ಮೈಸೂರಿಗೆ ಜನಶತಾಬ್ದಿ ರೈಲು ವಿಸ್ತರಣೆ?

ಶಿವಮೊಗ್ಗ: ಶಿವಮೊಗ್ಗ-ಬೆಂಗಳೂರು ಮಧ್ಯೆ ಫೆ.3ರಿಂದ ಆರಂಭವಾಗುವ ಜನಶತಾಬ್ದಿ ಎಕ್ಸ್​ಪ್ರೆಸ್ ರೈಲು ಸಂಚಾರ ವಾರದಲ್ಲಿ ಎರಡು ದಿನ (ಮಂಗಳವಾರ-ಗುರುವಾರ) ಮೈಸೂರಿಗೂ ವಿಸ್ತರಣೆ ಆಗುವ ಸಾಧ್ಯತೆ ಇದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ತಾಲೂಕಿನ ಕುಂಸಿ ರೈಲ್ವೆ ನಿಲ್ದಾಣದಲ್ಲಿ 3 ಕೋಟಿ ರೂ. ವೆಚ್ಚದ ಮೇಲ್ಸೇತುವೆ ಮತ್ತು ಪ್ಲಾಟ್​ಫಾರಂ ಶೆಲ್ಟರ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸೋಮವಾರ, ಬುಧವಾರ ಮತ್ತು ಶುಕ್ರವಾರ ಜನಶತಾಬ್ದಿ ರೈಲು ಶಿವಮೊಗ್ಗ-ಬೆಂಗಳೂರು ನಡುವೆ ಸಂಚರಿಸಲಿದೆ. ಶನಿವಾರ ಬೆಳಗ್ಗೆ ಶಿವಮೊಗ್ಗದಿಂದ ಹೋಗುವಾರ ರೈಲು ಭಾನುವಾರ ರಾತ್ರಿ ಬೆಂಗಳೂರಿನಿಂದ ಹೊರಟು ಶಿವಮೊಗ್ಗ ತಲುಪಲಿದೆ. ಹಾಗಾಗಿ ಉಳಿದೆರಡು ದಿನವಾದ ಮಂಗಳವಾರ ಮತ್ತು ಗುರುವಾರ ಶಿವಮೊಗ್ಗ-ಮೈಸೂರಿಗೆ ಸೇವೆ ಕಲ್ಪಿಸುವಂತೆ ರೈಲ್ವೆ ಸಚಿವರು ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ರ್ಚಚಿಸಿದ್ದು, ಶೀಘ್ರ ಅನುಮೋದನೆ ಸಿಗಲಿದೆ ಎಂದರು.

ಕುಂಸಿ ನಿಲ್ದಾಣದಲ್ಲಿ ಎಲ್ಲ ಎಕ್ಸ್​ಪ್ರೆಸ್ ರೈಲುಗಳು ನಿಲುಗಡೆ ಮಾಡುವಂತೆ ರೈಲ್ವೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಈ ಭಾಗದ ಜನರಿಗೆ ತ್ವರಿತವಾಗಿ ಬೆಂಗಳೂರು-ಮೈಸೂರಿಗೆ ತೆರಳಲು ಅನುಕೂಲ ಆಗಲಿದೆ. ಈ ಬಗ್ಗೆ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್ಕುಮಾರ್ ಸಿಂಗ್ ಅವರಿಗೆ ಮನವಿ ಕೂಡ ಮಾಡಿಕೊಳ್ಳಲಾಗಿದೆ ಎಂದರು.

ಮುಖ್ಯರಸ್ತೆಯಿಂದ ರೈಲ್ವೆ ನಿಲ್ದಾಣದವರೆಗೆ ರಸ್ತೆ ಅಭಿವೃದ್ಧಿ ಮಂಜೂರಾಗಿದೆ. ಆದರೆ ರೈಲ್ವೆ ನಿಲ್ದಾಣದಿಂದ ಬಾಳೆಕೊಪ್ಪ ಮತ್ತು ಮರಸವರೆಗಿನ ರಸ್ತೆ ಅಭಿವೃದ್ಧಿ ಮತ್ತು ವಿದ್ಯುತ್ ದೀಪ ಅಳವಡಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಎಂಎಲ್​ಸಿ ಆರ್.ಪ್ರಸನ್ನಕುಮಾರ್ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ರಾಜಕಾರಣ ಮಾಡಬೇಕೇ ವಿನಾ ಅಭಿವೃದ್ಧಿ ಕಾರ್ಯಗಳಲ್ಲಿ ಮಾಡಬಾರದು. ಜನಶತಾಬ್ದಿ ರೈಲು, ಇಎಸ್​ಐ ಆಸ್ಪತ್ರೆ ನಿರ್ವಣದಿಂದ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು. ಕುಂಸಿ ಕ್ಷೇತ್ರದ ಜಿಪಂ ಸದಸ್ಯ ತಮ್ಮಡಿಹಳ್ಳಿ ನಾಗರಾಜ್ ಮತ್ತು ತಾಪಂ ಅಧ್ಯಕ್ಷ ಎಚ್.ಕೆ.ಮಹೇಶ್ ಮಾತನಾಡಿದರು. ಡಿಆರ್​ಎಂ ವಿಜಯಾ ಮತ್ತಿತರರಿದ್ದರು.

ಹೊಸಳ್ಳಿ ಏತ ನೀರಾವರಿ ಘೋಷಣೆ: ಕುಂಸಿ, ತಮ್ಮಡಿಹಳ್ಳಿ, ಮಂಡಘಟ್ಟ ಭಾಗದ ಕೆರೆಗಳಿಗೆ ನೀರು ಹರಿಸುವ ಹೊಸಳ್ಳಿ ತುಂಗಾ ಏತ ನೀರಾವರಿ ಯೋಜನೆ ಬಜೆಟ್​ನಲ್ಲಿ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಈಗಾಗಲೇ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ರ್ಚಚಿಸಿದ್ದು, 300 ಕೋಟಿ ರೂ. ವೆಚ್ಚದ ಯೋಜನೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಇದರಿಂದ ಈ ಭಾಗದ ರೈತರಿಗೆ ಮತ್ತಷ್ಟು ಅನುಕೂಲ ಆಗಲಿದೆ ಎಂದರು.