ಮೇ 28ರಿಂದ ಜಿಲ್ಲಾ ಮಟ್ಟದ ಫುಟ್ಬಾಲ್​ ಪಂದ್ಯಾವಳಿ

ಮಡಿಕೇರಿ: ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ವತಿಯಿಂದ ಜಿಲ್ಲಾ ಮಟ್ಟದ ಪುಟ್ಬಾಲ್ ಪಂದ್ಯಾಟ ಮೇ.28ರಿಂದ ಜೂ.3 ರವರೆಗೆ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಸಂಸ್ಥೆ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ಫುಟ್ಬಾಲ್ ಕ್ರೀಡೆಯನ್ನು ಬೆಳೆಸುವ ಉದ್ದೇಶದಿಂದ ಜಿಲ್ಲೆಯ ತಾಲೂಕುಗಳಲ್ಲಿ ಲೀಗ್ ಪಂದ್ಯಾವಳಿ ನಡೆಸಲು ತೀರ್ಮಾನಿಸಲಾಗಿದೆ. ಅಂತೆಯೇ ಈ ಬಾರಿಯ ಪಂದ್ಯಾವಳಿಯಲ್ಲಿ ಜಿಲ್ಲೆಯಿಂದ ರಾಜ್ಯ ಸಂಸ್ಥೆಗೆ ನೋಂದಾಣಿಗೊಂಡ 16 ತಂಡಗಳು ಭಾಗವಹಿಸಲಿವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಂದ್ಯಾವಳಿಯು 4 ವಿಭಾಗದಲ್ಲಿ ನಡೆಯಲಿದೆ. ಪ್ರತಿ ಗುಂಪಿನಿಂದ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶ ಪಡೆಯಲಿದೆ. ಲೀಗ್ ಹಂತದಲ್ಲಿ 24 ಪಂದ್ಯ, ನಾಕೌಟ್ ಮಾದರಿಯಲ್ಲಿ 7 ಪಂದ್ಯ ಸೇರಿದಂತೆ ಒಟ್ಟು31 ಪಂದ್ಯಗಳು ನಡೆಯಲಿದೆ. ಕೊಡಗಿನಿಂದ ಅರ್ಹತೆ ಪಡೆದ ರಾಜ್ಯಮಟ್ಟದ ತೀರ್ಪುಗಾರರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಿರ್ಧೇಶಕ ಈಶ್ವರ್, ಪ್ರಮುಖರಾದ ಜಗದೀಶ್ ಉಪಸ್ಥಿತರಿದ್ದರು.