ಮಂಜುನಾಥ ಟಿ.ಭೋವಿ ಮೈಸೂರು
ಸಾಂಸ್ಕೃತಿಕ ಹಿರಿಮೆಯ ಮೈಸೂರು ಜಿಲ್ಲೆಯಲ್ಲಿ ಚಿತ್ರನಗರಿ ನಿರ್ಮಾಣ ಯಾವಾಗ?
ಜಿಲ್ಲೆಯ ಜನರು ಸೇರಿದಂತೆ ನಾಡಿನ ಸಿನಿ ಪ್ರೇಮಿಗಳು ಕೇಳುತ್ತಿರುವ ಪ್ರಶ್ನೆ ಇದು.
ವರ್ಷಗಳು ಉರುಳಿದರೂ ಈ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಬರೀ ಆಶ್ವಾಸನೆಯ ಗಾಳಿಗೋಪುರದಲ್ಲಿ ಫಿಲ್ಮ್ ಸಿಟಿಯನ್ನು ಕಟ್ಟಿಕೊಡಲಾಗುತ್ತಿದೆಯೇ ಹೊರತು, ವಾಸ್ತವಿಕ ನೆಲೆಗಟ್ಟಿನಲ್ಲಿ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಇದು ಜನರಲ್ಲಿ ನಿರಾಸೆ ಹಾಗೂ ಚಲನಚಿತ್ರ ಕಲಾವಿದರಲ್ಲೂ ಬೇಸರ ಮೂಡಿಸಿದೆ.
ದೇಶದಲ್ಲಿ ಸಿನಿಮಾಗಳ ನಿರ್ಮಾಣದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ವರ್ಷಕ್ಕೆ ಸರಾಸರಿ 450 ಚಿತ್ರಗಳು ನಿರ್ಮಾಣವಾಗುತ್ತವೆ. ಚಿತ್ರಗಳ ತವರೂರು ಕರುನಾಡು. 1970ರ ದಶಕದಲ್ಲಿ ಬೆಂಗಳೂರಿನಲ್ಲಿ ಫಿಲಂ ಸ್ಟುಡಿಯೋ ನಿರ್ಮಾಣ ಮಾಡಲಾಯಿತು. ದಶಕಗಳ ಬಳಿಕ ಚಿತ್ರನಗರಿ ಕನಸು ಗರಿಗೆದರಿತು. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯಲ್ಲಿ ಸಿನಿ ನಗರಿ ನಿರ್ಮಾಣ ಮಾಡಲಾಗುವುದೆಂದು ಘೋಷಣೆ ಮಾಡಿದ್ದರು. ತದನಂತರ ಇದು ನನೆಗುದಿಗೆ ಬಿದ್ದಿತು.
2020-21ನೇ ಸಾಲಿನ ಬಜೆಟ್‌ನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಫಿಲಂ ಸಿಟಿ ನಿರ್ಮಿಸುವುದಾಗಿ ಘೋಷಣೆ ಮಾಡಲಾಯಿತು. ಜಿಲ್ಲೆಯ ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದಲ್ಲಿ 110 ಎಕರೆಯಲ್ಲಿ ಫಿಲಂ ಸಿಟಿ ನಿರ್ಮಾಣಕ್ಕೆ ಉದ್ದೇಶಿಸಲಾಯಿತು.
ಕಡತಗಳ ಅಲೆದಾಟ:
ಈ ಯೋಜನೆಯ ನಿರ್ವಹಣೆ ಇಲಾಖೆಯಿಂದ ಇಲಾಖೆಗೆ ಸುತ್ತಿಕೊಂಡು ಬಂದಿದೆ. ಮೊದಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಇದನ್ನು ನೀಡಲಾಯಿತು. ಬಳಿಕ ಪ್ರವಾಸೋದ್ಯಮ ಇಲಾಖೆಗೆ ವಹಿಸಲಾಗಿತ್ತು. ಮತ್ತೆ ಯೋಜನೆಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ಮತ್ತೆ ವಾರ್ತಾ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.
ಜಾಗ ವರ್ಗಾವಣೆ ಆಗಿಲ್ಲ:
ಹಿಮ್ಮಾವು ಗ್ರಾಮದಲ್ಲಿರುವ ಉದ್ದೇಶಿತ ಜಾಗವನ್ನು ಕಂದಾಯ ಇಲಾಖೆಯಿಂದ ವಾರ್ತಾ ಇಲಾಖೆಗೆ 30 ವರ್ಷ ಗುತ್ತಿಗೆ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಅದಕ್ಕಾಗಿ 96 ಕೋಟಿ ರೂ. ಪಾವತಿಸಬೇಕಾಗಿದೆ. ಇಷ್ಟು ಹಣ ಕಟ್ಟಲು ಸಾಧ್ಯವಾಗದ ಈ ಇಲಾಖೆಯು, ಈ ಹಣವನ್ನು ಮನ್ನಾ ಮಾಡಿ ಉಚಿತವಾಗಿ ಭೂಮಿಯನ್ನು ವರ್ಗಾವಣೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದೆ. ಇಲ್ಲಿಗೆ ಬಂದು ಇಡೀ ಯೋಜನೆ ನಿಂತಿದೆ. ಬಳಿಕ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.
ಹೇಳಿ ಮಾಡಿಸಿದಂಥ ತಾಣಗಳು:
ಸಿನಿಮಾಗಳ ಚಿತ್ರೀಕರಣಕ್ಕೆ ಮೈಸೂರು ನೆಚ್ಚಿನ ತಾಣವಾಗಿದೆ. ಇಲ್ಲಿನ ಸುತ್ತಮುತ್ತಲ ನೂರಕ್ಕೂ ಹೆಚ್ಚು ತಾಣಗಳಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಹಲವು ಭಾಷೆಗಳ ನೂರಾರು ಸಿನಿಮಾಗಳ ಚಿತ್ರೀಕರಣ ನಡೆದಿದೆ. ಇಲ್ಲಿಯ ಸಂಚಾರ ದಟ್ಟಣೆ ಮುಕ್ತ ರಸ್ತೆಗಳು, ರಾಜಪರಂಪರೆ ಹೊಂದಿರುವ ಅರಮನೆ, ಲಲಿತಮಹಲ್ ಹೋಟೆಲ್ ಇನ್ನಿತರ ಇತಿಹಾಸ ಪ್ರಸಿದ್ಧ ಸ್ಥಳಗಳು, ಚಾಮುಂಡಿಬೆಟ್ಟ, ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಸ್ಥಾನ, ಮೃಗಾಲಯ, ಮೈಸೂರು ವಿಶ್ವವಿದ್ಯಾಲಯ, ಮಹಾರಾಜ ಕಾಲೇಜು, ಕುಕ್ಕರಹಳ್ಳಿ ಕೆರೆ, ಬಲಮುರಿ, ಎಡಮುರಿ, ಕೆಆರ್‌ಎಸ್, ತಲಕಾಡು, ಸೋಮನಾಥಪುರ, ಶಿವನಸಮುದ್ರ, ಶ್ರೀರಂಗಪಟ್ಟಣ, ನದಿಗಳು, ಬೆಟ್ಟಗುಡ್ಡಗಳು, ಅರಣ್ಯದ ಹಸಿರಿನ ಸಿರಿಯಂತಹ ಅತ್ಯುತ್ತಮ ತಾಣಗಳು ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಿವೆ. ಹೀಗಾಗಿ, ಈಗಲೂ ನಿತ್ಯ ಒಂದಲ್ಲ ಒಂದು ಸಿನಿಮಾ, ಧಾರವಾಹಿಗಳ ಚಿತ್ರೀಕರಣ ಮೈಸೂರಿನ ಸುತ್ತಲೂ ನಡೆಯುತ್ತವೆ. ಹೀಗಾಗಿ, ಮೈಸೂರು ಭಾಗದಲ್ಲಿ ಚಿತ್ರನಗರಿ ನಿರ್ಮಿಸಬೇಕೆಂಬುದು ಕನ್ನಡ ಸಿನಿಮಾ ಕ್ಷೇತ್ರದ ಬಹುಕಾಲದ ಒಲವು ಹಾಗೂ ಒತ್ತಾಯ ಕೂಡ ಆಗಿದೆ. ಇದಕ್ಕೆ ಸರ್ಕಾರ ಕಿವಿಗೊಡುತ್ತಿಲ್ಲ.
ಜನತೆಯ ಒತ್ತಾಸೆ:
ಹಳೇ ಮೈಸೂರು ಭಾಗ ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಮೇರುನಟ ಡಾ.ರಾಜ್‌ಕುಮಾರ್ ಹಳೇ ಮೈಸೂರಿಗೆ ಸೇರಿದ್ದ ಚಾಮರಾಜನಗರ ಜಿಲ್ಲೆಯವರು. ಹಿರಿಯ ನಟರಾದ ಡಾ.ವಿಷ್ಣುವರ್ಧನ್, ಡಾ.ಅಂಬರೀಷ್, ನಿರ್ದೇಶಕ ಪುಟ್ಟಣ್ಣ ಕಣಗಾಲ್, ಹಿರಿಯ ಪೋಷಕ ನಟ ಕೆ.ಎಸ್.ಅಶ್ವಥ್ ಅವರಲ್ಲದೆ, ಇಂದಿನ ಯುವ ಪ್ರತಿಭೆಗಳೂ ಮೈಸೂರು ಮೂಲದವರಾಗಿದ್ದಾರೆ. ಹೀಗೆ ಕನ್ನಡಕ್ಕಾಗಿ ತನ್ನದೇ ಕಾಣಿಕೆ ನೀಡಿರುವ ಮೈಸೂರಿನಲ್ಲೇ ಚಿತ್ರನಗರಿ ನಿರ್ಮಾಣವಾಗಬೇಕು ಎಂಬುದು ಜನತೆಯ ಒತ್ತಾಯವಾಗಿದೆ.
ಪ್ರವಾಸೋದ್ಯಮಕ್ಕೂ ಅನುಕೂಲ:
ಪಾರಂಪರಿಕ ನಗರಿ ಮೈಸೂರಿಗೆ ಪ್ರತಿವರ್ಷ ಅಂದಾಜು 50 ಲಕ್ಷಕ್ಕೂ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಫಿಲಂ ಸಿಟಿ ಸ್ಥಾಪನೆ ಮಾಡಿದರೆ ಸ್ಥಳೀಯ ಪ್ರವಾಸೋದ್ಯಮಕ್ಕೆ ಮತ್ತಷ್ಟು ಚೈತನ್ಯ ದೊರೆಯಲಿದೆ. ಈ ಎಲ್ಲ ಕಾರಣಗಳಿಂದ ಈ ಕುರಿತು ತ್ವರಿತ ಕ್ರಮ ವಹಿಸಬೇಕಾಗಿದೆ.
ಸ್ಥಳಾಂತರಕ್ಕೂ ಹುನ್ನಾರ
ಚಿತ್ರನಗರಿ ಸ್ಥಳಾಂತರಕ್ಕೂ ಹುನ್ನಾರ ನಡೆದಿತ್ತು. ರಾಜಕೀಯ ಸ್ವಪ್ರತಿಷ್ಠೆಗಾಗಿ ಬೆಂಗಳೂರು ಮತ್ತು ರಾಮನಗರಕ್ಕೆ ವರ್ಗಾವಣೆ ಮಾಡಲು ತೆರೆಮರೆಯಲ್ಲಿ ಲಾಬಿ ಜೋರಾಗಿತ್ತು. ಆದರೆ, ಸದ್ಯಕ್ಕೆ ಇದಕ್ಕೆಲ್ಲ ತೆರೆ ಎಳೆದು, ಮೈಸೂರಿನಲ್ಲೇ ಚಿತ್ರನಗರಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಮೈಸೂರಿನಲ್ಲಿ ಚಿತ್ರನಗರಿಯ ಕಾರ್ಯವನ್ನು ಶೀಘ್ರವೇ ಪ್ರಾರಂಭಿಸಬೇಕು. ಇದರಿಂದ ಈ ಪ್ರದೇಶದ ಜನರಿಗೆ ಉದ್ಯೋಗ ದೊರೆತು ಸುಮಾರು 25 ಸಾವಿರ ಕುಟುಂಬಗಳಿಗೆ ಜೀವನೋಪಾಯವಾಗಲಿದೆ. ಚಿತ್ರೋದ್ಯಮಕ್ಕೂ ಅನುಕೂಲವಾಗಲಿದೆ.
ಎಸ್.ವಿ.ರಾಜೇಂದ್ರಸಿಂಗ್ ಬಾಬು, ನಿರ್ದೇಶಕ
ಚಿತ್ರನಗರಿ ನಿರ್ಮಾಣಕ್ಕಾಗಿ ಮೈಸೂರು ಜಿಲ್ಲೆಯ ಹಿಮ್ಮಾವು ಗ್ರಾಮದ ಬಳಿ ಜಾಗವನ್ನು ನೀಡಬೇಕು ಎಂದು ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆ ಕಡೆಯಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಸಿ.ಆರ್.ನವೀನ್
ಉಪನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು