ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ, ನವೋದಯ ಕ್ರಿಕೆಟ್ ಕ್ಲಬ್ ಮತ್ತು ಜೈ ಹಿಂದ್ ಕ್ರಿಕೆಟ್ ಕಬ್ ಸಹಯೋಗದಲ್ಲಿ ‘ಲೆಜೆಂಡ್ಸ್ ಪ್ರೀಮಿಯರ್ ಲೀಗ್ ಟಿ10 ಕ್ರಿಕೆಟ್’ ಪಂದ್ಯಾವಳಿಯನ್ನು ಮೇ 20 ಮತ್ತು 21ರಂದು ಆಯೋಜಿಸಲಾಗಿದ್ದು, ನಗರದ ಎಸ್‌ಡಿಎನ್‌ಆರ್‌ಡಬ್ಲುೃ ಮತ್ತು ಎಸ್‌ಜೆಸಿಇ ಮೈದಾನದಲ್ಲಿ ನಡೆಯಲಿದೆ.
ಮೈಸೂರು, ಬೆಂಗಳೂರು, ಶಿವಮೊಗ್ಗ, ತುಮಕೂರು ತಂಡಗಳು ಮತ್ತು ಕರ್ನಾಟಕದ ಉಳಿದ ಭಾಗಗಳಿಂದ ಸಂಯೋಜಿತ ತಂಡವೂ ಪಾಲ್ಗೊಳ್ಳಲಿವೆ. ಕ್ರಿಕೆಟ್ ಆಟಗಾರರು ತಮ್ಮನ್ನು ತಾವು ಸದೃಢರಾಗಿಟ್ಟುಕೊಳ್ಳಬೇಕು. ಜತೆಗೆ, ಕ್ರಿಕೆಟ್ ಬೆಳವಣಿಗೆಗೆ ಕೊಡುಗೆ ನೀಡಿ ಯುವಕರಿಗೆ ಸ್ಫೂರ್ತಿ ನೀಡಬೇಕೆಂಬ ಕಾರಣದಿಂದ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಲೀನ್‌ನ ಅಧ್ಯಕ್ಷರೂ ಆದ ಮೈವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪಿ. ಕೃಷ್ಣಯ್ಯ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಣಜಿ ಟ್ರೋಫಿ, ಕರ್ನಾಟಕ ರಾಜ್ಯ ಮೈಸೂರು ವಿಭಾಗ ಮತ್ತು ವಿಶ್ವವಿದ್ಯಾಲಯ ಕ್ರಿಕೆಟ್ ತಂಡಗಳನ್ನು ಪ್ರತಿನಿಧಿಸಿರುವ ಸುಮಾರು 100 ಕ್ರಿಕೆಟಿಗರು ಈ ಎರಡು ದಿನಗಳ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮೇ 20ರಂದು ಬೆಳಗ್ಗೆ 8ಕ್ಕೆ ಮೈವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಟೂರ್ನಿ ಉದ್ಘಾಟಿಸುವರು. ಕೆಎಸ್‌ಸಿಎ ಸಂಸ್ಥೆಯ ಮೈಸೂರು ವಲಯದ ಸಂಚಾಲಕ ಆರ್.ಕೆ.ಹರಿಕೃಷ್ಣಕುಮಾರ್ ಪಾಲ್ಗೊಳ್ಳಲಿದ್ದಾರೆ. ಮೇ 21ರಂದು ಸಂಜೆ 4ರಂದು ವಿಜೇತ ತಂಡಕ್ಕೆ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.
ಲೀಗ್ ಸಂಘಟನಾ ಸಮಿತಿಯ ಸದಸ್ಯರಾದ ಎಂ.ಆರ್. ಆನಂದ್, ಡಾ.ಮನ್ಸೂರ್ ಅಹಮದ್, ಎ.ಸುಧೀಂದ್ರ, ಡಾ.ಕೃಷ್ಣಕುಮಾರ್ ಇದ್ದರು.