ಮೈತ್ರಿ ಇಲ್ಲದೆ ಕೈ-ತೆನೆ ಹೋರಾಟ

ಕೋಲಾರ: ಲೋಕ ಸಮರದ ನಂತರ ನಡೆದ ಕೋಚಿಮುಲ್ ಚುನಾವಣೆಯಲ್ಲಿ ಪ್ರಚಂಡ ಗೆಲವು ಸಾಧಿಸಿರುವ ಕಾಂಗ್ರೆಸ್​ಗೆ ಮೇ 29ರಂದು ನಡೆಯಲಿರುವ ಮೂರು ಸ್ಥಳೀಯ ಸಂಸ್ಥೆ ಚುನಾವಣೆ ಅಗ್ನಿ ಪರೀಕ್ಷೆಯಾಗಿದೆ.

ಬಂಗಾರಪೇಟೆ, ಶ್ರೀನಿವಾಸಪುರ ಹಾಗೂ ಮಾಲೂರು ಪುರಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಮೇಲುಗೈ ಸಾಧಿಸಿ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದ್ದರೆ, ಮೈತ್ರಿ ಇಲ್ಲದೆಯೇ ಗುರಿ ಸಾಧಿಸಲು ಜೆಡಿಎಸ್ ಹಾಗೂ ಒಂಟಿ ಹೋರಾಟದ ಮೂಲಕ ಶಕ್ತಿ ಸಾಬೀತಿಗೆ ಬಿಜೆಪಿ ಕಸರತ್ತು ನಡೆಸುತ್ತಿವೆ.

ಬಂಗಾರಪೇಟೆಯಲ್ಲಿ ಕುದುರದ ಮೈತ್ರಿ: ಬಂಗಾರಪೇಟೆ ಪುರಸಭೆ ಪ್ರಸ್ತುತ ಕೈ ವಶದಲ್ಲಿದೆ. ಮತ್ತೊಮ್ಮೆ ಅಧಿಪತ್ಯ ಸ್ಥಾಪಿಸಲು ಪಣತೊಟ್ಟಿದೆ. ಈ ಚುನಾವಣೆ ಸ್ಥಳೀಯ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮತ್ತು ಈಗಾಗಲೆ ಅವಿರೋಧ ಆಯ್ಕೆಯಾಗಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿಗೆ ಪ್ರತಿಷ್ಠೆ ಪ್ರಶ್ನೆಯಾಗಿದೆ.

ಜೆಡಿಎಸ್​ಗೆ ಕೈ ಜತೆ ಮೈತ್ರಿ ಮಾಡಿಕೊಳ್ಳಲು ಆಸೆ ಇತ್ತಾದರೂ ನಾರಾಯಣಸ್ವಾಮಿ ಒಪ್ಪದ ಕಾರಣ ಪ್ರತ್ಯೇಕವಾಗಿ ಸ್ಪರ್ಧಿಸುವಂತಾಗಿದೆ. ಕೈ 26 ವಾರ್ಡ್​ಗಳಲ್ಲಿ, ಜೆಡಿಎಸ್ 20 ಹಾಗೂ ಬಿಜೆಪಿ 21 ವಾರ್ಡ್​ಗಳಲ್ಲಿ ಅಭ್ಯರ್ಥಿ ಕಣಕ್ಕಿಳಿಸಿದ್ದು ಕೈನ 26 ಅಭ್ಯರ್ಥಿಗಳ ಪೈಕಿ ಎರಡು ವಾರ್ಡ್​ಗಳಲ್ಲಿ ಸಂಸದ ಮುನಿಯಪ್ಪ ಬೆಂಬಲಿಗರು ಬಂಡಾಯವಾಗಿ ಸ್ಪರ್ಧಿಸಿರುವುದು ಅಚ್ಚರಿ ಮೂಡಿಸಿದೆ.

ಕೆಲ ವಾರ್ಡ್​ಗಳಲ್ಲಿ ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳನ್ನು ಕಣದಿಂದ ದೂರ ಸರಿಸಲು ಕೈ ಪಡೆ ಯತ್ನಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಅವರಿಗೆ ಹುದ್ದೆ ಉಳಿಸಿಕೊಳ್ಳಲು ಬಂಗಾರಪೇಟೆ ಪುರಸಭೆ ಗೆಲುವು ಅನಿವಾರ್ಯ. ವಿಧಾನಸಭಾ ಚುನಾವಣೆಯಲ್ಲಿ ಕೈ ಅಭ್ಯರ್ಥಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದ ಜೆಡಿಎಸ್​ನ ಮಲ್ಲೇಶ್​ಬಾಬು ಲೋಕ ಸಮರದಲ್ಲಿ ಮುನಿಯಪ್ಪ ಪರ ಕೆಲಸ ಮಾಡಿ ಮೈತ್ರಿ ಧರ್ಮ ಪಾಲಿಸಿದ್ದಾರೆ. ಪುರಸಭೆ ಚುನಾವಣೆಗೆ 20 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಮುನಿಯಪ್ಪ ಜೆಡಿಎಸ್​ಗೆ ನೇರ ಬೆಂಬಲ ನೀಡದಿದ್ದರೂ ಶಾಸಕರ ಮೇಲಿನ ಕೋಪದಿಂದಾಗಿ ಕೆಲ ವಾರ್ಡ್​ಗಳಲ್ಲಿ ಸಹಕಾರ ನೀಡುವ ವಿಶ್ವಾಸ ಹೊಂದಿದ್ದಾರೆ. ಜೆಡಿಎಸ್​ನ ಮತ್ತೊಬ್ಬ ಮುಖಂಡ, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ನಿಲುವು ಸ್ಪಷ್ಟವಾಗಿಲ್ಲ.

ಶ್ರೀನಿವಾಸಪುರದಲ್ಲಿ ಕೈಗೆ ಮಿತ್ರ ಪಕ್ಷ ಎದುರಾಳಿ: ಶ್ರೀನಿವಾಸಪುರದಲ್ಲಿ ಸ್ಪೀಕರ್ ಕೆ.ಆರ್.ರಮೇಶ್​ಕುಮಾರ್ ಮತ್ತು ಮುನಿಯಪ್ಪ ಪುರಸಭೆ ಚುನಾವಣೆ ವಿಚಾರದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡದೆ 23 ಸ್ಥಾನಗಳಿಗೆ ಒಮ್ಮತದಿಂದ ಅಭ್ಯರ್ಥಿ ಆಯ್ಕೆ ಮಾಡಲು ಸ್ಥಳೀಯ ಕೈ ಮುಖಂಡರಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದರು. ಕೈನ 22, ಜೆಡಿಎಸ್​ನ 22 ನಾಮಪತ್ರ ಸಿಂಧುವಾಗಿದೆ. ಲೋಕ ಸಮರದಲ್ಲಿ ಜೆಡಿಎಸ್​ನ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಕೆಎಚ್​ಗೆ ಕೆಲಸ ಮಾಡಿದ್ದಾರೆ. ಪುರಸಭೆ ಚುನಾವಣೆಯಲ್ಲಿ ಇದಕ್ಕೆ ಋಣ ಸಂದಾಯವಾದರೂ ಆಗಬಹುದು. ಬಿಜೆಪಿ 9, ಬಿಎಸ್​ಪಿ 5 ಹಾಗೂ ಸಿಪಿಐಎಂ 4ರಲ್ಲಿ ಸ್ಪರ್ಧಿಸಿದ್ದು, ಅಂತಿಮವಾಗಿ ಎಷ್ಟು ಜನ ಕಣದಲ್ಲಿ ಉಳಿಯುತ್ತಾರೆಂಬುದು ಮೇ 20ಕ್ಕೆ ಖಾತರಿಯಾಗಲಿದೆ.

ಮಾಲೂರಿನಲ್ಲಿ ಕೈ-ಬಿಜೆಪಿ ನೇರ ಸ್ಪರ್ಧೆ: ಮಾಲೂರಿನಲ್ಲಿ ಕೈ 24, ಜೆಡಿಎಸ್ 4, ಬಿಜೆಪಿ 27 ವಾರ್ಡ್​ಗಳಲ್ಲಿ ಸ್ಪರ್ಧಿಸಿದ್ದು ಇದರಲ್ಲಿ ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡರ 10 ಬೆಂಬಲಿಗರಿಗೆ ಟಿಕೆಟ್ ಸಿಕ್ಕಿದೆ. ಲೋಕ ಸಮರದಲ್ಲಿ ಕೆಎಚ್ ಪರ ಕೆಲಸ ಮಾಡಿರುವುದಲ್ಲದೆ ಕೋಚಿಮುಲ್ ಚುನಾವಣೆಯಲ್ಲಿ ಮಾಜಿ ಶಾಸಕ ಮಂಜುನಾಥಗೌಡರ ಬೆಂಬಲಿಗ ಅಭ್ಯರ್ಥಿಯನ್ನು ಸೋಲಿಸಿ ಮರು ಆಯ್ಕೆಯಾಗಿರುವ ಶಾಸಕ ಕೆ.ವೈ.ನಂಜೇಗೌಡರಿಗೆ ಪುರಸಭೆ ಚುನಾವಣೆ ಸವಾಲಾಗಿದೆ.

ಪುರಸಭೆ ವಶಕ್ಕೆ ಹೊಂದಾಣಿಕೆ: ಮಂಜುನಾಥಗೌಡ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದು, ಪುರಸಭೆ ವಶಕ್ಕೆ ಪಡೆಯಲು ತಂತ್ರ ರೂಪಿಸುತ್ತಿದ್ದಾರೆ. ಅವರು ಬಿಜೆಪಿ ಸೇರಿರುವುದು ಪಕ್ಷದ ಕೆಲ ಮುಖಂಡರಿಗೆ ಇಷ್ಟವಿಲ್ಲ, ಇದನ್ನು ಬಂಡವಾಳ ಮಾಡಿಕೊಂಡು ತಮ್ಮ ವೈರಿಗೆ ಮತ್ತೊಮ್ಮೆ ತಿರುಗೇಟು ನೀಡಲು ನಂಜೇಗೌಡ ಪ್ರಯತ್ನಿಸುತ್ತಿದ್ದಾರೆ.

ಮಂಜುನಾಥಗೌಡ ಜೆಡಿಎಸ್ ಬಿಟ್ಟಿರುವುದರಿಂದ ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ಜೆಡಿಎಸ್​ಗೆ 4 ವಾರ್ಡ್ ಬಿಟ್ಟುಕೊಡುವ ಮೂಲಕ ಕಾಂಗ್ರೆಸ್ ಔದಾರ್ಯ ತೋರಿದೆ.

23ರ ನಂತರ ಅಸಲಿ ಆಟ: ಮೇ 23ಕ್ಕೆ ಲೋಕಸಭೆಯ ಫಲಿತಾಂಶ ಪ್ರಕಟವಾಗಲಿದ್ದು, ಕೈ, ಜೆಡಿಎಸ್ ಮತ್ತು ಬಿಜೆಪಿ ಅಸಲಿ ಆಟ ಆರಂಭಿಸಲು ಇನ್ನಷ್ಟು ಮಸಲತ್ತು ಮಾಡಬಹುದು. ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ 23ರ ನಂತರ ಸಕ್ರಿಯವಾಗಲಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

Leave a Reply

Your email address will not be published. Required fields are marked *