More

    ಮೇವು ಬೆಳೆಯಲು ಎಕರೆಗೆ ೩ ಸಾವಿರ ರೂ. ನೆರವು

    ಕೋಲಾರ: ಹಸಿರು ಮೇವು ಬೆಳೆಯಲು ನೀರಿನ ಸೌಲಭ್ಯವುಳ್ಳ ಹಾಲು ಉತ್ಪಾದಕರಿಗೆ ಪ್ರತಿ ಎಕರೆಗೆ ೩ ಸಾವಿರ ರೂ. ಪ್ರೋತ್ಸಾಹಧನ ಮತ್ತು ಶೇಕಡಾ ೫೦ರ ರಿಯಾಯಿತಿ ದರದಲ್ಲಿ ಮೇವಿನ ಬೀಜ ವಿತರಿಸಲು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (ಕೋಚಿಮುಲ್) ನಿರ್ಧಾರ ಕೈಗೊಂಡಿದೆ.
    ನಗರದ ಹೊರವಲಯದ ಕೋಲಾರ * ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಕೇಂದ್ರ ಕಚೇರಿಯಲ್ಲಿ ಅಧ್ಯಕ್ಷ ಕೆ.ವೈ.ನಂಜೇಗೌಡ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಿದ್ದ ಆಡಳಿತ ಮಂಡಳಿ ಸಭೆಯಲ್ಲಿ ಬರದ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರ ನೆರವಿಗೆ ಬರಲು ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
    ಉಭಯ ಜಿಲ್ಲೆಗಳ ಎಲ್ಲ ೧೧ ತಾಲೂಕುಗಳಲ್ಲಿ ಮುಂಗಾರು ಮಳೆ ವಿಫಲವಾಗಿದ್ದು, ಹೈನುಗಾರಿಕೆಯನ್ನೇ ನಂಬಿ ಬಹುತೇಕ ಕುಟುಂಬಗಳು ಬದುಕುತ್ತಿದ್ದು, ಮೇವಿಗಾಗಿ ತೊಂದರೆ ಅನುಭವಿಸುವಂತಾಗಿದೆ. ಒಕ್ಕೂಟದ ವ್ಯಾಪ್ತಿಯಲ್ಲಿ ಹಸಿರು ಮೇವು ಕೊರತೆಯಿಂದ ಮುಂದಿನ ದಿನಗಳಲ್ಲಿ ಹಾಲಿನ ಶೇಖರಣೆ ಕಡಿಮೆಯಾಗಬಹುದೆಂಬ ಕಾರಣಕ್ಕಾಗಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
    ಈ ಯೋಜನೆಯಡಿ ಒಕ್ಕೂಟದ ವ್ಯಾಪ್ತಿಯಲ್ಲಿ ಪ್ರತಿ ತಾಲೂಕಿಗೆ ಕನಿಷ್ಠ ೨೫೦ ಎಕರೆ, ಗರಿಷ್ಟ ಎಷ್ಟು ಬೇಕಾದರೂ ಬೆಳೆಯುವಂತೆ ಅವಕಾಶ ಕಲ್ಪಿಸಿಕೊಟ್ಟಿರುವುದರಿಂದ ಅಂದಾಜು ೨.೫ ಕೋಟಿವರೆಗೆ ವೆಚ್ಚವಾಗಲಿದೆ. ಯೋಜನೆಯನ್ನು ರಾಜ್ಯ ವ್ಯಾಪ್ತಿಯ ೧೪ ಹಾಲು ಒಕ್ಕೂಟಗಳ ಪೈಕಿ ಕೋಚಿಮುಲ್ ಮೊದಲ ಬಾರಿ ಜಾರಿಗೆ ತರಲಾಗುತ್ತಿದೆ ಎಂದು ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ತಿಳಿಸಿದ್ದಾರೆ.
    ಒಕ್ಕೂಟದ ಆಡಳಿತ ಮಂಡಳಿಯು ಹಾಲು ಉತ್ಪಾದಕರ ಸಮಾಜಿಕ ಮತ್ತು ಆರ್ಥಿಕ ಏಳ್ಗೆಗೆ ಕಾಲಕಾಲಕ್ಕೆ ಅವಶ್ಯವಿರುವ ಉಪಕರಣ, ಸೌಲಭ್ಯ ಮತ್ತು ರಿಯಾಯಿತಿ ದರದಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತ ಬಂದಿದೆ. ನೆರೆಯ ಹಾಲು ಒಕ್ಕೂಟಗಳಾದ ಬೆಂಗಳೂರು, ಮಂಡ್ಯ ಮತ್ತು ಹಾಸನ ನೀಡುತ್ತಿರುವ ಹಾಲು ಖರೀದಿ ದರಕ್ಕಿಂತ ಹೆಚ್ಚಿನ ದರ ಅಂದರೆ ೩೪.೪೦ ರೂ. ಪಾವತಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಅವರು ತಿಳಿಸಿದ್ದಾರೆ.
    ಸಭೆಯಲ್ಲಿ ಒಕ್ಕೂಟದ ಆಡಳಿತ ಮಂಡಲಿ ಸದಸ್ಯರಾದ ಕೆ.ಎನ್.ನಾಗರಾಜ್, ಮಂಜುನಾಥರೆಡ್ಡಿ, ಜೆ.ಕಾಂತರಾಜ್, ವೈ.ಬಿ.ಅಶ್ವಥನಾರಾಯಣ, ಆರ್.ಶ್ರೀನಿವಾಸ್, ಎನ್.ಸಿ.ವೆಂಕಟೇಶ್, ಎನ್.ಹನುಮೇಶ್, ಆದಿನಾರಾಯಣರೆಡ್ಡಿ, ಸುನಂದಮ್ಮ, ಕಾಂತಮ್ಮ, ಸಹಕಾರ ಸಂಘಗಳ ಉಪ ನಿಬಂಧಕಿ ಮಂಜುಳಾ, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಜಿ.ಟಿ.ರಾಮಯ್ಯ, ಕೆಎಂಎಫ್ ಪ್ರತಿನಿಧಿ ಡಾ.ಪಿ.ಬಿ.ಸುರೇಶ್, ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಗೋಪಾಲಮೂರ್ತಿ ಇದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 29

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts