೇಶ್, ನೈಪುಣ್ಯ ಸಂಸ್ಥೆ ಅಧ್ಯಕ್ಷ ಆರ್.ರಘು, ಪ್ರಾಂಶುಪಾಲೆ ಶಾಂತಿನಿ ಜೆರಾಲ್ಡ್, ಸಾರ್ವಜನಿಕ ಸಂಪರ್ಕಾಧಿಕಾರಿ ಭಾವನಾ ಶ್ರೀಕಾಂತ್, ಶಿಕ್ಷಣ ವಿಭಾಗದ ಮುಖ್ಯಸ್ಥ ಜಿ.ಅಕ್ಷಯ್ ಹಾಗೂ ಇತರರು ಇದ್ದರು.