ಮೈಸೂರು ಪ್ರಶ್ನೆ ಇಲ್ಲ, ಮಂಡ್ಯದಿಂದಲೇ ಸ್ಪರ್ಧೆ

ಶಿವಮೊಗ್ಗ: ಮೈತ್ರಿ ಧರ್ಮದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗಿದ್ದು, ಚಿತ್ರನಟ, ಪುತ್ರ ನಿಖಿಲ್ ಕುಮಾರಸ್ವಾಮಿ ರಾಜಕೀಯಕ್ಕೆ ಬರಲು ಇಚ್ಛಿಸಿದರೆ ಮಂಡ್ಯ ಕ್ಷೇತ್ರದಿಂದಲೇ ಕಣಕ್ಕಿಳಿಯುತ್ತಾರೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಕಾಂಗ್ರೆಸ್ ನಾಯಕರು ಈಗಾಗಲೇ ಜೆಡಿಎಸ್​ಗೆ ಮಂಡ್ಯ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಮೈತ್ರಿ ಧರ್ಮ ಮುರಿಯುವ ಪ್ರಶ್ನೆಯೇ ಇಲ್ಲ . ಸುಮಲತಾ ಅಂಬರೀಷ್ ಮಂಡ್ಯದಿಂದ ಸ್ಪರ್ಧೆ ಮಾಡುವುದಕ್ಕೂ ನಮಗೂ ಸಂಬಂಧವಿಲ್ಲ ಎಂದು ಹೇಳಿದರು.

ರೈತರಿಗೆ ಋಣಮುಕ್ತ ಪತ್ರ ವಿತರಣೆ ಮಾಡಲು ಭಾನುವಾರ ಇಲ್ಲಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರಿನಲ್ಲಿ ನಿಖಿಲ್​ಗೆ ಅಭಿಮಾನಿಗಳಿದ್ದಾರೆ. ಆದರೆ ಅವರು ಮೈಸೂರು ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ. ರಾಜಕೀಯ ಪ್ರವೇಶ ಮಾಡುವುದಾದರೆ ಅದು ಮಂಡ್ಯ ಕ್ಷೇತ್ರದಿಂದಲೇ ಎಂದು ಸೂಚ್ಯವಾಗಿ ಹೇಳಿದರು.

ಸುಮಲತಾ ಸ್ಪರ್ಧೆ ಮಾಡುತ್ತಾರೆ ಎಂಬ ಕಾರಣಕ್ಕೆ ಮಂಡ್ಯ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದ ಅವರು, ಪಲಾಯನವಾದ ಅಥವಾ ಹೇಡಿತನದ ರಾಜಕೀಯ ಮಾಡುವ ಪ್ರಶ್ನೆಯೇ ಇಲ್ಲ. ಯಾವುದೋ ಕಾರಣಕ್ಕೆ ಹೆದರಿ ಮಂಡ್ಯ ಬಿಟ್ಟು ಮೈಸೂರಿನಿಂದ ಸ್ಪರ್ಧೆ ಮಾಡುವುದಿಲ್ಲ ಎಂದರು.

ಮಂಡ್ಯದ ರಾಜಕೀಯ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಕಷ್ಟ ಕಾಲದಲ್ಲಿ ಮಂಡ್ಯ ಜನತೆ ಜೆಡಿಎಸ್ ಬೆಂಬಲಿಸಿದ್ದಾರೆ. ಮಂಡ್ಯಕ್ಕೆ ಯಾರ್ಯಾರು ಏನೇನು ಕೊಡುಗೆ ನೀಡಿದ್ದಾರೆ ಎಂಬುದು ಗೊತ್ತಿದೆ. ಸಿಎಂ ಕುಟುಂಬದ ಸದಸ್ಯರು ಮಂಡ್ಯದಿಂದ ಸ್ಪರ್ಧಿಸಿದರೆ ಅಭಿವೃದ್ಧಿಗೆ ಅನುಕೂಲ ಆಗುತ್ತದೆ ಎಂಬ ಆಶಾಭಾವನೆ ಸ್ಥಳೀಯರಿಗಿದೆ ಎಂದರು.

ಪ್ರಜ್ವಲ್, ನಿಖಿಲ್ ಸ್ಪರ್ಧೆ ತಪ್ಪೇನು?:ಐಎಎಸ್ ಅಧಿಕಾರಿಗಳ ಮಕ್ಕಳು ಐಎಎಸ್, ಡಾಕ್ಟರ್ ಮಕ್ಕಳು ಡಾಕ್ಟರ್ ಆಗುವಂತೆ ರಾಜಕಾರಣಿಗಳ ಮಕ್ಕಳು ರಾಜಕಾರಣ ಪ್ರವೇಶಿಸುವುದು ಸಹಜ ಎಂದ ಕುಮಾರಸ್ವಾಮಿ, ಗೌಡರ ಮೊಮ್ಮಕ್ಕಳಾದ ಪ್ರಜ್ವಲ್ ಮತ್ತು ನಿಖಿಲ್ ರಾಜಕಾರಣ ಪ್ರವೇಶ ಮಾಡುವುದನ್ನು ಸಮರ್ಥಿಸಿಕೊಂಡರು.

ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿ ರಾಜಕಾರಣಿಗಳಾಗುವುದು ಸಹಜ. ಎಚ್.ಡಿ.ದೇವೆಗೌಡರು ಈಗಾಗಲೇ ಪ್ರಜ್ವಲ್ ಕುರಿತು ಹೇಳಿದ್ದಾರೆ. ಜನತೆ ಮುಂದೆ ನೇರವಾಗಿ ಹೋಗುತ್ತೇವೆ. ನಮ್ಮ ಕುಟುಂಬ ಹಿಂಬಾಗಿಲ ರಾಜಕಾರಣ ಮಾಡುವುದಿಲ್ಲ. ಚುನಾವಣೆಯಲ್ಲಿ ಸೋತ ಸಂದರ್ಭಗಳಲ್ಲಿ ವಿಧಾನ ಪರಿಷತ್, ರಾಜ್ಯಸಭೆ ಬಾಗಿಲು ತಟ್ಟಿಲ್ಲ. ಅನೇಕ ಕುಟುಂಬಗಳಲ್ಲಿ ರಾಜಕಾರಣಿಗಳ ಪುತ್ರರು ರಾಜಕೀಯ ಪ್ರವೇಶ ಮಾಡಿದ್ದಾರೆ.