ಸಿನಿಮಾ

ಮೈಸೂರಿನಲ್ಲಿ ಕೈಗಾರಿಕಾ ಟೌನ್‌ಶಿಪ್ ನಿರ್ಮಾಣ ಮಾಡಿ

ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ತ.ಮ.ವಿಜಯಭಾಸ್ಕರ್ ಅವರು ಕೈಗಾರಿಕಾ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ನಗರದಲ್ಲಿ ಮಂಗಳವಾರ ಸಭೆ ನಡೆಸಿ ಸಮಾಲೋಚಿಸಿದರು.

ಮೈಸೂರು ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಸಣ್ಣ ಕೈಗಾರಿಕೆಗಳ ಅನುಕೂಲಕ್ಕಾಗಿ ಪ್ರತ್ಯೇಕ ಕಾಯ್ದೆ, ಕೈಗಾರಿಕಾ ಟೌನ್‌ಶಿಪ್ ನಿರ್ಮಾಣ, ಟ್ರಕ್ ಟರ್ಮಿನಲ್, ಡಂಪಿಗ್ ಯಾರ್ಡ್ ಸ್ಥಾಪನೆ ಮಾಡಬೇಕು ಎಂದು ಕೈಗಾರಿಕೋದ್ಯಮಿಗಳು ಆಗ್ರಹಿಸಿದರು.

ಕೈಗಾರಿಕಾ ಇಲಾಖೆಯ ಆಡಳಿತದಲ್ಲಿರುವ ಲೋಪದೋಷಗಳು, ಕೈಗಾರಿಕೆ ಕಾರ್ಯನಿರ್ವಹಿಸಲು ಉಂಟಾಗುತ್ತಿರುವ ಸಮಸ್ಯೆ ಕುರಿತು ತೆರೆದಿಟ್ಟರು.

ಜಿಲ್ಲೆಯಲ್ಲಿ ಹಲವು ಕೈಗಾರಿಕಾ ಪ್ರದೇಶಗಳಿವೆ. ಕೈಗಾರಿಕಾ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಬೇಕಿದೆ. ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿಕೆ ಮಾಡಲು ಬರುವ ಕಂಪನಿಗಳಿಗೆ ಕೈಗಾರಿಕಾಸ್ನೇಹಿ ವಾತಾವರಣ ನಿರ್ಮಾಣವಾಗಬೇಕಿದೆ ಎಂದು ಉದ್ದಿಮೆದಾರರು ಮನವಿ ಮಾಡಿದರು.

ಕೈಗಾರಿಕಾ ತೆರಿಗೆ ಹೊರೆ ಇಳಿಸಿ, ಮೂಲಸೌಲಭ್ಯ ಕಲ್ಪಿಸಬೇಕು. ಕೈಗಾರಿಕೆಗಳಿಗೆ ಸುಲಭವಾಗಿ ನಿವೇಶನ ದೊರೆಯುವಂತೆ ವ್ಯವಸ್ಥೆಯನ್ನು ಸರಳೀಕರಣಗೊಳಿಸಬೇಕು ಎಂದು ಆಗ್ರಹಿಸಿದರು.
ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಮಾತನಾಡಿ, ಮೈಸೂರಿನಲ್ಲಿ ರಫ್ತು ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿ ಕಳೆದ 5 ವರ್ಷಗಳಿಂದಲೂ ನನೆಗುದಿಗೆ ಬಿದ್ದಿದ್ದು, ಇದನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ ವಿವಿಧ ಕೈಗಾರಿಕೆಗಳಲ್ಲಿ ಉತ್ತರಪ್ರದೇಶ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಗುರುತಿನ ಚೀಟಿಯನ್ನು ನೀಡಿದರೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಕೆ.ಬಿ.ಲಿಂಗರಾಜು ಮಾತನಾಡಿ, ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಲಭ್ಯ ಕೊರತೆ ಇದ್ದು, ತೆರಿಗೆ ಹೊರೆ ಹತ್ತುಪಟ್ಟು ಹೆಚ್ಚಾಗಿದೆ. ತೆರಿಗೆ ಹೊರೆಯನ್ನು ಇಳಿಸಬೇಕಿದೆ ಎಂದು ಒತ್ತಾಯಿಸಿದರು.

ಕೈಗಾರಿಕೋದ್ಯಮದಾರರ ವಿವಿಧ ಸಲಹೆ, ಸೂಚನೆಯನ್ನು ಆಲಿಸಿದ ವಿಜಯಭಾಸ್ಕರ್, ಕೈಗಾರಿಕೆ ಸಮಸ್ಯೆ-ಬೇಡಿಕೆ ಕುರಿತು ಅಗತ್ಯ ಕ್ರಮ ವಹಿಸುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಆಯೋಗದ ಸದಸ್ಯ ಪ್ರಸಾದ್, ಜಿಲ್ಲಾ ಕೈಗಾರಿಕಾ ಸಂಘದ ಜಂಟಿ ನಿರ್ದೇಶಕ ಟಿ.ದಿನೇಶ್ ಸೇರಿದಂತೆ ಹೆಬ್ಬಾಳು, ನಂಜನಗೂಡು, ಕಡಕೊಳ, ಚಾಮರಾಜನಗರ ಕೈಗಾರಿಕಾ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Latest Posts

ಲೈಫ್‌ಸ್ಟೈಲ್